

ಬೆಂಗಳೂರು: ನಗರದ ರಸ್ತೆಗಳಲ್ಲಿ ಕಂಡುಬಂದಿರುವ ಗುಂಡಿಗಳನ್ನು ಮುಚ್ಚಲು ಕೊನೆಗೂ ಪಾಲಿಕೆ ಮುಂದಾಗಿದ್ದು, ವಲಯವಾರು ಪತ್ತೆಹಚ್ಚಿರುವ ಸ್ಥಳಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ.
ಕಳೆದೊಂದು ತಿಂಗಳಿಂದ ಮತ್ತೆ ಹಲವು ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸುತ್ತಿದ್ದರೂ, ದುರಸ್ತಿ ಮಾಡುವತ್ತ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರು. ಮುಖ್ಯವಾಗಿ ಇತ್ತೀಚಿನ ಂಗಲ್ ಚಂಡಮಾರುತದ ಪರಿಣಾಮ ಸುರಿದ ಜಿಟಿಜಿಟಿ ಮಳೆಯಿಂದಾಗಿ ರಸ್ತೆಗುಂಡಿ ಮುಚ್ಚಲು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂಬ ನೆಪ ಹೇಳುತ್ತಿದ್ದರು. ಕಳೆದ ವಾರಾಂತ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿ ಅಧಿವೇಶನಕ್ಕೆ ಹೊರಡುವ ಮುನ್ನ ಪಾಲಿಕೆ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮಾಡಿ ಕಾಲಮಿತಿಯೊಳಗೆ ಗುಂಡಿಗಳನ್ನು ಮುಚ್ಚುವಂತೆ ನಿರ್ದೇಶಿಸಿದ್ದರು.
ಇದರ ಬೆನ್ನಲ್ಲೇ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲ ವಲಯಗಳ ಆಯುಕ್ತರ ಸಭೆ ನಡೆಸಿ ಆದ್ಯತೆಯ ಮೇರೆಗೆ ಗುಂಡಿಗಳನ್ನು ದುರಸ್ತಿಗೊಳಿಸುವಂತೆ ತಾಕೀತು ಮಾಡಿದ್ದರು. ಡಾಂಬರು ತಯಾರಿಕೆ ಘಟಕಗಳಿಂದ ನೇರವಾಗಿ ಗುಂಡಿ ಬಿದ್ದಿರುವ ಸ್ಥಳಗಳಿಗೆ ವಾಹನಗಳ ಮೂಲಕ ಡಾಂಬರು ತರಿಸಿ ಗುಂಡಿಗಳನ್ನು ಮುಚ್ಚುವಂತೆ ಖಡಕ್ ಸೂಚನೆ ನೀಡಲಾಗಿತ್ತು. ಇದರನ್ವಯ ಆಯಾ ವಲಯಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹೊಣೆ ಹೊತ್ತಿದ್ದಾರೆ.
ಹೊರವಲಯದಲ್ಲಿ ಗುಂಡಿಗಳು ಹೆಚ್ಚು:
ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ಗುಂಡಿಗಳು ಇರುವುದಾಗಿ ಮಾಹಿತಿ ಇದೆ. ಜತೆಗೆ ಮೇಲ್ಪದರ ಕಿತ್ತುಬಂದಿರುವ ಸ್ಥಳಗಳು ಸಾಕಷ್ಟಿವೆ. ಇವುಗಳ ಜತೆಗೆ ವಾರ್ಡ್ ಮಟ್ಟದ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿದ್ದು, ಹೊರವಲಯಗಳಲ್ಲಿ ಹೆಚ್ಚು ಸಮಸ್ಯೆ ಕಂಡುಬಂದಿದೆ. ವೈಟ್ ಟಾಪಿಂಗ್‌ಗೆ ಆಯ್ಕೆ ಆಗಿರುವ ರಸ್ತೆಗಳು ಹಾಗೂ ಸದ್ಯದಲ್ಲೇ ಅಭಿವೃದ್ಧಿಯಾಗಲಿರುವ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮಾತ್ರ ಮುಚ್ಚಲಾಗುತ್ತಿದೆ. ನಗರದ ಕೋರ್ ಪ್ರದೇಶದಲ್ಲಿ ಹೆಚ್ಚು ವಾಹನಗಳ ಓಡಾಟ ಇರುವುದರಿಂದ ಇಲ್ಲೆಲ್ಲ ರಸ್ತೆಗಳು ಹಾಳಾಗಿರುವೆಡೆ ಮೇಲ್ಪದರದ ಡಾಂಬರು ಕಾರ್ಯಕ್ಕೆ ಒತ್ತು ನೀಡಲಾಗಿದೆ. ಸೋಮವಾರ ಮಧ್ಯರಾತ್ರಿ ಹೈಗ್ರೌಂಡ್ಸ್ ಜಂಕ್ಷನ್‌ನಲ್ಲಿ ಡಾಂಬರು ಹಾಕಲಾಗಿದೆ. ಇದೇ ರೀತಿ ಟೌನ್‌ಹಾಲ್ ಸೇರಿ ವಿವಿಧ ಸ್ಥಳಗಳಲ್ಲಿ ಹೆಚ್ಚು ಗುಂಡಿಯಾಗಿರುವ ಸ್ಥಳಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ಣವಾಗದ ಸಮೀಕ್ಷೆ:
ನಗರದಲ್ಲಿ ರಸ್ತೆಗುಂಡಿಗಳನ್ನು ಪತ್ತೆಹಚ್ಚಲು ಎಲ್ಲ ವಲಯಗಳಲ್ಲಿ ಸಮೀಕ್ಷೆ ಕೈಗೊಳ್ಳುವಂತೆ ಕೇಂದ್ರ ಕಚೇರಿಯಿಂದ ಎಲ್ಲ ವಲಯಗಳ ಆಯುಕ್ತರಿಗೆ ಸೂಚಿಸಲಾಗಿತ್ತು. ಕಳೆದ ತಿಂಗಳೇ ಈ ಸೂಚನೆ ನೀಡಿದ್ದರೂ, ಈವರೆಗೂ ವಲಯವಾರು ನಿಖರವಾದ ರಸ್ತೆಗುಂಡಿ ಸಂಖ್ಯೆಯನ್ನು ಒಳಗೊಂಡ ಸಮೀಕ್ಷಾ ವರದಿ ಸಲ್ಲಿಕೆಯಾಗಿಲ್ಲ. ಆದರೂ, ನಿತ್ಯ ಗುಂಡಿ ಮುಚ್ಚುತ್ತಿರುವ ಮಾಹಿತಿಯನ್ನು ಕೇಂದ್ರ ಕಚೇರಿಗೆ ನೀಡಲಾಗುತ್ತಿದೆ. ಈ ವಾರಾಂತ್ಯದೊಳಗೆ ಸಮೀಕ್ಷಾ ವರದಿ ಕೈಸೇರುವ ನಿರೀಕ್ಷೆ ಇದೆ ಎಂಬ ಸಮಜಾಯಿಷಿಯನ್ನು ಹಿರಿಯ ಅಧಿಕಾರಿಗಳು ನೀಡಿದ್ದಾರೆ.