ಬಿಬಿಎಂಪಿ: ಪ್ರಾಣಿಗಳ ವಿದ್ಯುತ್ ಚಿತಾಗಾರಕ್ಕೆ ಡಿಪಿಆರ್

bbmp office
Published on

ಬೆಂಗಳೂರು: ಮಹಾನಗರದಲ್ಲಿ ಸತ್ತ ಜಾನುವಾರುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಹೊಸದಾಗಿ ಪ್ರಾಣಿಗಳ ವಿದ್ಯುತ್ ಚಿತಾಗಾರ ಸ್ಥಾಪಿಸಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುತ್ತಿದ್ದು, ಮುಂದಿನ ತಿಂಗಳ ವೇಳೆಗೆ ಕಾಮಗಾರಿ ಆರಂಭಿಸಲು ಚಿಂತನೆ ನಡೆಸಲಾಗಿದೆ.

ಪ್ರಸಕ್ತ ಸಾಲಿನ ಪಾಲಿಕೆ ಬಜೆಟ್‌ನಲ್ಲಿ 3 ಕಡೆಗಳಲ್ಲಿ ಪ್ರಾಣಿ ಚಿತಾಗಾರಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಬಿಬಿಎಂಪಿಯ ಎಲ್ಲ ಎಂಟೂ ವಲಯಗಳಲ್ಲಿ ಕನಿಷ್ಠ ಒಂದು ಚಿತಾಗಾರ ಹೊಂದುವ ರೀತಿ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪಶುಸಂಗೋಪನೆ ವಿಭಾಗಕ್ಕೆ ಜಾಗ ಗುರುತಿಸುವ ಹೊಣೆ ನೀಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ ಯೋಜನೆ ಜಾರಿಗೆ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಅಂತಿಮಗೊಳಿಸಿ ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಪಾಲಿಕೆ ಚಿಂತನೆ ನಡೆಸಿದೆ.

ಪ್ರತಿಯೊಂದು ಘಟಕವನ್ನು 12-15 ತಿಂಗಳೊಳಗೆ ಸ್ಥಾಪಿಸಲು ಗುತ್ತಿಗೆದಾರರಿಗೆ ಕಾಲಾವಕಾಶ ನೀಡಲಾಗುತ್ತದೆ. ಘಟಕವು ಕಾರ್ಯಾರಂಭ ಮಾಡಿದ ಬಳಿಕ ಅದರ ನಿರ್ವಹಣೆಯನ್ನು ಕೆಲ ವರ್ಷ ಗುತ್ತಿಗೆ ಕಂಪನಿಗೆ ವಹಿಸಲು ಆಲೋಚನೆ ನಡೆದಿದೆ.

8.25 ಕೋಟಿ ರೂ. ಅನುದಾನ:

ನಗರ ಬೆಳೆದಂತೆಲ್ಲ ಪ್ರಾಣಿಗಳ ಸಾವು ಸಂಖ್ಯೆಯೂ ಹೆಚ್ಚುತ್ತಿದೆ. ಸಹಜ ಸಾವಿನ ಜತೆಗೆ ರಸ್ತೆ ಅಪಘಾತಗಳಲ್ಲಿ ನಾಯಿ, ಹಸು ಸಹಿತ ಇತರ ಜಾನುವಾರುಗಳು ಸಾವನ್ನಪ್ಪುತ್ತಿವೆ. ಸಾಕು ಪ್ರಾಣಿಗಳು ಸತ್ತಲ್ಲಿ ಹೊರವಲಯಕ್ಕೆ ಒಯ್ದು ಖಾಲಿ ಜಾಗದಲ್ಲಿ ಮಣ್ಣು ಮಾಡಲಾಗುತ್ತದೆ. ಆದರೆ, ಬೀದಿ ನಾಯಿ ಅಥವಾ ರಸ್ತೆ ಅಪಘಾತದಲ್ಲಿ ಸತ್ತರೆ ಅಲ್ಲಿಯೇ ಕಳೇಬರ ಬಿಡಲಾಗುತ್ತಿದೆ. ಕೆಲವನ್ನು ಸಮಿಪದ ರಾಜಕಾಲುವೆಗೆ ಎಸೆಯುವ ಪರಿಪಾಠ ಬೆಳೆದಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೆಲ ವರ್ಷಗಳ ಹಿಂದೆಯೇ ರಿಂಗ್ ರಸ್ತೆಯ ಸುಮನಹಳ್ಳಿ ಬಳಿ ಸಣ್ಣ ಪ್ರಮಾಣದಲ್ಲಿ ಪ್ರಾಣಿ ಚಿತಾಗಾರ ಕಾರ್ಯಾರಂಭ ಮಾಡಿದೆ. ಸದ್ಯ ಈ ಘಟಕ ದುರಸ್ತಿಯಲ್ಲಿದ್ದು, ಈ ವರ್ಷಾಂತ್ಯಕ್ಕೆ ಪುನಾರಂಭವಾಗುವ ನಿರೀಕ್ಷೆ ಇದೆ.

ಉದ್ದೇಶಿತ ಪ್ರಾಣಿ ಚಿತಾಗಾರ ವಿದ್ಯುತ್‌ನಿಂದ ದಹಿಸುವ ಪ್ರಕ್ರಿಯೆ ಒಳಗೊಳ್ಳಲಿದೆ. ಹೆಚ್ಚು ಸಾಮರ್ಥ್ಯದ ಘಟಕವಿದ್ದರೂ, ಕಡಿಮೆ ಪ್ರಮಾಣದ ವಿದ್ಯುಚ್ಛಕ್ತಿ ಬಳಕೆಯಾಗುವಂತೆ ವಿನ್ಯಾಸ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ. ಮಹದೇವಪುರ ಹಾಗೂ ಯಲಹಂಕ ವಲಯದಲ್ಲಿ ದೊಡ್ಡ ಘಟಕಗಳು ಹಾಗೂ ಉಳಿದೆಡೆ ಮಧ್ಯಮ ಪ್ರಮಾಣದ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಪೂರ್ವ, ಪಶ್ಚಿಮ ಹಾಗೂ ದಕ್ಷಿನ ವಲಯಗಳಲ್ಲಿ ಸರ್ಕಾರಿ ಜಾಗ ಸಿಗದಿದ್ದಲ್ಲಿ ದೊಡ್ಡ ಸ್ಮಶಾನಗಳ ಒಂದು ಭಾಗದಲ್ಲಿ ಸತ್ತ ಪ್ರಾಣಿಗಳ ವಿಲೇವಾರಿಗೆ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆದಿದೆ. ಈ ಯೋಜನೆಗೆ ಒಟ್ಟು 8.25 ಕೋಟಿ ರೂ. ಅನುದಾನ ಬಳಸಿಕೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾಸಿಕ 300 ಪ್ರಾಣಿಗಳ ದಹನ:

ನಗರದ ಸುಮನಹಳ್ಳಿಯಲ್ಲಿರುವ ಏಕೈಕ ಪ್ರಾಣಿ ವಿದ್ಯುತ್ ಚಿತಾಗಾರದಲ್ಲಿ ಮಾಸಿಕ 300 ಸತ್ತ ಪ್ರಾಣಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಒಂದು ಸಾಕು ಪ್ರಾಣಿಗೆ 300 ರೂ. ಹಾಗೂ ದೊಡ್ಡ ಪ್ರಾಣಿಗೆ 600 ರೂ. ಶುಲ್ಕ ವಿಧಿಸಲಾಗುತ್ತಿದೆ. ಅಪಘಾತದಲ್ಲಿ ಮೃತಪಟ್ಟ ಪ್ರಾಣಿಗಳ ಕಳೆಬರವನ್ನು ಚಿತಾಗಾರಕ್ಕೆ ಕೊಂಡೊಯ್ಯಲು ಸರಿಯಾದ ವ್ಯವಸ್ಥೆ ಇಲ್ಲ. ಇದರ ಹೊರಗಾಗಿ ಕೆಲ ಪ್ರಮಾಣದಲ್ಲಿ ಎನ್‌ಜಿಒಗಳು ಈ ಕೆಲಸವನ್ನು ಮಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net