ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2024-25ನೇ ಸಾಲಿನಲ್ಲಿ ದಾಖಲೆಯ 4,930 ಕೋಟಿ ರೂ. ಮೊತ್ತದ ಆಸ್ತಿ ತೆರಿಗೆಯನ್ನು ಸಂಗ್ರಹಿಸಿದೆ. ಹಿಂದಿನ ಸಾಲಿನಲ್ಲಿ (2023-24) 3,918 ಕೋಟಿ ರೂ. ವಸೂಲು ಮಾಡಿದ್ದು, ಹೆಚ್ಚುವರಿಯಾಗಿ 1,012 ಕೋಟಿ ರೂ. ಪಾಲಿಕೆ ಬೊಕ್ಕಸಕ್ಕೆ ಸಂದಾಯವಾಗಿದೆ.
ದಾಖಲೆ ಮೊತ್ತದ ಆಸ್ತಿ ತೆರಿಗೆ ಸಂಗ್ರಹ ಹೆಚ್ಚುವಲ್ಲಿ ಒಂದು ಬಾರಿ ಪಾವತಿ ಯೋಜನೆ (ಒಟಿಎಸ್) ಪ್ರಮುಖ ಪಾತ್ರ ವಹಿಸಿದೆ. ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳ ಮಾಲೀಕರಿಗೆ ನೋಟಿಸ್ ನೀಡಿ ವಸೂಲಾತಿ ಮೇಲೆ ನಿಗಾ ಇಟ್ಟ ಪರಿಣಾಮ ದೊಡ್ಡ ಮೊತ್ತವು ಪಾಲಿಕೆ ಕೈಸೇರಿದೆ. ಇದರ ಜತೆಗೆ ವಸೂಲಾತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಕಾರಣ ಇದೇ ಮೊದಲ ಬಾರಿಗೆ 5 ಸಾವಿರ ಕೋಟಿ ರೂ. ಸಮೀಪಕ್ಕೆ ಆದಾಯ ವಸೂಲಾತಿ ಆಗಿದೆ.
2024-25ನೇ ಸಾಲಿನ 5,125 ಕೋಟಿ ರೂ. ತೆರಿಗೆ ಗುರಿ ಹೊಂದಿದ್ದು, 4,930 ಕೋಟಿ ರೂ. ವಸೂಲಾಗಿದೆ. 2025-26ನೇ ಸಾಲಿನಲ್ಲೂ ಹೆಚ್ಚು ಮೊತ್ತದ ಆಸ್ತಿತೆರಿಗೆ ವಸೂಲು ಮಾಡುವ ಹಿನ್ನೆಲೆಯಲ್ಲಿ 6,000 ಕೋಟಿ ರೂ. ಗುರಿ ಹೊಂದಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಹದೇವಪುರ ವಲಯ ಮುಂದು:
ಬಿಬಿಎಂಪಿಯ ಎಂಟೂ ವಲಯಗಳ ಪೈಕಿ ಮಹದೇವಪುರದಲ್ಲಿ ಅತ್ಯಧಿಕ 1,310.58 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ನಂತರ ಪೂರ್ವ ಹಾಗೂ ದಕ್ಷಿಣ ವಲಯದಲ್ಲಿ ಕ್ರಮವಾಗಿ 834.14 ಕೋಟಿ ರೂ. ಮತ್ತು 733.65 ಕೋಟಿ ರೂ. ಸಂಗ್ರಹವಾಗಿದೆ. ದಾಸರಹಳ್ಳಿ ವಲಯದಲ್ಲಿ ಅತಿ ಕಡಿಮೆ (152.94 ಕೋಟಿ ರೂ.) ವಸೂಲಾಗಿದೆ. ವಸೂಲಾತಿ ಗುರಿಯಲ್ಲಿ ಯಲಹಂಕ ವಲಯವು ಶೇ. 104.36 (464.66 ಕೋಟಿ ರೂ.) ಮೊದಲ ಸ್ಥಾನದಲ್ಲಿದೆ.
ವಲಯವಾರು ಆಸ್ತಿತೆರಿಗೆ ಸಂಗ್ರಹ ವಿವರ:
ವಲಯದ ಹೆಸರು ಸಂಗ್ರಹ* ಶೇಕಡ
ಮಹದೇವಪುರ 1,310.58 ಶೇ. 100.12
ಪೂರ್ವ 834.14 ಶೇ. 93.52
ದಕ್ಷಿಣ 733.65 ಶೇ. 95.34
ಪೂರ್ವ 562.61 ಶೇ. 92.71
ಬೊಮ್ಮನಹಳ್ಳಿ 490.03 ಶೇ. 83.75
ಯಲಹಂಕ 464.66 ಶೇ. 104.36
ಆರ್‌ಆರ್ ನಗರ 381.75 ಶೇ. 87.89
ದಾಸರಹಳ್ಳಿ 152.94 ಶೇ. 92.72
* ಕೋಟಿ ರೂ.ಗಳಲ್ಲಿ
ಹೊಸ ವಲಯಕ್ಕೆ ಹೆಚ್ಚಿನ ಗುರಿ ನಿಗದಿ:
ಹಿಂದಿನ ಸಾಲಿನಲ್ಲಿ ದಾಖಲೆಯ ಆಸ್ತಿತೆರಿಗೆ ಸಂಗ್ರಹ ಆಗಿರುವ ಹಿನ್ನೆಲೆ ಹೊಸ ವಲಯಗಳಿಗೆ ಶೇ.25 ಹೆಚ್ಚುವರಿ ತೆರಿಗೆ ಸಂಗ್ರಹಿಸುವ ಗುರಿ ನಿಗದಿ ಮಾಡಲು ಪಾಲಿಕೆ ಮುಂದಾಗಿದೆ. ಹೊಸ ವಲಯಗಳಲ್ಲಿ ಈವರೆಗೆ ತೆರಿಗೆ ವ್ಯಾಪ್ತಿಗೆ ಒಳಪಡದ ಸ್ವತ್ತುಗಳನ್ನು ಗುರುತಿಸಿ ಅವುಗಳಿಂದ ಟ್ಯಾಕ್ಸ್ ಸಂಗ್ರಹಿಸಲು ಗಂಭೀರ ಚಿಂತನೆ ನಡೆದಿದೆ. ಹೊಸ ವಲಯಗಳ ಪೈಕಿ ಮಹದೇವಪುರದಲ್ಲಿ ಮಾತ್ರ ಅತ್ಯಧಿಕ ತೆರಿಗೆ ಸಂಗ್ರಹವಾಗಿದೆ. ಈ ಬಾರಿ ಆರ್.ಆರ್.ನಗರ, ದಾಸರಹಳ್ಳಿ, ಬೊಮ್ಮನಹಳ್ಳಿ ಹಾಗೂ ಯಲಹಂಕ ವಲಯಗಳಿಗೆ ಅಧಿಕ ಮೊತ್ತದ ಸಂಗ್ರಹಿಸಲು ಗುರಿ ನೀಡಲು ಪಾಲಿಕೆಯ ಕಂದಾಯ ವಿಭಾಗವು ಲೆಕ್ಕಾಚರ ನಡೆಸಿದೆ.
ಆಸ್ತಿ ತೆರಿಗೆ ಸಂಗ್ರಹ ಹೆಚ್ಚುವಲ್ಲಿ ಒಟಿಎಸ್, ವ್ಯವಸ್ಥಿತ ಕೆಲಸ ನಿರ್ವಹಣೆ ಮತ್ತು ತಂತ್ರಜ್ಞಾನ ಆಧಾರಿತ ಅಂಶಗಳ ಬಳಸಿಕೊಳ್ಳಲಾಯಿತು. ಜತೆಗೆ ವಸೂಲಾತಿಗಾಗಿ ಮನೆ ಮನೆಗೆ ನಿರಂತರವಾಗಿ ಭೇಟಿ ನೀಡಿಕೆ ಒತ್ತು ನೀಡಲಾಗಿತ್ತು. ಮುಂದಿನ ದಿನಗಳಲ್ಲೂ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಿ ತೆರಿಗೆ ವಸೂಲಾತಿ ಮಾಡಲಾಗುವುದು.
- ಮುನಿಶ್ ಮೌದ್ಗಿಲ್, ಕಂದಾಯ ವಿಭಾಗದ ವಿಶೇಷ ಆಯುಕ್ತ, ಬಿಬಿಎಂಪಿ