ಬಿಬಿಎಂಪಿ ಅತಿಥಿ ಶಿಕ್ಷಕರಿಗಿಲ್ಲ ವೇತನ ಹೆಚ್ಚಳ ಭಾಗ್ಯ

bbmp office
Published on

ಬೆಂಗಳೂರು: ಬಿಬಿಎಂಪಿ ಶಾಲಾ - ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೌರವ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 7 ವರ್ಷದಿಂದ ವೇತನ ಹೆಚ್ಚಳ ಮಾಡದ ಕಾರಣ ಅವರೆಲ್ಲರೂ ಕಡಿಮೆ ಮೊತ್ತದ ಗೌರವಧನದಲ್ಲೇ ಬದುಕು ಸವೆಸುತ್ತಿದ್ದಾರೆ. ದಶಕಗಳಿಂದ ವೇತನ ಬಡ್ತಿ ಕಾಣದ 800ಕ್ಕೂ ಹೆಚ್ಚು ಶಿಕ್ಷಕ/ಉಪನ್ಯಾಸಕರ ನೆರವಿಗೆ ಸರ್ಕಾರ ಕೂಡ ಧಾವಿಸದಿರುವುದು ಅಚ್ಚರಿ ಮೂಡಿಸಿದೆ.

ರಾಜಧಾನಿ ಬೆಂಗಳೂರು ಶೈಕ್ಷಣಿಕ ನಗರವಾಗಿ ಪ್ರಸಿದ್ಧಿ ಪಡೆದಿದೆ. ಆದರೆ, ಪಾಲಿಕೆಯ ಹಲವು ಶಾಲಾ -ಕಾಲೇಜುಗಳು ಶಿಥಿಲಾವಸ್ಥೆಯಲ್ಲಿವೆ. ಇಂತಹ ಸ್ಥಿತಿಯಲ್ಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ಮಾಡುತ್ತಾ ಉತ್ತಮ ಲಿತಾಂಶ ದಾಖಲಿಸುತ್ತಿದ್ದರೂ, ವೇತನ ಹೆಚ್ಚಿಸುವ ಗೋಜಿಗೆ ಹೋಗಿಲ್ಲ. ಪ್ರತಿ ಬಾರಿಯೂ ಪ್ರಸ್ತಾವನೆ ನೀಡುವ ವೇಳೆ ಭರವಸೆ ನೀಡಿ ಸಾಗಹಾಕುವ ಅಧಿಕಾರಿಗಳ ಕಾರ್ಯವೈಖರಿಯಿಂದ ಶಿಕ್ಷಕ ವೃಂದ ಸಾಲ ಮಾಡಿ ಜೀವನೋಪಾಯ ಮಾಡುತ್ತಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ವೇತನ ಹೆಚ್ಚಳ ಸಂಬಂಧ ಮುಷ್ಕರದ ಹಾದಿ ಹಿಡಿದಾಗ ಮಧ್ಯಪ್ರವೇಶಿಸಿದ್ದ ಪಾಲಿಕೆಯ ಮುಖ್ಯ ಆಯುಕ್ತರು, ವೇತನ ಹೆಚ್ಚಳದ ಜತೆಗೆ ಇನ್ನಿತರ ಸೌಲಭ್ಯಗಳನ್ನು ಶೀಘ್ರವೇ ಜಾರಿ ಮಾಡುವ ಭರವಸೆ ನೀಡಿದ್ದರು. ಆದರೀಗ ಆ ವಾಗ್ದಾನದಂತೆ ಪಾಲಿಕೆ ನಡೆದುಕೊಳ್ಳುತ್ತಿಲ್ಲ. ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಅತಿಥಿ ಶಿಕ್ಷಕ-ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪದನಾಮ ಬದಲಾದರೂ ಪಗಾರ ಹೆಚ್ಚಳವಿಲ್ಲ:

ಬಿಬಿಎಂಪಿಯ ಶಾಲಾ-ಕಾಲೇಜುಗಳಲ್ಲಿನ ಶೇ.80 ಮಂದಿ ಶಿಕ್ಷಕ/ಉಪನ್ಯಾಸಕರು ಕಾಯಂ ಸಿಬ್ಬಂದಿ ಅಲ್ಲ. ಇವರ ಪೈಕಿ ಹೆಚ್ಚಿನವರು 2 ದಶಕದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಅತಿಥಿ ಶಿಕ್ಷಕ/ಉಪನ್ಯಾಸಕರಾಗಿ ಪದನಾಮ ಬದಲಿಸಲಾಗಿದೆ. ಆದರೂ, ವೇತನ ಹೆಚ್ಚಳ ಮಾಡಿಲ್ಲ. ಹೊರಗುತ್ತಿಗೆ ಅಡಿಯಲ್ಲಿದ್ದಾಗ ಪಿಎಫ್​​, ಇಎಸ್‌ಐ ಸೌಲಭ್ಯ ಸಿಗುತ್ತಿತ್ತು. ಈಗ ಆ ಸೌಲಭ್ಯಕ್ಕೆ ಕೊಕ್ ನೀಡಲಾಗಿದೆ.

ಅತಿಥಿ ಶಿಕ್ಷಕ/ಉಪನ್ಯಾಸಕ ಪದನಾಮ ಬದಲಿಸಿದ್ದ ವೇಳೆ ತಲಾ 5 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಸೌಲಭ್ಯದ ಭರವಸೆ ನೀಡಲಾಗಿತ್ತು. ಈಗ ಸೌಲಭ್ಯ ಒದಗಿಸದ ಕಾರಣ ಹೆಚ್ಚಿನ ಮಂದಿ ಕುಟುಂಬದವರ ವೈದ್ಯಕೀಯ ಖರ್ಚಿಗೆ ಪಗಾರವನ್ನೆಲ್ಲ ವೆಚ್ಚಮಾಡುವಂತಾಗಿದೆ. ಮಹಿಳಾ ಶಿಕ್ಷಕರಿಗೆ ಹೆರಿಗೆ ರಜೆ ಕೂಡ ಸಿಗದ ಸ್ಥಿತಿ ಇದೆ ಎಂದು ಶಿಕ್ಷಕ ವೃಂದವು ‘ವಿಜಯವಾಣಿ’ ಬಳಿ ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net