

ಬೆಂಗಳೂರು: ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಾರ್ಷಿಕ ಬಜೆಟ್ ಅನ್ನು ರಾತ್ರೋರಾತ್ರಿ ದಿಢೀರ್ ಮಂಡಿಸಲಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಸುಕಿನ ಗುದ್ದಾಟದ ಆರೋಪಗಳ ಬೆನ್ನಲ್ಲೇ ಆರ್ಥಿಕ ವರ್ಷದ ಕೊನೆಯ ದಿನ 2022-23ನೇ ಸಾಲಿನ ಬಜೆಟ್ ಸರ್ಕಾರದಿಂದ ಅನುಮೋದನೆಗೊಂಡಿದ್ದು, 10,480.93 ಕೋಟಿ ರೂ. ಗಾತ್ರದ ಬಜೆಟ್ ವಿವರಗಳನ್ನು ಬಿಬಿಎಂಪಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಸ್ವೀಕೃತಿಗಳು ಮತ್ತು ವೆಚ್ಚಗಳು ಹೆಚ್ಚು ಕಡಿಮೆ ಸರಿಸಮವಾಗಿದೆ. ಕಳೆದ ಬಾರಿ 9,951.8 ಕೋಟಿ ರೂ. ಮೊತ್ತದ ಬಜೆಟ್ಗೆ ಅನುಮೋದನೆ ನೀಡಲಾಗಿತ್ತು. ಅದಕ್ಕಿಂತ ಹೆಚ್ಚಿನ ಮೊತ್ತ, ಅಂದರೆ ಈ ಬಾರಿ 10,480.93 ಕೋಟಿ ರೂ. ಮೊತ್ತದ ಬಜೆಟ್ಗೆ ಅನುಮೋದನೆ ಪಡೆಯಲಾಗಿದೆ. ಮಾ. 30ಕ್ಕೆ ಬಜೆಟ್ ಮಂಡನೆಗೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಆದರೆ ಜನಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ಬಜೆಟ್ ಮಂಡನೆ ಕೈಬಿಡಲಾಯಿತು.
ಸಿಎಂ ಸಮ್ಮುಖದಲ್ಲಿ ಸಂಧಾನ: ಅಪಸ್ವರದ ಹಿನ್ನೆಲೆಯಲ್ಲಿ ಗುರುವಾರ ಸಿಎಂ ಅಧ್ಯಕ್ಷತೆಯಲ್ಲಿ ಪಾಲಿಕೆ ಬಜೆಟ್ಗೆ ಸಂಬಂಧಿಸಿದಂತೆ ಸಚಿವರು, ಬೆಂಗಳೂರು ಬಿಜೆಪಿ ಶಾಸಕರು, ಪಾಲಿಕೆ ಆಡಳಿತಾಧಿಕಾರಿ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಸಂಧಾನ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಸರ್ಕಾರದ ಸೂಚನೆಯಂತೆ ಸಚಿವರು, ಶಾಸಕರು ನೀಡುವ ಯೋಜನೆಗಳ ಪಟ್ಟಿ, ಕೆಲವು ಸಲಹೆಗಳನ್ನೂ ಸೇರಿಸಿ ಪರಿಷ್ಕರಣೆಯೊಂದಿಗೆ ಬಜೆಟ್ ಅನುಮೋದನೆಗೆ ಆಡಳಿತಾಧಿಕಾರಿಯನ್ನು ಕೋರಲಾಯಿತು. ರಾಕೇಶ್ ಸಿಂಗ್ ಸಹಿ ಹಾಕುವ ಮೂಲಕ ಅನುಮೋದಿಸಿದ್ದಾರೆ ಎಂದು ಹೇಳಲಾಗಿದೆ.
ಸಿಎಂ ಅಧ್ಯಕ್ಷತೆಯಲ್ಲಿ ಸಭೆ: ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲ ಶಾಸಕರು, ಬಿಬಿಎಂಪಿ ಚುನಾವಣೆ ಹೊಸ್ತಿಲಲ್ಲಿದೆ. ಬೆನ್ನಲ್ಲೇ ವಿಧಾನಸಭಾ ಚುನಾವಣೆ ಕೂಡ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಸ್ಥಳೀಯ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸುವುದರ ಜತೆಗೆ ಬಜೆಟ್ನಲ್ಲಿ ಅವುಗಳನ್ನು ಸೇರಿಸಬೇಕು. ಹಲವು ಜನಪ್ರಿಯ ಯೋಜನೆಗಳು ಕೂಡ ಅದರಲ್ಲಿ ಇರಬೇಕು’ ಎಂದು ಅಭಿಪ್ರಾಯಪಟ್ಟರು.
ವಿಳಂಬವಾದರೆ ಆರ್ಥಿಕ ನಿರ್ವಹಣೆ ಸಮಸ್ಯೆ: ಏ. 1ರಂದು ಹೊಸ ಆರ್ಥಿಕ ವರ್ಷ ಆರಂಭವಾಗುತ್ತದೆ. ಪಾಲಿಕೆಯ ಸ್ವಚ್ಛತಾ ಕಾರ್ವಿುಕರಿಂದ ಮುಖ್ಯ ಆಯುಕ್ತರವರೆಗೆ ಅಂದಾಜು 30 ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ವೇತನ, ಕಚೇರಿಗಳ ನಿರ್ವಹಣೆ, ತುರ್ತು ಸಂದರ್ಭದ ವೆಚ್ಚಗಳು ಹಾಗೂ ವಾಹನಗಳಿಗೆ ಇಂಧನ ಪೂರೈಕೆ ಸೇರಿ ಇತರೆ ದೈನಂದಿನ ಕಾರ್ಯಗಳಿಗೆ ಹಣ ಖರ್ಚು ಮಾಡಲು ಪಾಲಿಕೆಗೆ ಅಧಿಕಾರ ಇರುವುದಿಲ್ಲ. ಆಗ, ಸಮಸ್ಯೆ ಆಗುತ್ತಿತ್ತು. ಇಂತಹ ಸಂದರ್ಭದಲ್ಲಿ ಕೊನೇ ಪಕ್ಷ ಲೇಖಾನುದಾನವನ್ನಾದರೂ ಪಡೆಯುವುದು ಅನಿವಾರ್ಯ ಆಗುತ್ತದೆ.
2021-22ನೇ ಸಾಲಿನಲ್ಲಿ ಪಾಲಿಕೆ 9,286.80 ಕೋಟಿ ಬಜೆಟ್ ಅನ್ನು ಅಂಗೀಕರಿಸಿತ್ತು. ಸರ್ಕಾರವು ಬಜೆಟ್ ಗಾತ್ರವನ್ನು ಮತ್ತಷ್ಟು ಹೆಚ್ಚು ಮಾಡಿ 9,951.8 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಿತ್ತು.