‘ಸಾರಿ’ ಪ್ರಕರಣಗಳ ಪರೀಕ್ಷೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ

bbmp office
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಎದುರಿಸಲು ಪಾಲಿಕೆ ಸಜ್ಜಾಗಿದ್ದು, ಸರ್ಕಾರ ನಿಡುವ ಸೂಚನೆ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಶಾಸ್ವಕೋಶ ಸಂಬಂಧಿ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳ ಸಾರಿ ಪ್ರಕರಣಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಹೇಳಿದ್ದಾರೆ.

ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ 71 ಸಾರಿ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ದಕ್ಷಿಣ ಹಾಗೂ ಮಹದೇವಪುರ ವಲಯದಲ್ಲಿ ಕ್ರಮವಾಗಿ 16 ಮತ್ತು 14 ಪ್ರಕರಣಗಳು ವರದಿಯಾಗಿವೆ. ಟೆಸ್ಟಿಂಗ್ ಮಾಡಲು ಪರೀಕ್ಷಾ ಕಿಟ್‌ಗಳ ದಾಸ್ತಾನು ಇದೆ. ಹಾಗಾಗಿ ವೃಥಾ ಭಯಪಡಿವ ಅಗತ್ಯ ಇಲ್ಲ. ಸರ್ಕಾರ ಸೂಚಿಸುವ ಮಾದರಿಯಲ್ಲೇ ಪಾಲಿಕೆ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಮಾಸ್ಕ್ ಕಡ್ಡಾಯ ಮಾಡಿಲ್ಲ:

ನಗರದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಮಾಸ್ಕ್ ಧರಿಸುವಂತೆ ಕಡ್ಡಾಯ ಮಾಡಿಲ್ಲ. ಸರ್ಕಾರದಿಂದಲೂ ಅಂತಹ ಸೂಚನೆ ಬಂದಿಲ್ಲ. ಮೆಟ್ರೋ ಪ್ರಯಾಣಿಕರಿಗೂ ಮಾಸ್ಕ್ ಧರಿಸಲು ಬಿಎಂಆರ್‌ಸಿಎಲ್ ಸೂಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಮಳೆಗಾಲದ ಹಿನ್ನೆಲೆಯಲ್ಲಿ ಶೀತ ಸಂಬಂಧಿ ರೋಗಗಳು ಹರಡುವ ಸಾಧ್ಯತೆ ಇದೆ. ಈ ಕಾರಣದಿಂದ ಡೆಂಘೆ ಎದುರಿಸಲು ಈಗಾಗಲೇ ಪಾಲಿಕೆ ಸಜ್ಜಾಗಿದೆ. ಎಲ್ಲ ವಲಯಗಳಲ್ಲೂ ಔಷಧ ಸಿಂಪಡಣೆ ಹಾಗೂ ಫಾಗ್ಗಿಂಗ್ ಮಾಡಲಾಗುತ್ತಿದೆ. ಆಯಾ ವಲಯಗಳಲ್ಲಿ ಆರೋಗ್ಯಾಧಿಕಾರಿಗಳು ನಿಗಾ ಇರಿಸಿದ್ದಾರೆ ಎಂದು ಮಹೇಶ್ವರ್ ರಾವ್ ವಿವರಿಸಿದರು.

ಗುಂಡಿ ಮುಚ್ಚಲು ಕ್ರಮ:

ನಗರದಲ್ಲಿ ಮಳೆಯಿಂದ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಪಾಲಿಕೆ ಗಮನಿಸುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಗುಂಡಿ ಉಂಟಾದಲ್ಲಿ ಮೂಲಸೌಕರ್ಯ ವಿಭಾಗವು ತಕ್ಷಣವೇ ಅಂತಹ ಕಡೆಗಳಲ್ಲಿ ಪರಿಹಾರ ಕೈಗೊಳ್ಳುತ್ತಿದೆ. ಇತರೆಡೆ ಉಂಟಾಗಿರುವ ಗುಂಡಿಗಳನ್ನು ಮಳೆ ನಿಂತ ತಕ್ಷಣ ದುರಸ್ತಿಗೊಳಿಸಲಾಗುವುದು. ವೆಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಬಳಸಿ ಗುಂಡಿ ಮುಚ್ಚುವ ಕೆಲಸವನ್ನೂ ಮುಂದುವರಿ ಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net