ಬಿಬಿಎಂಪಿಗೆ ಕಾಮಗಾರಿ ಪೂರ್ಣಕ್ಕೆ 2 ತಿಂಗಳಷ್ಟೇ ಅವಕಾಶ

palike works
Published on

ಬೆಂಗಳೂರು: ಮಹಾನಗರದಲ್ಲಿ ಬಿಬಿಎಂಪಿ ಕೈಗೆತ್ತಿಕೊಂಡಿರುವ ವಿವಿಧ ಕಾಮಗಾರಿಗಳಲ್ಲಿ ಹಲವು ಅಪೂರ್ಣಗೊಂಡಿದ್ದು, ಅವುಗಳನ್ನು ಈ ಬಾರಿಯ ಮಳೆಗಾಲಕ್ಕೆ ಮುನ್ನ ಪೂರ್ಣಗೊಳಿಸಲು ಎರಡು ತಿಂಗಳಷ್ಟೇ ಬಾಕಿ ಇದೆ. ಈ ಗಡುವಿನೊಳಗೆ ಕಾಮಗಾರಿಗಳನ್ನು ಪೂರ್ತಿ ಮಾಡದಿದ್ದಲ್ಲಿ ಈ ವರ್ಷಾಂತ್ಯದವರೆಗೂ ಮುಂದುವರಿಯುವ ಸಾಧ್ಯತೆ ಇದೆ.

ಈ ವರ್ಷ ಬೇಸಿಗೆಯು ಅವಧಿಗೆ ಮುನ್ನವೇ ಆರಂಭವಾಗುವ ಲಕ್ಷಣಗಳು ಗೋಚರಿಸಿದೆ. ಮುಂಗಾರು ಮಳೆ ಜೂನ್ ಮೊದಲ ವಾರದಿಂದ ಆರಂಭವಾಗಲಿದ್ದರೂ, ಪೂರ್ವ ಮುಂಗಾರು ಏಪ್ರಿಲ್ ತಿಂಗಳಾಂತ್ಯದಿಂದಲೇ ಶುರುವಾಗಲಿದೆ. ಅಂದರೆ, ಪಾಲಿಕೆಗೆ ಕಾಮಗಾರಿ ಕೈಗೊಳ್ಳಲು ಇನ್ನು 2 ತಿಂಗಳು ಮಾತ್ರ ಅವಕಾಶ ಸಿಗಲಿದೆ. ಆಮೇಲೆ ಮಳೆಯದ್ದೇ ಕಾರುಬಾರು. ರಾಜಧಾನಿಯಲ್ಲಿ ಮಳೆಗಾಲ ಅಕ್ಟೋಬರ್‌ವರೆಗೂ ಇರುವ ಕಾರಣ ಆ ಅವಧಿಯಲ್ಲಿ ಸಿವಿಲ್ ಕೆಲಸ ಸೇರಿ ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗದು. ಕೆಲ ದಿನಗಳ ಮಟ್ಟಿಗೆ ಕಾಮಗಾರಿ ನಡೆಸಿದರೂ, ಧುತ್ತೆಂದು ಮಳೆ ಸುರಿಯುತ್ತದೆ. ಒಂದೆರಡು ದಿನ ಬಿಡುವು ನೀಡಿದರೂ, ಮತ್ತೆ ವರುಣಾರ್ಭಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ಕಾಣಬಹುದು. ಇದು ಇತ್ತೀಚಿನ ವರ್ಷಗಳಲ್ಲಿ ಅಧಿಕಾರಿಗಳ ಅನುಭವಕ್ಕೆ ಬಂದಿದ್ದರೂ, ಮಳೆಗಾಲಕ್ಕೆ ಮುನ್ನ ಕೆಲಸ ಪೂರ್ಣಗೊಳಿಸುವ ಇಚ್ಛಾಶಕ್ತಿ ತೋರಿಸದಿರುವುದು ಕೆಲಸ-ಕಾರ್ಯಗಳು ಅಪೂರ್ಣ ಪಟ್ಟಿ ಸೇರುತ್ತಿವೆ.

ಈ ಮಧ್ಯೆ ಆರ್ಥಿಕ ವರ್ಷ ಪೂರ್ಣಗೊಂಡು ಹೊಸ ಸಾಲಿನಲ್ಲಿ ಯೋಜನೆಗಳನ್ನು ರೂಪಿಸಲು ಸಿದ್ಧತೆಗಾಗಿ ಬಜೆಟ್ ತಯಾರಿಸಬೇಕಾಗುತ್ತದೆ. ಈ ನೆಪದಿಂದ ಹಾಲಿ ಕಾಮಗಾರಿಗಳ ಮೇಲೆ ನಿಗಾ ಇರಿಸಲು ಅಧಿಕಾರಿಗಳಿಗೆ ಸಾಧ್ಯವಾಗದು. ಜತೆಗೆ ಸೂಕ್ತ ಮೇಲ್ವಿಚಾರಣೆ ಇಲ್ಲದ ಕಾರಣ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿಲ್ಲ. ಈ ಲೋಪವೇ ಕಳಪೆ ಕಾಮಗಾರಿಗ ನಡೆಯಲು ಅವಕಾಶ ನೀಡಿದಂತಿದೆ ಎಂಬ ಆಕ್ಷೇಪ ಕೇಳಿಬಂದಿದೆ.

ತರಾತುರಿ ನಡೆ, ಕಳಪೆ ಕಾಮಗಾರಿಗೆ ಆಸ್ಪದ:

ಪ್ರತೀ ವರ್ಷ ಪಾಲಿಕೆ ಕೈಗೊಳ್ಳುವ ಕೆಲ ಕಾಮಗಾರಿಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳುತ್ತಿಲ್ಲ. ನಾನಾ ಕಾರಣ ನೀಡಿ ಆ ಎಲ್ಲ ಕೆಲಸಗಳನ್ನು ಮುಂದೂಡತ್ತಲೇ ಬರಲಾಗುತ್ತಿದೆ. ಇದರಿಂದ ನಾಗರಿಕರಿಗೆ ಸಮರ್ಪಕವಾಗಿ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈ ನಡೆ ವಿರುದ್ಧ ಸಾರ್ವಜನಿಕರು ಆಕ್ಷೇಪಿಸುತ್ತಾ ಬಂದಿದ್ದರೂ, ಪಾಲಿಕೆ ಮುಖ್ಯಸ್ಥರು ಮಾತ್ರ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಇದರಿಂದಾಗಿ ಅಂತಹ ಕೆಲಸಗಳು ತೆರವಳುತ್ತಲೇ ಸಾಗಿವೆ.

ಆಯಾ ವಾರ್ಷಿಕ ಸಾಲಿನಲ್ಲಿ ಅನುಮೋದನೆ ಪಡೆದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳುವ ರೂಢಿ ಪಾಲಿಕೆ ಅನುಸರಿಸುತ್ತಿದೆ. ಬಜೆಟ್ ಮಂಡಿಸಿ ಅದಕ್ಕೆ ಸರ್ಕಾರದಿಂದ ಒಪ್ಪಿಗೆ ಪಡೆದುಕೊಂಡ ಬಳಿಕವೇ ಟೆಂಡರ್ ಆಹ್ವಾನಿಸಲಾಗುತ್ತಿದೆ. ಆನಂತರ ವಿವಿಧ ಹಂತಗಳಲ್ಲಿ ಕಾರ್ಯಾದೇಶ ನೀಡಲಾಗುತ್ತದೆ. ಈ ಪ್ರಕ್ರಿಯೆ ವೇಳೆಗೆ ವರ್ಷಾಂತ್ಯ ಕಳೆದಿರುತ್ತದೆ. ಇಂತಹ ಪರಿಪಾಠ ಬೆಳೆಸಿಕೊಂಡು ಬಂದಿರುವ ಪಾಲಿಕೆಯು, ಆರ್ಥಿಕ ವರ್ಷದ ಕೊನೆಯಲ್ಲಿ ತರಾತುರಿಯೊಂದಿಗೆ ಕಾಮಗಾರಿ ಪೂರ್ಣಗೊಳಿಸಲು ಅತ್ಯುತ್ಸಾಹ ತೋರಿಸುತ್ತದೆ. ಇದರಿಂದ ಕಾಟಾಚಾರಕ್ಕಾಗಿ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪವೂ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net