ಬಿಬಿಎಂಪಿಗಿಲ್ಲ ಸ್ವತ್ತಿನ ಖಾತಾ ವಿಭಜನೆ ಅಧಿಕಾರ

bbmp office
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ವತ್ತುಗಳಿಗೆ ‘ಎ ಖಾತಾ’ ಹಾಗೂ ‘ಬಿ ಖಾತಾ’ ನೋಂದಣಿ ಮತ್ತು ವಿಭಜನೆ ಮಾಡುವ ಅಧಿಕಾರ ಇನ್ನು ಮುಂದೆ ಪಾಲಿಕೆಗೆ ಇರುವುದಿಲ್ಲ. ಬಿಡಿಎ ಹಾಗೂ ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದೆ ಖಾತಾ ಸೌಲಭ್ಯವು ಸಿಗದು. ಈ ವಿಚಾರದಲ್ಲಿ ಎದ್ದಿದ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಪಾಲಿಕೆಯ ಮುಖ್ಯ ಆಯುಕ್ತರು ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದಾರೆ.

ಈ ಸುತ್ತೋಲೆ ಅನ್ವಯ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲಾದ ಯಾವುದೇ ಖಾಲಿ ಜಮೀನನ್ನು ಬಿಬಿಎಂಪಿ ಎ ಖಾತಾ ಅಥವಾ ಬಿ ಖಾತಾ ಆಗಿ ದಾಖಲಿಸುವಂತಿಲ್ಲ. ಇಂತಹ ಭೂಮಿಯನ್ನು ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ನಂತರ ಮತ್ತು ನಿಯಮಗಳ ಪ್ರಕಾರವೇ ಎ ಖಾತೆಯಲ್ಲಿ ದಾಖಲಿಸಲಾಗುತ್ತದೆ.

ಈಗಾಗಲೇ ಪಾಲಿಕೆಯಲ್ಲಿ ಎ/ಬಿ ಖಾತಾ ಹೊಂದಿರುವ ನಿವೇಶನಗಳಿಗೆ ವಿಭಜನೆ ಅಥವಾ ವಿಭಾಗವನ್ನು ಬಿಬಿಎಂಪಿ ಮಾಡುವಂತಿಲ್ಲ. ಅಂತಹ ವಿಭಜನೆ/ಉಪ ವಿಭಾಗವನ್ನು ಕೆಟಿಸಿಪಿ ಕಾಯ್ದೆ ಅಡಿಯಲ್ಲಿ ಸಕ್ಷಮ ಯೋಜನಾ ಪ್ರಾಧಿಕಾರದಿಂದ ವಿಭಜನೆಗಾಗಿ ಅನುಮೋದನೆ ಪಡೆದ ಬಳಿಕವೇ ನಿವೇಶನಗಳಿಗೆ ಈ ಸೌಲಭ್ಯವನ್ನು ನಿಯಮ ಆಧರಿಸಿ ಎ ಖಾತಾ ನೀಡಬಹುದಾಗಿರುತ್ತದೆ.

ಇನ್ನು, ಪಾಲಿಕೆಯಲ್ಲಿ ಈಗಾಗಲೇ ಎ ವಹಿಯಲ್ಲಿ ದಾಖಲಾಗಿರುವ ಸ್ವತ್ತುಗಳಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ 1961, ಬಿಬಿಎಂಪಿ ಕಾಯ್ದೆ 20202 ಹಾಗೂ ಇತರ ಅನ್ವುಯವಾಗುವ ಕಾನೂನುಗಳ ಅಡಿಯಲ್ಲಿ ಸಕ್ಷಮ ಪ್ರಾಧಿಕಾಋದ ಅನುಮೋದನೆಯೊಂದಿಗೆ ನಿರ್ಮಿಸಿ ಸ್ವಾಧೀನಾನುಭವ ಪತ್ರ (ಒಸಿ) ಪಡೆಯಲಾದ ಏಕ ಘಟಕ ಅಥವಾ ಬಹು ಘಟಕಗಳ ಕಟ್ಟಡದಲ್ಲಿನ ಪ್ರತಿ ಘಟಕವನ್ನು ಎ ವಹಿಯಲ್ಲಿ ದಾಖಲಿಸಿಕೊಂಡು ಎ ಖಾತಾ ನೀಡಬಹುದಾಗಿದೆ. ಜತೆಗೆ ಇಂತಹ ಕಾಯ್ದೆಯ ಅನುಮೋದನೆ ಇಲ್ಲದೆ ಎ/ಬಿ ಖಾತಾದಲ್ಲಿರುವ ಸ್ವತ್ತುಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ 2024ರ ಸೆ.30ಕ್ಕಿಂತ ಮೊದಲು ಬೆಸ್ಕಾಂ ವಿದ್ಯುತ್ ಸಂಪರ್ಕ ಅಥವಾ ಜಲಮಂಡಳಿಯಿಂದ ನೀರಿನ ಸಂಪರ್ಕ ಪಡೆದಿದ್ದಲ್ಲಿ ಅಂತಹ ಏಕ ಘಟಕ/ಬಹುಘಟಕದ ಕಟ್ಟಡಗಳಿಗೆ ‘ಬಿ ಖಾತಾ/ಬಿ ವಹಿ’ಯಲ್ಲಿ ದಾಖಲಿಸಿಕೊಂಡು ಬಿ ಖಾತಾ ನೀಡಬಹುದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹೊಸದಾಗಿ ಹೊರಡಿಸಿರುವ ಸುತ್ತೋಲೆಗೆ ವಿರುದ್ಧವಾಗಿ ಪಾಲಿಕೆಯಲ್ಲಿ ಬಾಕಿ ಉಳಿದಿರುವ ಎಲ್ಲ ಅರ್ಜಿಗಳು ತಕ್ಷಣವೇ ರದ್ದಾಗುತ್ತವೆ. ಅಲ್ಲದೆ, ಸುತ್ತೋಲೆಯ ಉಲ್ಲಂಘನೆ ಆದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ನೌಕರರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ಎಚ್ಚರಿಕೆಯನ್ನು ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net