ಬಿಬಿಎಂಪಿಯಿಂದ ಘನತ್ಯಾಜ್ಯ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ

bbmp karmika
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ಘನತ್ಯಾಜ್ಯ ವಿಲೇವಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲ್ಯುಎಂಎಲ್), ಸಿ40 ನಗರಗಳ ಸಹಯೋಗ ಹಾಗೂ ಸಾಹಸ್ ಸಂಸ್ಥೆಯ ಸಹಕಾರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸುವ ಮೂಲಕ ಅವರಲ್ಲಿರುವ ಆರೋಗ್ಯ ಸಮಸ್ಯೆ ಪತ್ತೆಹಚ್ಚಿ ತುರ್ತು ವೈದ್ಯಕೀಯ ಸಹಾಯ ಮಾಡಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳನ್ನು ಬಲಪಡಿಸಬೇಕು. ಆಯಾ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರ ಬಗ್ಗೆ ಆರೋಗ್ಯ ಕಾಳಜಿ ವಹಿಸಬೇಕು. ಜತೆಗೆ ಗುರುತಿನ ಚೀಟಿಗಳನ್ನು ನವೀಕರಿಸಬೇಕು. ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆಯಡಿ ತ್ಯಾಜ್ಯ ನಿರ್ವಹಣೆಯಲ್ಲಿರುವ ಮುಂಚೂಣಿ ಕಾರ್ಮಿಕರಿಗಾಗಿ ಹವಾಮಾನ ಕ್ರಿಯೆ ಕುರಿತು ತರಬೇತಿ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಶ್ಲಾಘಿಸಿದರು.

ಈ ವೇಳೆ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ವಲಯ ಆಯುಕ್ತರಾದ ಸ್ನೇಹಲ್, ರಮೇಶ್, ದಿಗ್ವಿಜಯ್ ಬೋಡ್ಕೆ, ಘನತ್ಯಾಜ್ಯ ನಿಗಮದ ಸಿಒಒ ರಮಾಮಣಿ, ಮುಖ್ಯ ಅಭಿಯಂತರರಾದ ಲೋಕೇಶ್, ಬಸವರಾಜ್ ಕಬಾಡೆ ಹಾಜರಿದ್ದರು.

5 ವಲಯಗಳಲ್ಲಿ ತರಬೇತಿ:

ಪಾಲಿಕೆಯ ಪೂರ್ವ, ಪಶ್ಚಿಮ, ದಕ್ಷಿಣ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯ ಸೇರಿ ಐದು ವಲಯಗಳಲ್ಲಿ 600ಕ್ಕಿಂತ ಹೆಚ್ಚು ಮುಂಚೂಣಿಯ ತ್ಯಾಜ್ಯ ಕಾರ್ಮಿಕರು ಹಾಗೂ ಅಧಿಕಾರಿಗಳಿಗೆ ಮೂರು ಹಂತದ ತರಬೇತಿ ನೀಡಲಾಗಿದೆ. ಕಳೆದ ಮಾರ್ಚ್-ಜೂನ್ ಮಧ್ಯೆ ನಡೆದ ಸಾಮಾಜಿಕ ಸಂವಾದದ ಮೂಲಕ 75 ತ್ಯಾಜ್ಯ ಕಾರ್ಮಿಕರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡು ಪರಿಹಾರ ಕಂಡುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಜ್ಯ ವಿಭಾಗದಲ್ಲಿ ಕಾರ್ಯನಿವಹಿಸುತ್ತಿರುವ ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್ಸ್, ಲಿಂಕ್ ವರ್ಕರ್ರ್ಸ್‌ ಹಾಗೂ ಒಣ ತ್ಯಾಜ್ಯ ಸಂಗ್ರಹಣಾ ಘಟಕದ ಸಿಬ್ಬಂದಿಗಳಿಗೆ ಆಯಾ ವಲಯ ಮಟ್ಟದಲ್ಲಿ ತರಬೇತಿ ಆಯೋಜಿಸಿ ತ್ಯಾಜ್ಯ ವಿಲೇವಾರಿ, ಬಲ್ಕ್ ವೇಸ್ಟ್, ತ್ಯಾಜ್ಯದಿಂದ ಆದಾಯ ಗಳಿಸುವುದು, ಸುರಕ್ಷಾ ಕ್ರಮ ಸೇರಿ ಇನ್ನಿತರ ವಿಷಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ.

- ಪ್ರೀತಿ ಗೆಹ್ಲೋಟ್, ಬಿಬಿಎಂಪಿ ವಿಶೇಷ ಆಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net