

ಬೆಂಗಳೂರು: ಮುಂಬರುವ ಜುಲೈ 27ರೊಳಗೆ ಪಾಲಿಕೆ ವತಿಯಿಂದ ಪ್ರತ್ಯೇಕವಾಗಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್ ಗುರುವಾರ ಪ್ರಕಟಿಸಿದರು.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಕೆಂಪೇಗೌಡರ 515ನೇ ಜಯಂತ್ಯುತ್ಸವ ನಿಮಿತ್ತ ನಾಡಪ್ರಭುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರವನ್ನು ನಿರ್ಮಿಸಿರುವ ಕೇಂಪೇಗೌಡರು ಪ್ರಾತ: ಸ್ಮರಣೀಯರು. ಬೆಂಗಳೂರನ್ನು ಕೆಂಪೇಗೌಡರಿಲ್ಲದೆ ನೆನೆಪಿಸಿಕೊಳ್ಳಲಾಗದು, ಕೆಂಪೇಗೌಡರನ್ನು ಬೆಂಗಳೂರು ಇಲ್ಲದೆ ಸ್ಮರಿಸಿಕೊಳ್ಳಲು ಆಗದು. ಹಾಗಾಗಿ ನಾಡಪ್ರಭುಗಳ ಜಯಂತಿಯನ್ನು ನಾಡಹಬ್ಬವಾಗಿ ಆಚರಿಸಲಾಗುತ್ತದೆ. ಮುಂದಿನ ಒಂದು ತಿಂಗಳೊಳಗೆ ಕೆಂಪೇಗೌಡ ಜಯಂತಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಶಸ್ತಿ ನೀಡಿಕೆಗೆ ಸಮಿತಿ:
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಕೆಂಪೇಗೌಡರು ನಗರ ಕಟ್ಟುವಾಗ ಕಂಡಿದ್ದ ಕನಸಿಗಿಂತ ಈಗ ಬೃಹತ್ತಾಗಿ ಬೆಳೆದಿದೆ. ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ನಗರವನ್ನು ಇನ್ನಷ್ಟು ಬೆಳಸಬೇಕಿದೆ. ಇದಕ್ಕಾಗಿ ಕೆಂಪೇಗೌಡರು ಹಾಕಿಕೊಟ್ಟಿರುವ ಹಾದಿಯಲ್ಲಿ ಮುನ್ನಡೆಯುವ ಅಗತ್ಯ ಇದೆ ಎಂದರು.
ಕಳೆದ ವರ್ಷ ಪಾಲಿಕೆಯಿಂದ ಕೆಂಪೇಗೌಡ ಜಯಂತಿಯನ್ನು ಕಾರಣಾಂತರದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಹಿಂದಿನ ಪದ್ಧತಿಯಂತೆ ಪಾಲಿಕೆ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರಶಸ್ತಿ ನೀಡುವ ಸಂಬಂಧ ಹಿರಿಯ ಅಧಿಕಾರಿಗಳು ಚರ್ಚಿಸಿ ನಿರ್ಧರಿಸಲಾಗುವುದು. ನಾಗರಿಕರಿಗೆ ನೀಡಲಾಗುವ ಪ್ರಶಸ್ತಿಗೆ ಸರ್ಕಾರದ ಒಪ್ಪಿಗೆ ಪಡೆದು ಆಯ್ಕೆ ಸಮಿತಿ ರಚಿಸಿ ಅರ್ಹರನ್ನು ಆರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಪಾಲಿಕೆ ಹಣ:
ನಾಡಪ್ರಭು ಕೆಂಪೇಗೌಡ 515ನೇ ಜಯಂತಿಯ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಬಿಬಿಎಂಪಿಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಕೆಲವರು ಆಕ್ಷೇಪಿಸಿ ಸರ್ಕಾರವೇ ನೇರವಾಗಿ ಹಣ ಬಿಡುಗಡೆ ಮಾಡಬೇಕಿತ್ತು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ತುಷಾರ್ ಗಿರಿನಾಥ್, ಬೆಂಗಳೂರು ನಗರವನ್ನು ನಿರ್ಮಿಸಿ ನಾಡು ಹಾಗೂ ದೇಶಕ್ಕೆ ಕೀರ್ತಿ ತಂದಿರುವ ಕೆಂಪೇಗೌಡ ಸಾಧನೆಯನ್ನು ಎಲ್ಲರೂ ಮನಗಾಣಬೇಕಿದೆ. ಇದಕ್ಕಾಗಿ ನಾಡಪ್ರಭುಗಳ ನಾಡು ಕಟ್ಟಿರುವ ಕುರಿತು ಪ್ರತೀ ತಾಲೂಕಿಗೆ ತಲಾ 1 ಲಕ್ಷ ರೂ. ನೀಡಿ ವಿಚಾರಸಂಕಿರಣ ಅಥವಾ ವಿದ್ಯಾರ್ಥಿಗಳಿಗೆ ಚರ್ಚಾಸ್ಪರ್ಧೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಜಾಗೃತ ನಾಗರಿಕರಾಗಲು ಅವಕಾಶ ಸಿಗಲಿದೆ ಎಂದು ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.