

ಆರ್.ತುಳಸಿಕುಮಾರ್
ಬೆಂಗಳೂರು: ರಾಜಧಾನಿಯ ನಾಲ್ಕೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಿರೀಕ್ಷಿತ ಸಾಧನೆ ಮಾಡದೆ ಹೀನಾಯ ಸೋಲು ಅನುಭವಿಸಿರುವ ಕಾರಣ ಬಹುನಿರೀಕ್ಷಿತ ಬಿಬಿಎಂಪಿ ಚುನಾವಣೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ಲೋಕಾ ಸಮರದ ಬಳಿಕ ಪಾಲಿಕೆ ಚುನಾವಣೆ ನಡೆಸುವ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿತ್ತು. ಚುನಾಯಿತ ಸರ್ಕಾರದ ಇಲ್ಲದೆ ಮೂರು ಮುಕ್ಕಾಲು ವರ್ಷ ಆಗಿರುವುದರಿಂದ ನಗರ ಅಭಿವೃದ್ಧಿ ಹಿಂದೆ ಬಿದ್ದಿದೆ. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ಷೇಪ ಕೇಳಿ ಬರುತ್ತಿರುವ ಕಾರಣ ಕೋರ್ಟ್ ಸೂಚನೆ ಪಾಲಿಸುವುದಾಗಿ ಕಾಂಗ್ರೆಸ್ ಪ್ರತಿಪಾದಿಸಿತ್ತು. ಲೋಕಸಭೆಗೆ ಮತದಾನ ಮುಗಿದ ಕೆಲ ದಿನಗಳ ಬಳಿಕ ಸಿಎಂ ಹಾಗೂ ಡಿಸಿಎಂ ಚುನಾವಣೆ ನಡೆಸುವ ಬಗ್ಗೆ ಆಶಾವಾದದ ಮಾತುಗಳನ್ನಾಡಿದ್ದರು. ಆದರೂ ಲಿತಾಂಶ ನಂತರ ಸ್ಪಷ್ಟ ನಿಲುವು ಕೈಗೊಳ್ಳುವುದಾಗಿ ಈ ಇಬ್ಬರೂ ನಾಯಕರು ಹೇಳಿದ್ದರು. ಈಗ ಬೆಂಗಳೂರಿನ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದೂ ಕ್ಷೇತ್ರವನ್ನು ಗೆಲ್ಲಲಾಗದಿರುವುದು ಪಾಲಿಕೆ ಚುನಾವಣೆ ನಡೆಸಿದರೆ ಕೈ ಸುಟ್ಟುಕೊಳ್ಳಬಹುದು ಎಂಬ ದೂರಾಲೋಚನೆ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಯಾಗತೊಡಗಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಪಕ್ಷದ ಅಭ್ಯರ್ಥಿಗಳನ್ನು ಗೆಲುವಿನ ದಡ ಸೇರಿಸುವ ನಿರೀಕ್ಷೆ ಕಾಂಗ್ರೆಸಿಗರಲ್ಲಿತ್ತು. ಆದರೆ, ನಾಯಕರ ಭಾರೀ ನಿರೀಕ್ಷೆ ಹುಸಿಯಾಗಿದೆ. ಜತೆಗೆ ಪಾಲಿಕೆ ಚುನಾವಣೆಯನ್ನು ಎದುರಿಸುವ ಆತ್ಮವಿಶ್ವಾಸಕ್ಕೆ ಧಕ್ಕೆಯಾದಂತಿದೆ. ಮುಖ್ಯವಾಗಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ಪಡೆಯನ್ನು ಸಂಘಟಿಸಿ ಪಾಲಿಕೆ ಚುನಾವಣೆಗೆ ಸಜ್ಜುಗೊಳಿಸಲು ಕೆಲ ಸಮಯ ಹಿಡಿಯಬಹುದು. ಗೆಲುವಿಗೆ ಬೇಕಾದ ಭೂಮಿಕೆ ಸಿದ್ಧಪಡಿಸಲು ಪ್ರಮುಖ ವಿಷಯಗಳು ಪಕ್ಷದ ಮಟ್ಟದಲ್ಲಿ ಗೆಲುವಿನ ಸೌಧ ಕಟ್ಟಿಕೊಡುವಷ್ಟು ಬಲ ಇಲ್ಲವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜನರ ಆಶೀರ್ವಾದ ಪಡೆಯಲು ಆರ್ಥಿಕ ಶಕ್ತಿ ಮೂಲವೂ ಬೇಕಾಗುತ್ತದೆ. ಈ ಎಲ್ಲ ಕಾರಣಗಳು ಒಟ್ಟಿಗೆ ಪಕ್ಷದ ಪರವಾಗಿ ಕೆಲಸ ಮಾಡಿದರೆ ಮಾತ್ರ ಬಿಬಿಎಂಪಿ ಚುಕ್ಕಾಣಿ ಹಿಡಿಯ ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಾದ ಸೋಲು ಪುನರಾವರ್ತಿತವಾದಲ್ಲಿ ಪಕ್ಷದ ಇಮೇಜ್‌ಗೆ ಧಕ್ಕೆ ಎದುರಾಗಬಹುದು ಎಂಬ ಅಳುಕು ಕಾಂಗ್ರೆಸ್ ಪಕ್ಷವನ್ನು ಆವರಿಸಿದಂತಿದೆ. ಈ ಕಾರಣದಿಂದಾಗಿ ಪಾಲಿಕೆ ಚುನಾವಣೆಯನ್ನು ತಕ್ಷಣವೇ ಮಾಡದ ಕೆಲ ದಿನಗಳ ಮಟ್ಟಿಗೆ ಮುಂದೂಡುವಂತಹ ತಂತ್ರಗಾರಿಕೆಗೆ ನಾಯಕರು ಮಣೆ ಹಾಕುವ ವಾತಾವರಣ ಕಂಡುಬರುತ್ತಿದೆ.
ತ್ರಿವಿಭಜನೆ ಪ್ರಸ್ತಾಪ ಮುನ್ನೆಲೆಗೆ?:
ಹಾಲಿ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198 ಇದ್ದು, ಇದನ್ನು 225ಕ್ಕೆ ಏರಿಸಿ ಪುನರ್‌ವಿಂಗಡಣೆ ಮಾಡಲಾಗಿದೆ. ವಾರ್ಡ್‌ವಾರು ಹೊಸದಾಗಿ ಮೀಸಲು ಪಟ್ಟಿ ಪ್ರಕಟವಾಗಿದ್ದರೂ, ವೈಜ್ಞಾನಿಕವಾಗಿ ನಡೆದಿಲ್ಲ ಎಂಬ ಆಕ್ಷೇಪ ಇದೆ. ಮುಖ್ಯವಾಗಿ ಪಾಲಿಕೆ ಆಡಳಿತ ಸಂಕೀರ್ಣವಾಗುತ್ತಿದ್ದು, ಬಹು ವಿಸ್ತಾರವಾಗಿರುವ ಪ್ರದೇಶವನ್ನು ಏಕ ವ್ಯಕ್ತಿ ಕೇಂದ್ರಿತವಾಗಿ ಸಮರ್ಪಕವಾಗಿ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ನಗರದ ಬೆಳವಣಿಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬ ಮಾತನ್ನು ಕಾಂಗ್ರೆಸ್ ಶಾಸಕರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ದೆಹಲಿ ಸೇರಿ ದೇಶದ ಇತರ ಮಹಾನಗರ ಪಾಲಿಕೆಗಳಲ್ಲಿರುವ ಒಂದಕ್ಕಿಂತ ಹೆಚ್ಚು ಪಾಲಿಕೆ ಆಡಳಿತ ವ್ಯವಸ್ಥೆ ಸೂಕ್ತ ಎಂಬ ಮಾತು ಕೇಳಿಬರುತ್ತಿದೆ. ಇದನ್ನು ಪಕ್ಷದ ಪರವಾಗಿ ವಾತಾವರಣ ಮೂಡಿಸಲು ಬಿಬಿಎಂಪಿಯನ್ನು ಮೂರು ಪಾಲಿಕೆಯಾಗಿ ವಿಭಜಿಸಿ ಈ ವರ್ಷಾಂತ್ಯಕ್ಕೆ ಚುನಾವಣೆ ನಡೆಸುವ ಪ್ರಸ್ತಾಪವೂ ಕಾಂಗ್ರೆಸ್ ವಲಯದಲ್ಲಿ ಚರ್ಚಿತವಾಗುತ್ತಿದೆ. ಇದಕ್ಕೆ ಪಕ್ಷದ ಮಟ್ಟದಲ್ಲಿ ಹೆಚ್ಚಿನ ಒಲವು ವ್ಯಕ್ತವಾದಲ್ಲಿ ತ್ರಿವಿಭಜನೆಯತ್ತ ಕಾಂಗ್ರೆಸ್ ವಾಲಬಹುದು. ಏಕೆಂದರೆ ಮೂರರಲ್ಲಿ ಕನಿಷ್ಠ ಒಂದು ಪಾಲಿಕೆಯನ್ನಾದರೂ ಗೆದ್ದು ರಾಜಧಾನಿಯಲ್ಲಿ ತನ್ನ ಅಸ್ತಿತ್ವವನ್ನು ಪ್ರದರ್ಶಿಸುವ ಅನಿವಾರ್ಯತೆ ಕಾಂಗ್ರೆಸ್‌ಗೆ ಇದೆ.
ಅಭಿವೃದ್ಧಿ ಮಾಡದೆ ಗೆಲ್ಲುವು ಸಿಗುವುದೇ?:
ಸದ್ಯ ನಗರದ ಜನತೆ ಮೂಲಸೌಕರ್ಯದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆ, ಕುಡಿಯುವ ನೀರು, ಕಸ ಸಮಸ್ಯೆ ಜಟಿಲವಾಗುತ್ತಿದೆ. ಸಂಚಾರ ದಟ್ಟಣೆ ನಿವಾರಣೆಗೆ ಯಾವ ಪ್ರಯತ್ನವನ್ನೂ ಮಾಡಿಲ್ಲ ಎಂಬ ಆಕ್ಷೇಪ ನಾಗರಿಕರಲ್ಲಿ ಸಿಟ್ಟನ್ನು ಹೆಚ್ಚಿಸಿದೆ. ಈ ಮಧ್ಯೆ ಬಜೆಟ್‌ನಲ್ಲಿ ೋಷಿಸಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ, ಬಿಬಿಎಂಪಿಗೆ ಸಾಧ್ಯವಾಗಿಲ್ಲ. ಸಂಪನ್ಮೂಲದ ಹೆಚ್ಚಿನ ಭಾಗ ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗವಾಗುತ್ತಿದ್ದು, ಮೂಲಸೌಕರ್ಯ ಕಲ್ಪಿಸಲು ಸಾಲ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಅಭಿವೃದ್ಧಿ ಕೈಗೊಳ್ಳದೇ ಕೇವಲ ಕಾರ್ಯಕರ್ತರ ಶ್ರಮ ಪಣಕ್ಕಿಟ್ಟು ಪಾಲಿಕೆ ಚುನಾವಣೆಗೆ ಹೋದಲ್ಲಿ ಗೆಲುವು ಸಿಗುವುದೇ ಎಂಬ ಜಿಜ್ಞಾಸೆ ಕಾಂಗ್ರೆಸ್ ವಲಯದಲ್ಲಿ ಒಂದಿಷ್ಟು ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆ ಇದೆ.