ಅನುಮೋದನೆ ಇಲ್ಲದೆ 405.76 ಕೋಟಿ ರೂಪಾಯಿ ಹಂಚಿಕೆ ಮಾಡಿದ ಬಿಬಿಎಂಪಿ

BBMP 10 jan 20
Published on

ಬೆಂಗಳೂರು: ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆಯದೆ 405.76 ಕೋಟಿ ರೂ.ಗಳನ್ನು ಬಿಬಿಎಂಪಿ ಹಂಚಿಕೆ ಮಾಡಿರುವ ವಿಚಾರ ವಿಧಾನಸಭೆಯಲ್ಲಿ ಗಹನ ಚರ್ಚೆಗೆ ಕಾರಣವಾಯಿತು.

ಸದಸ್ಯರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ಅವರು ನಿಯಮ 69ರಡಿ ಪ್ರಸ್ತಾಪಿಸಿದ ವಿಷಯಕ್ಕೆ ಲಿಖಿತ ಉತ್ತರ ನೀಡಿದ ಸರ್ಕಾರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡಿಲ್ಲ. ಐದು ಉದ್ದೇಶಗಳಿಗೆ ಭಾಗಶಃ ಅನುದಾನವನ್ನು ಹಂಚಿಕೆ ಮಾಡಿ ಕಾಮಗಾರಿಗೆ ಜಾಬ್ ಕೋಡ್ ನೀಡಿರುವುದಾಗಿ ಬಿಬಿಎಂಪಿ ವರದಿ ಮಾಡಿದೆ ಎಂದು ತಿಳಿಸಿತು.

ಜಾಬ್ ಕೋಡ್ ನೀಡಲಾಗಿರುವ ಹಾಗೂ ನೀಡಲು ಬಾಕಿ ಇರುವ ಕ್ರಿಯಾ ಯೋಜನೆಗೆ ಕೌನ್ಸಿಲ್ ಸಭೆಯ ಹಾಗೂ ಸರ್ಕಾರದ ಘಟನೋತ್ತರ ಅನುಮೋದನೆ ಯನ್ನು ಪಡೆಯುವ ಪ್ರಸ್ತಾವನೆ ಸಲ್ಲಿಸುವುದಾಗಿ ಬಿಬಿಎಂಪಿ ತಿಳಿಸಿದೆ ಎಂಬ ಸರ್ಕಾರದ ಉತ್ತರಕ್ಕೆ ರಾಮಲಿಂಗಾ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು.

ಕೂಡಲೇ 405.76 ಕೋಟಿ ರೂ. ಬಿಡುಗಡೆ ಮಾಡದಂತೆ ತಡೆಹಿಡಿಯಬೇಕು ಎಂದು ಪಟ್ಟುಹಿಡಿದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಜರಿರಲಿಲ್ಲ. ಈ ಕಾರಣಕ್ಕೆ ಗುರುವಾರ ಉತ್ತರಿಸಲಿದ್ದಾರೆ ಎಂದು ತಿಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net