

ಬೆಂಗಳೂರು: ವಿವಿಧ ಕಾಮಗಾರಿ ವರ್ಗೀಕರಿಸಿ ಅನುದಾನ ಬಿಡುಗಡೆ ಮಾಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಹೊಸ ಸಂಪ್ರದಾಯವನ್ನು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ವಿರೋಧಿಸಿದೆ.
ಬಿಬಿಎಂಪಿಯಲ್ಲಿ ವಿವಿಧ ವರ್ಗಗಳ ಕಾಮಗಾರಿಗಳಿಗೆ ಸರ್ಕಾರದ ಅನುದಾನವನ್ನು ಬಿಡುಗಡೆ ಮಾಡುವ ಹೊಸ ಆದೇಶವನ್ನು ರದ್ದುಗೊಳಿಸಿ ಈ ಹಿಂದಿನಂತೆ ಹಿರಿತನದ ಆಧಾರದ ಮೇಲೆ ಬಿಡುಗಡೆ ಮಾಡಲು ಸಂಘ ಮನವಿ ಮಾಡಿದೆ.
ಸರ್ಕಾರ ಇತ್ತೀಚೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆ, ಮೇಲ್ಸೇತುವೆ, ಅಂಡರ್ ಪಾಸ್, ಪಾದಚಾರಿ ರಸ್ತೆ, ವೈಟ್ ಟಾಪಿಂಗ್ ರಸ್ತೆ, ವಾರ್ಡ್ ಕಾಮಗಾರಿಗಳನ್ನು ವರ್ಗೀಕರಿಸಿ ಅನುದಾನ ಬಿಡುಗಡೆ ಮಾಡಲು ಮುಂದಾಗಿದೆ.
ಈ ರೀತಿ ವರ್ಗೀಕರಣ ಮಾಡಿ ಅನುದಾನ ಬಿಡುಗಡೆ ಮಾಡಿದರೆ ಜೇಷ್ಠತೆ ಅನುಸರಿಸಲು ಸಾಧ್ಯವಾಗುವುದಿಲ್ಲ ಎಂದು ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಬೆಂಗಳೂರು ಉಸ್ತುವಾರಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಬಿಎಂಪಿ ಆಯುಕ್ತರು ಮತ್ತು ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಕೆಲವು ವರ್ಗಗಳಿಗೆ ಕಾಮಗಾರಿ ಮುಗಿದ ತಕ್ಷಣ ಅನುದಾನ ಲಭ್ಯವಾದರೆ ಇನ್ನೂ ಕೆಲವು ವರ್ಗಗಳಲ್ಲಿ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರು ಇಂತಹ ತಾರತಮ್ಯಕ್ಕೆ ಕಾರಣವಾಗುವ ವ್ಯವಸ್ಥೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಗುತ್ತಿಗೆದಾರರ ಯಾವುದೇ ಸಂಘ-ಸಂಸ್ಥೆ ಇಂತಹ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿಲ್ಲ. ಆದರೂ ಪ್ರಭಾವಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ನಿಯಮವನ್ನು ರೂಪಿಸಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಭ್ರಷ್ಟಾಚಾರಕ್ಕೆ ಅಸ್ಪದವಾಗುವ ಸಂಭವವಿರುತ್ತದೆ. ಮೇಲಾಗಿ ಬಾಕಿ ಮೊತ್ತವನ್ನು ಹಿರಿತನದ ಆಧಾರದಲ್ಲಿಯೇ ಬಿಡುಗಡೆ ಮಾಡಬೇಕೆಂದು ಹೈ ಕೋರ್ಟ್ ತೀರ್ಪು ನೀಡಿರುತ್ತದೆ. ಯಾವುದೇ ವರ್ಗವಾದರೂ ಎಲ್ಲವೂ ಕಾಮಗಾರಿಗಳ ಪಟ್ಟಿಯ ಅಡಿಯಲ್ಲೇ ಬರುತ್ತದೆ. ಆದ್ದರಿಂದ ತಾರತಮ್ಯ ಮತ್ತು ಆರ್ಥಿಕ ಅಸಮಾನತೆಗೆ ಕಾರಣವಾಗುವ ಈ ಹೊಸ ಕಾನೂನನ್ನು ರದ್ದುಪಡಿಸಿ ಎಲ್ಲ ರೀತಿಯ ಕಾಮಗಾರಿಗಳಿಗೆ ಹಿರಿತನದ ಆಧಾರದಲ್ಲಿಯೇ ಅನುದಾನ ಬಿಡುಗಡೆ ಮಾಡಬೇಕು ಎಂದು ಕೆಂಪಣ್ಣ ಒತ್ತಾಯಿಸಿದ್ದಾರೆ.
ಬೃಹತ್ ನೀರುಗಾಲುವೆ(ಕೆ-100 ಯೋಜನೆ ಸಹಿತ) ಕಾಮಗಾರಿಗಳಿಗೆ ಶೇ. 30, ಮೇಲ್ಸೇತುವೆ, ಅಂಡರ್‌ಪಾಸ್, ರೈಲು ಮೇಲ್ವೇತುವೆ, ಕೆಳಸೇತುವೆ(ಶೇ. 10), ಪಾದಚಾರಿ ಮಾರ್ಗ, ಟೆಂಡರ್‌ಶೂರ್ ರಸ್ತೆಗಳು ಸೇರಿದಂತೆ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳು(ಶೇ.30), ವೈಟ್ ಟಾಪಿಂಗ್ ಮತ್ತು ಕಟ್ಟಡಗಳು(ಶೇ.15) ಮತ್ತು ವಾರ್ಡ್ ಕಾಮಗಾರಿಗಳಿಗೆ ಶೇ.15ರಷ್ಟು ಹಣ ಬಿಡುಗಡೆ ಮಾಡಲು ಆದೇಶಿಸಲಾಗಿತ್ತು.
ಪ್ರತಿ ವರ್ಗದ ಕಾಮಗಾರಿ, ಯೋಜನೆಗಳ ಬಿಲ್ ಪಾವತಿಯನ್ನು ಹಿರಿತನದ ಆಧಾರದಲ್ಲಿ ಮಾಡಬೇಕು. ಪ್ರತಿ ಬಿಲ್‌ನ ಶೇ. 75ರಷ್ಟು ಪಾವತಿ ಮಾಡಬೇಕು. ಕಾನೂನು ಪ್ರಕಾರದ ತೆರಿಗೆ ಹಾಗೂ ಇತರೆ ವೆಚ್ಚಗಳನ್ನು ಶೇ.100ರ ಬಿಲ್‌ಗೆ ಕಡಿತ ಮಾಡಿಕೊಂಡು ಉಳಿದದ್ದನ್ನು ಗುತ್ತಿಗೆದಾರರಿಗೆ ಪಾವತಿ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.