

ಬೆಂಗಳೂರು: ನಗರವನ್ನು ಶುಚಿಯಾಗಿಡುವ ಉದ್ದೇಶದಿಂದ ‘ಸ್ವಚ್ಛ ಬೆಂಗಳೂರು ಅಭಿಯಾನ’ ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಎಂಟೂ ವಲಯಗಳಲ್ಲಿ ಏಕ ಕಾಲಕ್ಕೆ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಇತ್ತೀಚಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ವೇಳೆ ತ್ಯಾಜ್ಯ ವಿಲೇವಾರಿ ಬಗ್ಗೆ ನಾಗರಿಕರಿಂದ ಹೆಚ್ಚು ದೂರುಗಳು ಬರುತ್ತಿರುವುದನ್ನು ಪ್ರಸ್ತಾಪಿಸಿದ್ದರು. ಘನತ್ಯಾಜ್ಯ ನಿಗಮ ಸ್ಥಾಪನೆಯಾದ ಬಳಿಕ ಕಸ ವಿಲೇವಾರಿ ಹಳಿ ತಪ್ಪಿದ ಬಗ್ಗೆಯೂ ಮಾಜಿ ಕಾರ್ಪೊರೇಟರ್‌ಗಳು ಡಿಸಿಎಂ ಗಮನಕ್ಕೆ ತಂದಿದ್ದರು. ಈ ಕುರಿತು ಹಿಂದೆಯೇ ಸೂಚನೆ ನಿಡಿದ್ದರೂ, ಸಂಪೂರ್ಣವಾಗಿ ಸ್ವಚ್ಛತಾ ಕೆಲಸ ಆಗಿರಲಿಲ್ಲ. ಈಗ ಎಲ್ಲ ವಲಯಗಳಲ್ಲೂ ಸಾಮೂಹಿಕ ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ ನೀಡಲು ಸೂಚಿಸಿದ ಹಿನ್ನೆಲೆ, ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ನಿರ್ದೇಶನ ಅಡಿಯಲ್ಲಿ ಶುಚಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಪಾಲಿಕೆಯ ಎಂಟೂ ಜೋನ್‌ಗಳ ವಲಯ ಆಯುಕ್ತರು, ಜಂಟಿ ಆಯುಕ್ತರು, ಘನತ್ಯಾಜ್ಯ ನಿರ್ವಹಣಾ ನಿಗಮದ ಅಧಿಕಾರಿಗಳು ಸಮನ್ವಯ ಸಾಧಿಸಿ ಬ್ಲ್ಯಾಕ್ ಸ್ಪಾಟ್‌ಗಳು ಸೇರಿ ಹೆಚ್ಚು ಕಸ ಸಂಗ್ರಹವಾಗಿರುವ ಸ್ಥಳಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಸ್ಥಳಗಳು, ರಸ್ತೆಬದಿ ಸಂಗ್ರಹವಾಗಿ ತ್ಯಾಜ್ಯ ವಿಲೇವಾರಿಗೆ ವಿಶೇಷ ಗಮನ ನೀಡಲಾಗುತ್ತದೆ. ಜತೆಗೆ ುಟ್‌ಪಾತ್ ಒತ್ತುವರಿ ತೆರವಿಗೂ ಆದ್ಯತೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ವಲಯ:
ಪುಲಿಕೇಶಿನಗರ ವಿಭಾಗದ ರಿಚರ್ಡ್ಸ್ ಟೌನ್, ಎಚ್‌ಬಿಆರ್ ಉಪ ವಿಭಾಗದ ಟ್ಯಾನರಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಬಳಸಿ ರಸ್ತೆ ಇಕ್ಕೆಲಗಳಲ್ಲಿದ್ದ ಕಟ್ಟಡ ಭಗ್ನಾವಶೇಷ ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಸಿ.ವಿ ರಾಮನ್‌ನಗರ ವಿಭಾಗದ ಕಾಕ್ಸ್‌ಟೌನ್ ಮಾರ್ಕೆಟ್‌ನ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಿ, ಅಲ್ಲಿನ ಮಾರುಕಟ್ಟೆಯ ಹೊಸ ಸ್ಥಳಕ್ಕೆ ಹಸ್ತಾಂತರಿಸಲಾಯಿತು.
ಪಶ್ಚಿಮ ವಲಯ:
ಗೋವಿಂದರಾಜನಗರ ವಿಭಾಗದ ನಾಗರಬಾವಿ, ಮಲ್ಲೇಶ್ವರ ವಿಭಾಗದ ಅರಮನೆ ನಗರ, ಚಾಮರಾಜಪೇಟೆ ವಿಭಾಗದ ಪಾದರಾಯನಪುರ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ನಡೆಸಿ ರಸ್ತೆ ಇಕ್ಕೆಲಗಳಲ್ಲಿನ ಕಟ್ಟಡ ಭಗ್ನಾವಶೇಷ ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
ಆರ್‌ಆರ್ ನಗರ ವಲಯ:
ರಾಜರಾಜೇಶ್ವರಿನಗರ ವಲಯದ ಕೆಂಗೇರಿ ವಿಭಾಗದ ಸಿಂಡಿಕೇಟ್ ಲೇಔಟ್ (ಶಾಪ್ ರೈಟ್) ನಿಂದ ಅಂದ್ರಹಳ್ಳಿ ವೃತ್ತ, ಅಂದ್ರಹಳ್ಳಿ ಮುಖ್ಯರಸ್ತೆವರೆಗೆ ಹಾಗೂ ರಾಜರಾಜೇಶ್ವರಿನಗರ ವಿಭಾಗದ ಟಿವಿಎಸ್ ಕ್ರಾಸ್ ಜಂಕ್ಷನ್‌ನಿಂದ ಪೀಣ್ಯ ಪೋಲಿಸ್ ಠಾಣೆ ಮಾರ್ಗವಾಗಿ ತುಮಕೂರು ರಸ್ತೆಯವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಇದೇ ವೇಳೆ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದವರ ತಪಾಸಣೆ ನಡೆಸಿ 47 ಪ್ರಕರಣಗಳಿಂದ 71,500 ರೂ. ದಂಡವನ್ನು ವಸೂಲು ಮಾಲಾಯಿತು.
ಯಲಹಂಕ ವಲಯ:
ಕೋಗಿಲು ಮುಖ್ಯರಸ್ತೆ ಹಾಗೂ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಮದರ್ ಡೇರಿ ಕ್ರಾಸ್, ವೀರ ಸಾವರ್ಕರ್ ಮೇಲ್ಸೇತುವೆ ಕೆಳಭಾಗದಲ್ಲಿನ ತಳ್ಳುಗಾಡಿಗಳನ್ನು, ಯಲಹಂಕ ಉಪನಗರದ 4ನೇ ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿನ ಅಂಗಡಿ ಸಾಮಗ್ರಿಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು. ಇದೇ ವೇಳೆ ತಿರುಮೇನಹಳ್ಳಿ ಮುಖ್ಯರಸ್ತೆಯಲ್ಲಿನ ಬೇಕರಿಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಮಾನ್ಯತೆ ಪಡೆದ ಬಣ್ಣಗಳ ಬಳಕೆಯನ್ನು ಪರಿಶೀಲಿಸಿ, ಉಲ್ಲಂಘನೆ ಪ್ರಕರಣಗಳಿಗೆ ನೋಟಿಸ್ ನೀಡಲಾಯಿತು.
ಪ್ಲಾಸ್ಟಿಕ್ ಬಳಕೆ ವಿರುದ್ಧ ದಂಡಾಸ್ತ್ರ:
ಯಲಹಂಕ ವಿಭಾಗದಲ್ಲಿ ಹಲವು ಮಳಿಗೆಗಳನ್ನು ತಪಾಸಣೆ ನಡೆಸಿ ಏಕ ಬಳಕೆ ಪ್ಲ್ಯಾಸ್ಟಿಕ್ ಉಪಯೋಗಿಸುತ್ತಿದ್ದದ್ದನ್ನು ಗಮನಿಸಿ 33 ಪ್ರಕರಣಗಳಿಂದ 35,500 ರೂ. ದಂಡದ ಮೊತ್ತವನ್ನು ವಸೂಲು ಮಾಡಲಾಯಿತು. ಜತೆಗೆ 25 ಕೆಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಯಿತು. ಬ್ಯಾಟರಾಯನಪುರ ವಿಭಾಗದಲ್ಲಿ 24 ಪ್ರಕರಣಗಳಿಂದ 23,500 ರೂ. ದಂಡದ ಮೊತ್ತ ವಸೂಲು ಮಾಡಿ 60 ಕೆಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.