

ಬೆಂಗಳೂರು: ಬಿಬಿಎಂಪಿ 2025-26ನೇ ಸಾಲಿನ ಮೊದಲ ಮೂರೂವರೆ ತಿಂಗಳ ಅವಧಿಯಲ್ಲಿ 3 ಸಾವಿರ ಕೋಟಿ ರೂ. ಮೊತ್ತದಷ್ಟು ಆಸ್ತಿ ತೆರಿಗೆಯನ್ನು ಸಂಗ್ರಹಿಸಿದೆ.
ಪ್ರಸಕ್ತ ಸಾಲಿನ ಪಾಲಿಕೆಯು 6,256 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ. ಇದಕ್ಕೆ ಎದುರಾಗಿ ಮಂಗಳವಾರದವರೆಗೆ (ಜು.15) ಶೇ.47 ಪ್ರಮಾಣದಷ್ಟು ಟ್ಯಾಕ್ಸ್ ವಸೂಲು ಮಾಡಿದೆ. ಕಳೆದ ವರ್ಷ 5,210 ಕೋಟಿ ರೂ. ಗುರಿಗೆ ಎದುರಾಗಿ 4,930 ಕೋಟಿ ರೂ. ತೆರಿಗೆ ವಸೂಲು ಮಾಡಲಾಗಿತ್ತು. ಇದು ಪಾಲಿಕೆ ಇತಿಹಾಸದಲ್ಲಿ ಈವರೆಗೆ ಅತಿ ಹೆಚ್ಚಿ ಆಸ್ತಿತೆರಿಗೆ ಸಂಗ್ರಹಿಸಿದ ದಾಖಲೆಯಾಗಿತ್ತು. ಕಳೆದ ಸಾಲಿನಲ್ಲಿ ಬಾಕಿ ವಸೂಲಿಗಾಗಿ ಜಾರಿ ಮಾಡಿದ್ದ ಒಂದು ಬಾರಿ ಇತ್ಯರ್ಥ ಯೋಜನೆ (ಒಟಿಎಸ್) ಮೂಲಕ ಹೆಚ್ಚು ತೆರಿಗೆ ವಸೂಲಾಗಿತ್ತು. ಈ ಬಾರಿ ಒಟಿಎಸ್ ಇಲ್ಲದ ಕಾರಣ ಒಂದಿಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ವಸೂಲಿ ನಿರಂತರವಾಗಿರಲಿ:
ಪಾಲಿಕೆ ವ್ಯಾಪ್ತಿಯಲ್ಲಿ 22 ಲಕ್ಷ ಸ್ವತ್ತುಗಳಿವೆ. ಈ ಪೈಕಿ ಕೆಲವು ಸ್ವತ್ತುಗಳಿಂದ ತೆರಿಗೆ ವಸೂಲಾತಿ ಆಗುತ್ತಿಲ್ಲ. ನಾನಾ ಕಾರಣ ನೀಡಿ ಸ್ವತ್ತುದಾರರು ಟ್ಯಾಕ್ಸ್ ಕಟ್ಟುತ್ತಿಲ್ಲ. ಹಿಂದಿನ ಸಾಲಿನಂತೆ ಈ ಬಾರಿಯೂ ಕಟ್ಟುನಿಟ್ಟಾಗಿ ತೆರಿಗೆ ಸಂಗ್ರಹಿಸಬೇಕು. ಇ-ಖಾತಾ ಕಡ್ಡಾಯ ಮಾಡಿರುವುದರಿಂದ ಆಯಾ ಆಸ್ತಿ ಮಾಲೀಕರಿಂದ ಬರಬೇಕಿರುವ ಹಿಂಬಾಕಿ ವಸೂಲು ಮಾಡಲು ಆದ್ಯತೆ ನೀಡಬೇಕು. ಈ ಪ್ರಕ್ರಿಯೆ ನಿರಂತರವಾಗಿ ಇರುವಂತೆ ಕಂದಾಯ ವಿಭಾಗದ ಎಲ್ಲ ಹಿರಿಯ/ಕಿರಿಯ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.
ವಲಯವಾರು ಆಸ್ತಿತೆರಿಗೆ ಸಂಗ್ರಹ ವಿವರ (2025ರ ಜು.13ರವರೆಗೆ):
ವಲಯ ಗುರಿ ಸಂಗ್ರಹ
ಪೂರ್ವ 1,042 529.55
ಪಶ್ಚಿಮ 706 309.82
ದಕ್ಷಿಣ 895 451.91
ಯಲಹಂಕ 561 273.80
ದಾಸರಹಳ್ಳಿ 196 91.52
ಮಹದೇವಪುರ 1,621 789.68
ಬೊಮ್ಮನಹಳ್ಳಿ 711 311.37
ಆರ್‌ಆರ್‌ನಗರ 524 210.01
ನಿವ್ವಳ ಒಟ್ಟು 6,256 2,966.94
(ಅಂಕಿ-ಅಂಶ: ಕೋಟಿ ರೂ.ಗಳಲ್ಲಿ)