ದಸರ, ದೀಪಾವಳಿ ವೇಳೆ ತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿ ಮಾರ್ಗಸೂಚಿ

Vijayavani-Featured-Image
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ದಸರ ಹಾಗೂ ದೀಪಾವಳಿ ಹಬ್ಬದ ವೇಳೆ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಲಿರುವ ಹಿನ್ನೆಲೆಯಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎಂದು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಈ ಎರಡೂ ಹಬ್ಬದ ದಿನಗಳಂದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಪೌರಕಾರ್ಮಿಕರ ರಜೆ ನೋಡಿಕೊಂಡು ಅಗತ್ಯಬಿದ್ದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಕಸ ವಿಲೇವಾರಿ ಸರಿಯಾಗಿ ಕೈಗೊಳ್ಳುವುದು ಸೇರಿ 6 ಅಂಶಗಳ ಮಾರ್ಗಸೂಚಿಯ ನಿರ್ದೇಶನಗಳನ್ನು ಕಟ್ಟುನಿಟಾಗಿ ಪಾಲಿಸಬೇಕು ಎಂದು ಅವರು ಎಲ್ಲ ವಲಯಗಳ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಾರ್ಗಸೂಚಿಯ ಅಂಶಗಳಿವು:

* ಬಾಳೆಕಂದು, ಮಾವಿನ ಎಲೆ, ಹೂವು ಸೇರಿ ಇತರ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ಮಾರುಕಟ್ಟೆಗಳಲ್ಲಿ ಹಸಿ/ಒಣ ತ್ಯಾಜ್ಯ ವಿಂಗಡಿಸಿ ನೀಡಲು ಅರಿವು ಮೂಡಿಸುವುದು.

* ಮಾರುಕಟ್ಟೆಗಳು, ಇತರ ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬದ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ನಿಗಾ ವಹಿಸುವುದು. ವಾರ್ಡ್‌ಗಳಲ್ಲಿ ಘನತ್ಯಾಜ್ಯ ಆರೋಗ್ಯ ಅಧಿಕಾರಿ, ಮಾರ್ಷಲ್‌ಗಳ ತಂಡಗಳನ್ನು ರಚಿಸಿ ನಿತ್ಯ ಪರಿವೀಕ್ಷಿಸಬೇಕು.

* ಹಬ್ಬದ ಪ್ರಯುಕ್ತ ಉತ್ಪತ್ತಿಯಾಗುವ ಹೆಚ್ಚುವರಿ ತ್ಯಾಜ್ಯ ಅಂದಾಜಿಸಿ ಅದನ್ನು ಪೂರ್ಣವಾಗಿ ಸಂಗ್ರಹಿಸಿ ವಿಲೇವಾರಿ ಮಾಡಬೇಕು.

* ಬ್ಲಾಕ್‌ಸ್ಪಾಟ್‌ಗಳಲ್ಲಿ ತ್ಯಾಜ್ಯ ಶೇಖರಣೆಗೊಂಡು ನಾಗರಿಕರಿಗೆ ತೊಂದರೆ ಆಗದಂತೆ ಗಮನ ಹರಿಸುವುದು, ಮಾರುಕಟ್ಟೆ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛಗೊಳಿಸಲು ಕ್ರಮ.

* ಮಾರುಕಟ್ಟೆ ಸಹಿತ ಇತರೆಡೆ ಬಾಳೇಕಂದು, ಮಾವಿನ ಎಲೆ, ಹೂವು ಮತ್ತು ಇತರ ಹಸಿ ತ್ಯಾಜ್ಯವನ್ನು ಆದ್ಯತೆ ಮೇರೆಗೆ ವಾರ್ಡ್‌ಗಳಲ್ಲಿಯೇ ತ್ಯಾಜ್ಯ ಸಂಸ್ಕರಣಾ ಸೌಲಭ್ಯ ಕಲ್ಪಿಸಿಕೊಂಡು ವಿಲೇವಾರಿ ಮಾಡುವುದು.

* ಬಾಳೇಕಂದು, ಮಾವಿನ ಎಲೆ ಹಾಗೂ ಇತರ ಹಸಿರು ತ್ಯಾಜ್ಯವನ್ನು ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿರುವ ಶೆಡ್ಡರ್ಸ್‌ಗಳಿಗೆ ತಪ್ಪದೇ ವಿಲೇವಾರಿ ಮಾಡುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net