ರಸ್ತೆಬದಿ ತಾಜ್ಯ ಬಿಸಾಡುವವರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ

comms hebbal visit
Published on

ಬೆಂಗಳೂರು: ಮಹಾನಗರದಲ್ಲಿ ರಸ್ತೆಬದಿ ತ್ಯಾಜ್ಯ ಬಿಸಾಡುವ ಜನರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೆಬ್ಬಾಳ ಮೇಲ್ಸೇತುವೆಯ ಬಳಿ ಪಾದಚಾರಿ ಮಾರ್ಗ ಹಾಗೂ ಸ್ವಚ್ಛತೆ ಸಂಬಂಧ ಬುಧವಾರ ಸ್ಥಳ ಪರಿಶೀಲನೆ ನಡೆಸಿದ ಅವರು ಈ ಸೂಚನೆ ನೀಡಿದರು. ಇದೇ ವೇಳೆ ಕಸ ಬಿಸಾಡುವವರ ಮೇಲೆ ನಿಗಾವಹಿಸಿ ಅಂತಹವರಿಗೆ ದಂಡ ವಿಧಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿಯ ಪಾದಚಾರಿ ಮಾರ್ಗ ಪರಿಶೀಲಿಸಿ, ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಗದಂತೆ ಫುಟ್‌ಪಾತ್ ನಿರ್ಮಿಸಬೇಕು. ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಬೇಕು ಎಂದು ಕಟ್ಟಪ್ಪಣೆ ಮಾಡಿದರು.

ಸೌಂದರ್ಯೀಕರಣಕ್ಕೆ ಸೂಚನೆ:

ಕೆ.ಆರ್.ಪುರ ಕಡೆಯಿಂದ ನಗರದೊಳಗೆ ಬರುವ ಕಡೆಗೆ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಕೆಳಭಾಗದಲ್ಲಿನ ಖಾಲಿ ಜಾಗ ಅನ್ಯ ಕಾರ್ಯಕ್ಕೆ ಬಳಕೆಯಾಗದಿರಲು ಅಲ್ಲಿನ ಜಾಗವನ್ನು ಬಳಸಿಕೊಂಡು ಸೌಂದರ್ಯೀಕರಣ ಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ತಪಾಸಣೆ ವೇಳೆ ಬೆಂಗಳೂರು ಘನತ್ಯಾಜ್ಯ ನಿಗಮದ ಮುಖ್ಯ ಪ್ರಧಾನ ವ್ಯವಸ್ಥಾಪಕ ಲೋಕೇಶ್, ಡಿಜಿಎಂ ಚಂದ್ರಶೇಖರ್, ಎಜಿಎಂ ರಮಾಮಣಿ ಹಾಜರಿದ್ದರು.

ಶೋರೂಂಗೆ 5,000 ರೂ. ದಂಡ:

ಹೆಬ್ಬಾಳ ರಸ್ತೆ ಬದಿಯಿರುವ ಯಮಹಾ ಶೋರೂಂ ತ್ಯಾಜ್ಯವನ್ನು ರಸ್ತೆ ಬದಿ ಬಿಸಾಡಿದ್ದರು. ಇದನ್ನು ಗಮನಿಸಿದ ಮುಖ್ಯ ಆಯುಕ್ತರು, ಸ್ವಚ್ಛತೆ ಕಾಪಾಡದ ಶೋರೂಂಗೆ 5 ಸಾವಿರ ರೂ. ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆ ಬಳಿಕ ಮಾರ್ಷಲ್ ಕಡೆಯಿಂದ ಸ್ಥಳದಲ್ಲೇ ದಂಡ ವಸೂಲು ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net