ಮಳಿಗೆದಾರರಿಗೆ ತಿಳಿವಳಿಕೆ ಪತ್ರ ನೀಡಲು ಬಿಬಿಎಂಪಿ ಮುಖ್ಯಸ್ಥರ ಸೂಚನೆ

name board
Published on

ಬೆಂಗಳೂರು: ನಗರದ ಎಲ್ಲ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ಕನ್ನಡ ಭಾಷೆಯನ್ನು ಬಳಸದಿರುವವರಿಗೆ ತಿಳಿವಳಿಕೆ ಪತ್ರ ನೀಡಿ ಕೂಡಲೇ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವಲಯ ಆಯುಕ್ತರಿಗೆ ಸೂಚನೆ ನೀಡಿದರು.

ಈ ಸಂಬಂಧ ಪಾಲಿಕೆಯ ಎಲ್ಲ ವಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಿದೆ. ಇದಕ್ಕಾಗಿ ನಿಯಮಾವಳಿಯಂತೆ ಸ್ಪಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕು. ನಿಯಮಗಳ ಬಗ್ಗೆ ಗೊಂದಲ ಎದುರಾದಲ್ಲಿ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.

ನಗರದಲ್ಲಿರುವ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು ಹಾಗೂ ಎಲ್ಲ ವಲಯದ ಉದ್ದಿಮೆಗಳನ್ನು ಜ.15ರ ಒಳಗೆ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಬೇಕು. ಈ ಅವಧಿಯಲ್ಲಿ ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ತಿಳಿವಳಿಕೆ ಪತ್ರ ನೀಡಿ ಜಾಗೃತಿ ಮೂಡಿಸಬೇಕು ಎಂದರು.

ಒತ್ತಡಕ್ಕೆ ಮಣಿಯದೆ ಕಾರ್ಯನಿರ್ವಹಿಸಿ:

ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ. ಈ ವಿಚಾರವಾಗಿ ಸ್ವತಃ ಮುಖ್ಯಮಂತ್ರಿ ಕಾಯ್ದೆ ಜಾರಿಗೆ ತಾಕೀತು ಮಾಡಿದ್ದಾರೆ. ಹೀಗಾಗಿ ಆಯಾ ವಲಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿಯದೆ ಕರ್ತವ್ಯ ನಿರ್ವಹಿಸಬೇಕು. ಕನ್ನಡ ಭಾಷೆಯನ್ನು ಬಳಸದ ಉದ್ದಿಮೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಬಾರದು ಎಂದು ತುಷಾರ್ ಗಿರಿನಾಥ್ ಎಚ್ಚರಿಸಿದರು.

ಸಭೆಯಲ್ಲಿ ವಲಯ ಆಯುಕ್ತರಾದ ಇಬ್ರಾಹಿಂ ಮೈಗುರ್, ಪ್ರೀತಿ ಗೆಹ್ಲೋಟ್, ಎಲ್ಲ ವಲಯಗಳ ಜಂಟಿ ಆಯುಕ್ತರು, ಉಪ ಆಯುಕ್ತರು (ಆಡಳಿತ), ಜಾಹೀರಾತು ವಿಭಾಗದ ಉಪ ಆಯುಕ್ತರು, ಮುಖ್ಯ ಆರೋಗ್ಯಾಧಿಕಾರಿ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net