ರಸ್ತೆಗುಂಡಿ ಮುಚ್ಚಲು ಬಿಬಿಎಂಪಿ ಫೇಲ್

raste gundi
Published on

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಗಡುವಿನೊಳಗೆ ಮುಚ್ಚಲು ಬಿಬಿಎಂಪಿ ವಿಫಲವಾಗಿದೆ.

ಇತ್ತೀಚಿಗೆ (ಮೇ 22) ಸಿಎಂ ಹಾಗೂ ಡಿಸಿಎಂ ಸಿಟಿ ರೌಂಡ್ಸ್ ಕೈಗೊಂಡಿದ್ದ ವೇಳೆ ನಗರದಲ್ಲಿರುವ ಎಲ್ಲ ರಸ್ತೆಗುಂಡಿಗಳನ್ನು ಮುಚ್ಚಲು ಮೇ 31ರವರೆಗೆ ಗಡುವು ನೀಡಿತ್ತು. ಪಾಲಿಕೆಯ ಎಂಟು ವಲಯಗಳ ಪೈಕಿ ದಾಸರಹಳ್ಳಿ ಹಾಗೂ ಆರ್.ಆರ್.ನಗರ ವಲಯಗಳಿಗೆ ಮಾತ್ರ ಜೂ.4 ವರೆಗೆ ಗುಡುವು ಇದೆ. ಇದರ ಹೊರತಾಗಿಯೂ ಇನ್ನೂ ನೂರಾರು ಗುಂಡಿಗಳನ್ನು ಹಲವೆಡೆ ಇದ್ದರೂ, ಅವುಗಳನ್ನು ಸರಿಪಡಿಸಲು ಪಾಲಿಕೆ ಸಮರ್ಪಕವಾಗಿ ಕೆಲಸ ಮಾಡದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶನಿವಾರದಿಂದಲೇ ನಗರದಲ್ಲಿ ಭಾರೀ ಮಳೆ ಆರಂಭವಾಗಿದ್ದು, ವಾರ ಕಾಲ ಮುಂದುವರಿಯಲಿದೆ. ಈ ಹಂತದಲ್ಲಿ ಸತತ ಮಳೆಯಿಂದ ಇನ್ನಷ್ಟು ಗುಂಡಿಗಳು ಉಂಟಾಗುತ್ತವೆ. ಸಣ್ಣ ಗುಂಡಿಗಳ ಮೇಲೆ ನಿರಂತರವಾಗಿ ವಾಹನಗಳು ಓಡಾಡುವ ಕಾರಣ ಅವುಗಳನ್ನು ಮತ್ತಷ್ಟು ವಿಸ್ತಾರಗೊಂಡು ದೊಡ್ಡ ಗುಂಡಿಗಳು ಉಂಟಾಗದೆ ಇರದು. ನಗರದಲ್ಲಿ ಮಳೆ ಬೀಳುವ ಮುನ್ನ ರಸ್ತೆಗಳನ್ನು ಸರಿಪಡಿಸಬೇಕು ಎಂಬ ಸೂಚನೆ ಇದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಗಂಭೀರತೆ ಹೊಂದದ ಕಾರಣ ರಸ್ತೆಗುಂಡಿ ಸಮಸ್ಯೆ ಮುಂದುವರಿದಿದೆ.

3,225 ಗುಂಡಿ ಮುಚ್ಚಿರುವ ಮಾಹಿತಿ:

ಬಿಬಿಎಂಪಿ ವಾರ್ಡ್‌ಮಟ್ಟದ ರಸ್ತೆಗಳಲ್ಲಿ 5,500 ಗುಂಡಿಗಳು ಹಾಗೂ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ 557 ಗುಂಡಿಗಳನ್ನು ಸರ್ವೆ ಮೂಲಕ ಗುರುತಿಸಲಾಗಿದೆ. ಜತೆಗೆ 67 ಕಡೆಗಳಲ್ಲಿ ರಸ್ತೆಗಳು ಕಿತ್ತುಹೋಗಿದ್ದವು. ಈ ಪೈಕಿ ಒಂದು ವಾರದಲ್ಲಿ 3,225 ಗುಂಡಿಗಳನ್ನು ಮುಚ್ಚಲಾಗಿದೆ. ಇವುಗಳ ಜತೆಗೆ ಹೊಸದಾಗಿ 1,500 ಗುಂಡಿಗಳು ಸೇರ್ಪಡೆಯಾಗಿವೆ. ದಾಸರಹಳ್ಳಿ, ಆರ್.ಆರ್.ನಗರ ವಲಯಗಳಲ್ಲಿ ಜೂ.4ರವರೆಗೆ ಗಡುವು ಇದ್ದು, ಅಲ್ಲಿ 2,400 ಗುಂಡಿಗಳನ್ನು ಮುಚ್ಚಬೇಕಿದೆ. ಇದನ್ನು ಹೊರತುಪಡಿಸಿ ಇತರ ವಲಯಗಳಲ್ಲಿ ಹೊಸ ಗುಂಡಿಗಳು ಸೇರಿ 1,600 ಗುಂಡಿಗಳು ಬಾಕಿದೆ. ಇವುಗಳನ್ನು ಶೀಘ್ರವೇ ಮುಚ್ಚಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಹವಾಮಾನ ಇಲಾಖೆ ಮಾಹಿತಿಯಂತೆ ಜೂನ್ ಮೊದಲ ವಾರವಿಡೀ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ. ಇದನ್ನು ಗಮನಿಸಿಕೊಂಡು ಗುಂಡಿ ಮುಚ್ಚಲಾಗುತ್ತಿದೆ. ವೆಟ್ ಮಿಕ್ಸ್ ಬಳಸಿ ಗುಣಮಟ್ಟದ ಕೆಲಸ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ರಸ್ತೆಗಳಲ್ಲಿ ಬಿದ್ದ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಸೈಡ್ ಡ್ರೈನ್ಸ್ ಹಾಗೂ ಕಾಲುವೆಗಳನ್ನು ಸ್ವಚ್ಚ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಮುಂಗಾರು ಮಳೆಯಿಂದ ಮತ್ತಷ್ಟು ಗುಂಡಿ ಸೃಷ್ಟಿ?:

ನಗರದಲ್ಲಿ ಮುಂಗಾರು ಅವಧಿಯಲ್ಲಿ ಭಾರೀ ಮಳೆಯಾಗುತ್ತದೆ. ಆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಗುಂಡಿಗಳು ಉಂಟಾಗುವುದು ಸ್ವಾಭಾವಿಕ. ಗುಂಡಿ ಉಂಟಾದ ಬಳಿಕ ಅವುಗಳನ್ನು ಶೀಘ್ರವೇ ಪತ್ತೆ ಹಚ್ಚಿ ಗುಣಮಟ್ಟದ ಕಾಮಗಾರಿ ಕೈಗೊಂಡಲ್ಲಿ ದೊಡ್ಡ ಗುಂಡಿಗಳು ಆಗದಂತೆ ತಡೆಯಬಹುದು. ಈ ಅವಧಿಯಲ್ಲಿ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಮೈಮರೆತಲ್ಲಿ ನಗರದ ರಸ್ತೆಗಳು ಗುಂಡಿಮುಕ್ತ ಆಗುವುದು ದೂರದ ಮಾತಾಗಲಿದೆ ಎಂದು ನಾಗರಿಕರು ದೂರಿದ್ದಾರೆ.

ಪಾಲಿಕೆಯ ಇಂಜಿನಿಯರ್‌ಗಳು ಸತತವಾಗಿ ಕೆಲಸ ಮಾಡುತ್ತಿದ್ದು, ರಸ್ತೆಗುಂಡಿಗಳನ್ನು ಪ್ರಥಮ ಆದ್ಯತೆಯನ್ನಾಗಿ ಪರಿಗಣಿಸಿದ್ದಾರೆ. ಆದರೂ, ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ, ಮೇಲ್ಮನೆ ಚುನಾವಣೆಗೆ ನಿಯೋಜನೆ ಆಗಿರುವುದರಿಂದ ಕೆಲವೆಡೆ ಗುಂಡಿ ಮುಚ್ಚುವುದು ನಿಧಾನ ಆಗಿದೆ. ಹೊಸದಾಗಿ ಪತ್ತೆ ಹಚ್ಚಿರುವ ಗುಂಡಿಗಳನ್ನು ಕೂಡ ಆದಷ್ಟು ಬೇಗ ಮುಚ್ಚುವಂತೆ ನಿರ್ದೇಶನ ನೀಡಲಾಗಿದೆ.

- ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net