ಅನಧಿಕೃತ ಕೇಬಲ್ ಘೋಷಿಸಿಕೊಳ್ಳಲು ಬಿಬಿಎಂಪಿ ಗಡುವು

illigal cables (1)
Published on

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಕೇಬಲ್‌ಗಳ ಮಾಹಿತಿಯನ್ನು ಸ್ವಯಂ ಘೋಷಿಸಿಕೊಳ್ಳಲು ಬಿಬಿಎಂಪಿ ಈ ತಿಂಗಳ 20ರ ವರೆಗೆ ಗಡುವು ವಿಧಿಸಿದೆ.

ಈ ದಿನಾಂಕದೊಳಗೆ ಇಂಟರ್‌ನೆಟ್, ಟೆಲಿಕಾಂ ಹಾಗೂ ಟಿವಿ ಕೇಬಲ್ ಕಂಪನಿಗಳು ಅನಧಿಕೃತವಾಗಿ ಅಳವಡಿಸಿರುವ ಮಾರ್ಗ ಹಾಗೂ ಸ್ಥಳದ ಮಾಹಿತಿಯನ್ನು ಪಾಲಿಕೆಯ ಆಯಾ ವಲಯಗಳ ಮುಖ್ಯಸ್ಥರಿಗೆ ಸಲ್ಲಿಸಬೇಕಿದೆ. ಇಲ್ಲದಿದ್ದಲ್ಲಿ ಗಡುವಿನ ಮರುದಿನವೇ ಕಾರ್ಯಾಚರಣೆ ನಡೆಸಿ ತೆರವು ಮಾಡಲಾಗುವುದು ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಐ.ಪಿ.ಡಿ. ಸಾಲಪ್ಪ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಅನಧಿಕೃತ ಕೇಬಲ್ ಅಳವಡಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗಡುವಿನೊಳಗೆ ೋಷಿಸಿಕೊಳ್ಳದಿದ್ದಲ್ಲಿ ನೋಟಿಸ್ ನೀಡದೆ ತೆರವು ಮಾಡುವಂತೆ ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕಳೆದ ತಿಂಗಳಾಂತ್ಯದಲ್ಲಿ ವೈಟ್‌ಫೀಲ್ಡ್ ಬಳಿ ಹೋಪ್‌ ಫಾರ್ಮ್ ಬಳಿಯ ಫುಟ್‌ಪಾತ್ ಮೇಲೆ ಬಿದಿದ್ದ ವಿದ್ಯುತ್ ಕೇಬಲ್ ತುಳಿದ ತಾಯಿ-ಮಗು ಸ್ಥಳದಲ್ಲೇ ಅಸುನೀಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇಂಧನ ಸಚಿವರು, ನಗರದ ಎಲ್ಲೆಡೆ ಅನಧಿಕೃತವಾಗಿ ಹಾಕಿರುವ ಎಲ್ಲ ಬಗೆಯ ಕೇಬಲ್‌ಗಳನ್ನು ತೆರವು ಮಾಡುವಂತೆ ಸೂಚಿಸಿದ್ದರು. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಬೆಂಬಲ ವ್ಯಕ್ತಪಡಿಸಿದ್ದರು. ಆ ಬಳಿಕ ಎಲ್ಲ ವಲಯಗಳಲ್ಲೂ ಕೇಬಲ್ ತೆರವು ಮಾಡಲಾಗುತ್ತಿದೆ. ಕೆಲವೆಡೆ ಕತ್ತರಿಸಿರುವ ಕೇಬಲ್‌ಗಳನ್ನು ರಸ್ತೆಬದಿಯೇ ಬಿಟ್ಟು ಪಾಲಿಕೆ ಸಿಬ್ಬಂದಿ ಹೊರನಡೆದಿದ್ದಾರೆ ಎಂಬ ಆಕ್ಷೇಪ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net