ವರ್ಷಾಂತ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಯುವುದು ಅನುಮಾನ

bbmp election
Published on

ಆರ್​.ತುಳಸಿಕುಮಾರ್​

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಈ ವರ್ಷಾಂತ್ಯದೊಳಗೆ ಚುನಾವಣೆ ನಡೆಸಲು ಉತ್ಸುಕತೆ ತೋರಿದ್ದ ರಾಜ್ಯ ಸರ್ಕಾರಕ್ಕೆ ವಾರ್ಡ್‌ವಾರು ಮೀಸಲು ನಿಗದಿಯೇ ಅಡ್ಡಿಯಾಗುವ ಸಾಧ್ಯತೆ ಇದೆ. ಅದರಲ್ಲೂ ಪಾಲಿಕೆಯಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಮೀಸಲು ಕಲ್ಪಿಸುವ ಹಿನ್ನೆಲೆಯಲ್ಲಿ ನಡೆಸಿರುವ ಕಸರತ್ತು ಇನ್ನೂ ಪೂರ್ಣಗೊಳ್ಳದ ಕಾರಣ ಗಡುವಿನೊಳಗೆ ಚುನಾವಣೆ ನಡೆಯುವುದು ಅನುಮಾನ ಮೂಡಿಸಿದೆ.

ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತಡಮಾಡದೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಹಲವು ಬಾರಿ ನಿರ್ದೇಶನ ನೀಡಿದೆ. ಇದರ ಹೊರತಾಗಿಯೂ ಸರ್ಕಾರ ವಿವಿಧ ಕಾರಣಗಳನ್ನು ನ್ಯಾಯಾಲಯಕ್ಕೆ ನೀಡಿ ಕಾಲಾವಕಾಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೂ, ಚುನಾವಣಾ ಸಂಬಂಧಿ ಪ್ರಕ್ರಿಯೆನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇಟ್ಟಂತಿಲ್ಲ ಎಂಬುದು ಅದರ ಕಾರ್ಯವೈಖರಿಯಿಂದ ವೇದ್ಯವಾಗಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಬಿಸಿಗೆ ಮೀಸಲು ನಿಗದಿ ಮಾಡುವ ತೀರ್ಮಾನವಾಗಿದೆ. ಇದರನ್ವಯ ಒಟ್ಟು ಸ್ಥಾನಗಳ ಪೈಕಿ ಮೂರನೇ ಒಂದರಷ್ಟು ಸ್ಥಾನಗಳಿಗೆ ಮೀಸಲು ಅನ್ವಯವಾಗಲಿದೆ. ಜತೆಗೆ 243 ವಾರ್ಡ್‌ಗಳಿಗೆ 81 ಸ್ಥಾನಗಳನ್ನು ಒಬಿಸಿಗೆ ಮೀಸಲಿರಿಸಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ್ದು, ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಕಡಿತಗೊಳಿಸಿದೆ. ಹೊಸ ಸಂಖ್ಯೆಗೆ ಅನುಗುಣವಾಗಿ 75 ವಾರ್ಡ್‌ಗಳಿಗೆ ಒಬಿಸಿ ಮೀಸಲು ನಿಗದಿಯಾಗಬೇಕಿದೆ. ಆದರೆ, ಒಬಿಸಿ ಮೀಸಲನ್ನು ಹಿಂದುಳಿದ ವರ್ಗ ‘ಎ’ ಹಾಗೂ ಹಿಂದುಳಿದ ವರ್ಗ ‘ಬಿ’ಗೆ ವಿಂಗಡಿಸಿಲ್ಲ. ‘ಎ’ ಹಾಗೂ ‘ಬಿ’ ವರ್ಗಕ್ಕೆ ಕ್ರಮವಾಗಿ 80:20 ಅನುಪಾತದಲ್ಲಿ ಸ್ಥಾನಗಳನ್ನು ನಿಗದಿ ಮಾಡಬೇಕಿದೆ. ಇದಕ್ಕಾಗಿ ಸ್ಪಷ್ಟ ಮಾರ್ಗಸೂಚಿ ಇಲ್ಲದ ಕಾರಣ ಒಟ್ಟಾರೆ ಒಬಿಸಿ ಮೀಸಲು ನಿಗದಿ ಅಸ್ಪಷ್ಟವಾಗಿದೆ.

ಹಿಂದುಳಿದ ವರ್ಗಕ್ಕೆ ಮೀಸಲು ನಿಗದಿ ಮಾಡಲೆಂದೇ ನಿವೃತ್ತ ನ್ಯಾ. ಕೆ.ಭಕ್ತವತ್ಸಲ ಸಮಿತಿಯು ತನ್ನ ಶಿಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಒಬಿಸಿ ಮೀಸಲು ವಿಷಯ ಚರ್ಚೆಗೆ ಬಂದಿದ್ದರೂ, ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರದ ಈ ನಡೆಯಿಂದಾಗಿ ರಾಜ್ಯ ಚುನಾವಣಾ ಆಯೋಗ ಕೂಡ ಬಿಬಿಎಂಪಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಸಾಧ್ಯವಾಗಿಲ್ಲ.

ಅಂಕಿ-ಅಂಶ ಇಲ್ಲದೆ ಮೀಸಲು ನಿಗದಿಗೆ ಅಡ್ಡಿ:

ಇತ್ತೀಚಿಗೆ ಬಿಬಿಎಂಪಿಗೆ 225 ವಾರ್ಡ್‌ಗಳೆಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದರನ್ವಯ 1/3ನೇ ಭಾಗದಷ್ಟು ಸ್ಥಾನಗಳನ್ನು ಒಬಿಸಿಗೆ ನಿಗದಿಪಡಿಸಲು ಯಾವುದೇ ಅಡ್ಡಿ ಆಗದು. ಆದರೆ, ಹಿಂದುಳಿದ ವರ್ಗ ‘ಎ’ ಹಾಗೂ ಹಿಂದುಳಿದ ವರ್ಗ ‘ಬಿ’ಗೆ ಸ್ಥಾನಗಳನ್ನು ಮೀಸಲು ಕಲ್ಪಿಸಲು ಸ್ಪಷ್ಟ ಮಾರ್ಗಸೂಚಿ ಇಲ್ಲ. ಸ್ಥಳೀಯ ಸಂಸ್ಥೆಗಳಿಗೆ ಮೀಸಲು ನಿಗದಿ ಪ್ರಕಾರ ಬಿಬಿಎಂಪಿಗೆ ಒಬಿಸಿ ಸ್ಥಾನಗಳ ಮೀಸಲಿರಿಸಲು ಜನಗಣತಿಯೇ ಆಧಾರವಾಗಿದೆ. ಆದರೆ, ಹಿಂದಿನ ಜನಗಣತಿ ವೇಳೆ ಎಸ್‌ಸಿ/ಎಸ್‌ಟಿಗೆ ಸಂಬಂಧಿಸಿದ ಅಂಕಿ-ಅಂಶ ಇದೆಯಾದರೂ ಒಬಿಸಿ ಮಾಹಿತಿ ಇಲ್ಲ. ಈ ಕೊರತೆ ನೀಗಿಸಿಕೊಳ್ಳಲು ಜಾತಿಗಣತಿಯ ವರದಿಯನ್ನು ಆಧಾರವಾಗಿಟ್ಟು ಕೊಳ್ಳಬಹುದಾಗಿದೆ. ಸದ್ಯ ಜಾತಿಗಣತಿ ವರದಿಯನ್ನು ಸರ್ಕಾರ ಈವರೆಗೂ ಸ್ವೀಕರಿಸದಿರುವ ಕಾರಣ ಅದರ ಅಂಕಿ-ಅಂಶವನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ಶೀಘ್ರವೇ ವರದಿಯನ್ನು ಒಪ್ಪಿಕೊಳ್ಳಲಾಗುವುದೆಂದು ಸರ್ಕಾರ ಹೇಳಿತ್ತಿದ್ದರೂ, ಅದರಿಂದ ಭವಿಷ್ಯದಲ್ಲಿ ಅಥವಾ ಮುಂಬರುವ ಚುನಾವಣೆಗಳ ಮೇಲೆ ಯಾವ ಪರಿಣಾಮ ಉಂಟಾಗಲಿದೆ ಎಂಬ ಜಿಜ್ಞಾಸೆ ಎದ್ದಿದೆ.

ಹೀಗಾಗಿ ಇನ್ನೂ ಒಂದೆರಡು ತಿಂಗಳ ಕಾಲ ಮೌನವಾಗಿದ್ದಲ್ಲಿ ಲೋಕಸಭೆ ಚುನಾವಣೆಯ ಕಾವು ಏರತೊಡಗುತ್ತದೆ. ಆ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಅಷ್ಟು ಸೂಕ್ತ ಅಲ್ಲ ಎಂಬ ಸಕಾರಣವನ್ನು ಸರ್ಕಾರ ನೀಡಲು ಸಾಧ್ಯವಿದೆ. ಈ ದೂರಾಲೋಚನೆಯಿಂದಲೇ ಸರ್ಕಾರ ಪಾಲಿಕೆಯಲ್ಲಿ ಒಬಿಸಿ ಮೀಸಲು ನಿಗದಿ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ ಎಂಬ ಆಕ್ಷೇಪಾರ್ಹ ಮಾತುಗಳು ಪ್ರತಿಪಕ್ಷಗಳಿಂದ ಕೇಳಿಬಂದಿದೆ.

ಪುರಪಿತೃಗಳಿಲ್ಲದೆ 3 ವರ್ಷ ಪೂರ್ಣ:

ಬಿಬಿಎಂಪಿ ಆಡಳಿತಾವಧಿ 2020ರ ಸೆ.10ರಂದೇ ಮುಗಿದಿದೆ. ಮೂರು ವರ್ಷದ ಬಳಿಕವೂ ಚುನಾವಣೆ ನಡೆಸದಿರುವುದಕ್ಕೆ ನ್ಯಾಯಾಲಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಬಿಬಿಎಂಪಿ ಕಾಯ್ದೆ ತಿದ್ದುಪಡಿ, ವಾರ್ಡ್‌ಗಳ ಸಂಖ್ಯೆ ಹೆಚ್ಚಳ, ಮೀಸಲು ನಿಗದಿ ಕಾರಣದಿಂದ ಸಾಕಷ್ಟು ಸಮಯ ವ್ಯರ್ಥವಾಗಿದೆ. ಇದರಿಂದಾಗಿ ಪಾಲಿಕೆಯಲ್ಲಿ ಆಡಳಿತ ವ್ಯವಸ್ಥೆ ಹಳಿತಪ್ಪಿದೆ. ನಾಗರಿಕರಿಗೆ ಸರಿಯಾದ ಸಮಯಕ್ಕೆ ಸೌಲಭ್ಯಗಳು ಸಿಗದೆ ಸಮಸ್ಯೆಗೆ ಒಳಗಾಗಿದ್ದಾರೆ. ಇದನ್ನರಿತು ಬೇಗನೆ ಚುನಾವಣೆ ನಡೆಸಿದರೆ ಜನರು ಪುರಪಿತೃಗಳ ಬಳಿ ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆಯಲು ಸಾಧ್ಯವಿದೆ ಎಂಬ ವಾದ ಮುನ್ನೆಲೆಗೆ ಬಂದಿದೆ.

ಆಡಳಿತ ಪಾಳಯದಲ್ಲಿ ಕಾಣದ ಉತ್ಸಾಹ:

ಐದು ಗ್ಯಾರಂಟಿಗಳ ಮೇಲೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ಸಿಯಾಗಿರುವ ಕಾಂಗ್ರೆಸ್ ಯಶಸ್ಸಿನ ಅಲೆ ಮೇಲೆ ತೇಲುತ್ತಿದೆ. ಈ ಯಶಸ್ಸನ್ನು ಬಿಬಿಎಂಪಿ ಚುನಾವಣೆಯಲ್ಲೂ ಪುನರಾರ್ವತನೆಯಾಗುವಂತೆ ಮಾಡಲು ಆಡಳಿತಾರೂಢ ಪಕ್ಷ ಆಲೋಚಿಸಿದೆ. ಇದಕ್ಕಾಗಿ ಹಿರಿಯ ಮುಖಂಡರ ನೇತೃತ್ವದಲ್ಲಿ ಸಮಿತಿ ರಚಿಸಿ ಪಕ್ಷದ ಶಾಸಕರಿಗೂ ಹೊಣೆ ನೀಡಲಾಗಿತ್ತು. ಆದರೆ, ಬದಲಾದ ರಾಜಕೀಯ ವಿದ್ಯಮಾನಗಳಿಂದ ಕಾಂಗ್ರೆಸ್ ಪಾಲಿಕೆ ಚುನಾವಣೆ ಬದಲು ಲೋಕಸಭೆ ಚುನಾವಣೆಯತ್ತ ಹೆಚ್ಚು ಲಕ್ಷ್ಯ ನೀಡುತ್ತಿರುವುದು ಬಿಬಿಎಂಪಿಯಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬರಲು ಮಂದಿನ ವರ್ಷದವರೆಗೂ ಕಾಯುವ ಸಾಧ್ಯತೆ ನಿಚ್ಚಳವಾಗಿದೆ.

ಕಾಮಗಾರಿಗಳಿಗೆ ಸಿಗದ ವೇಗ:

ಬಿಬಿಎಂಪಿ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಆಡಳಿತಾರೂಢ ಪಕ್ಷವು ಜನರ ಒಲವು ಗಿಟ್ಟಿಸಲು ಅಭಿವೃದ್ಧಿ ಯೋಜನೆಗಳ ಅಜೆಂಡಾ ಮುಂದಿಡುವುದು ಸಹಜ. ಸದ್ಯ ಮಹಾನಗರದಲ್ಲಿ ಮೆಟ್ರೋ, ಉಪನಗರ ರೈಲು ಯೋಜನೆ ಸಹಿತ ಹಿಡಿಯಷ್ಟು ಕಾಮಗಾರಿಗಳನ್ನು ಹೊರತುಪಡಿಸಿದರೆ ಇನ್ನ್ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಕೂಡ ಚಾಲನೆ ಪಡೆದಿಲ್ಲ. ಇನ್ನೊಂದೆಡೆ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಆಗದ ಕಾರಣ ಹೊಸ ಕಾಮಗಾರಿಗಳಿಗೆ ಚಾಲನೆ ಸಿಕ್ಕಿಲ್ಲ. ಜನರಿಗೆ ಅಭಿವೃದ್ಧಿಯ ಕೆಲಸ ತೋರಿಸಿ ಮತ ಪಡೆಯಲು ಕಾಂಗ್ರೆಸ್ ಇಚ್ಛಾಶಕ್ತಿ ತೋರದ ಕಾರಣ ಪಾಲಿಕೆ ಚುನಾವಣೆ ಕಾವು ಕ್ಷೀಣಿಸಿದೆ ಎಂಬ ಮಾತು ಆಡಳಿತ ಹಾಗೂ ಪ್ರತಿಪಕ್ಷ ಕಾರ್ಯಕರ್ತರಿಂದ ಕೇಳಿಬಂದಿದೆ.

ಮೀಸಲು ಪಟ್ಟಿಗೆ ಕಾದುಕುಳಿತ ಆಯೋಗ:

ಪ್ರಸ್ತುತ ರಾಜ್ಯ ಚುನಾವಣಾ ಆಯೋಗ ಬಿಬಿಎಂಪಿಗೆ ಚುನಾವಣೆ ನಡೆಸಲು ಸಿದ್ಧವಿದೆ. 225 ವಾರ್ಡ್‌ಗಳಲ್ಲಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ವಿಧಾನಸಭೆ ಚುನಾವಣೆಯಲ್ಲಿ ಬಳಸಲಾದ ಯಾದಿಯನ್ನು ಬಳಸಿಕೊಳ್ಳಲು ಆಲೋಚನೆ ನಡೆಸಿದೆ. ಈ ಪ್ರಕ್ರಿಯೆ ಆರಂಭಿಸಲು ಸರ್ಕಾರ ಮೀಸಲು ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಬೇಕಿದೆ. ಸದ್ಯ ಈ ಪಟ್ಟಿ ಕೈಸೇರದೆ ಆಯೋಗ ಮೌನಕ್ಕೆ ಶರಣಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net