

ಬೆಂಗಳೂರು: ಹವಾಮಾನ ಪ್ರತಿರೋಧಕ ಬ್ಲೂ-ಗ್ರೀನ್ ವಾರ್ಡ್‌ಗಳ ನಿರ್ಮಾಣಕ್ಕಾಗಿ ಕ್ಲಸ್ಟರ್ ಆಧಾರಿತ ಯೋಜನೆಗಳನ್ನು ರೂಪಿಸಿ, ಮಾದರಿ ಕ್ಲಸ್ಟರ್‌ಗಳನ್ನು ನಿರ್ಮಿಸಲು ಎಲ್ಲ ಇಲಾಖೆಗಳ ಸಹಕಾರ ಅಗತ್ಯ ಇದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತೆ (ಹವಾಮಾನ ವೈಪರೀತ್ಯ ನಿರ್ವಹಣೆ) ಪ್ರೀತಿ ಗೆಹ್ಲೋಟ್ ತಿಳಿಸಿದರು.
ಪಾಲಿಕೆಯ ಕೇಂದ್ರ ಕಚೇರಿಯ ವಾರ್ ರೂಂ ಸಭಾಂಗಣದಲ್ಲಿ ಗುರುವಾರ ಬಿಬಿಎಂಪಿ ಹಾಗೂ ವರ್ಲ್ಡ್ ರಿಸೋರ್ಸಸ್ ಇನ್‌ಸ್ಟ್ಟಿಟ್ಯೂಟ್ (ಡಬ್ಲ್ಯುಆರ್‌ಐ) ಇಂಡಿಯಾ ಸಂಯುಕ್ತ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬ್ಲೂ-ಗ್ರೀನ್ ವಾರ್ಡ್‌ಗಳ ನಿರ್ಮಾಣದತ್ತ ಕ್ಲಸ್ಟರ್ ಆಧಾರಿತ ದೃಷ್ಟಿಕೋನ ಎಂಬ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಾವು ಪ್ರಾರಂಭಿಕವಾಗಿ ಆಯ್ಕೆ ಮಾಡುವ ಕೆಲ ಕ್ಲಸ್ಟರ್‌ಗಳು ಮಾದರಿ ಕ್ಲಸ್ಟರ್‌ಗಳಾಗಿ ರೂಪುಗೊಳ್ಳಲಿವೆ. ನಾಗರಿಕರು ತಮ್ಮ ಸುತ್ತಲಿನ ಪ್ರದೇಶಗಳಲ್ಲಿಯೂ ಅಂತಹ ಮಾದರಿ ವ್ಯವಸ್ಥೆಗಳನ್ನು ಬಯಸುವಂತಾಗಬೇಕು. ಇದರಿಂದ ಪರಿಸರ ಕಾರ್ಯಕ್ರಮಗಳಲ್ಲಿ ಜನರು ನೇರವಾಗಿ ಪಾಲ್ಗೊಳ್ಳುವಂತಾಗಲಿದೆ ಎಂದರು.
ಕ್ಲಸ್ಟರ್ ಆಧಾರಿತ ಯೋಜನೆಗೆ ಒತ್ತು:
ಕ್ಷೇತ್ರಾಧಾರಿತ ಹಸ್ತಕ್ಷೇಪಗಳಿಂದ ಕ್ಲಸ್ಟರ್ ಆಧಾರಿತ ಸಮಗ್ರ ಯೋಜನೆಗಳತ್ತ ಕೇಂದ್ರೀಕರಿಸಲಾಗುವುದು. ಕ್ಲಸ್ಟರ್ ಆಧಾರಿತ ಯೋಜನೆಯಿಂದ ಹೆಚ್ಚು ಪರಿಣಾಮಕಾರಿ, ಸಮರ್ಪಕ ಸಂಪನ್ಮೂಲ ನಿರ್ವಹಣೆ ಸುಲಭವಾಗಲಿದೆ ಎಂದು ಅವರು ವಿವರಿಸಿದರು.
ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ತಜ್ಞರು ಹಾಗೂ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.
ಸುರಕ್ಷಿತ ಪ್ರತಿರೋಧಕ ನೆರೆಹೊರೆ ನಿರ್ಮಾಣ:
ಚರ್ಚೆಯಲ್ಲಿ ಹವಾಮಾನ ಸ್ನೇಹಿ ರಸ್ತೆಯ ವಿನ್ಯಾಸ, ಅನುಕೂಲಕರ ಪಾದಚಾರಿ ಮಾರ್ಗ ಒಳಗೊಂಡು ನಗರದಲ್ಲಿನ ಸುರಕ್ಷತೆ, ವಾಸಯೋಗ್ಯ ಹಾಗೂ ಪ್ರತಿರೋಧಕ ನೆರೆಹೊರೆ ನಿರ್ಮಾಣಕ್ಕಿರುವ ಸವಾಲು ಹಾಗೂ ನಾಗರಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಚಿಂತನ-ಮಂಥನ ನಡೆಯಿತು.