ಬಿಬಿಎಂಪಿ ಬಜೆಟ್ 15 ಸಾವಿರ ಕೋಟಿ ರೂ.ಗೆ ಜಿಗಿತ ಸಾಧ್ಯತೆ

bbmp office
Published on

ಆರ್​​.ತುಳಸಿಕುಮಾರ್​ ಬೆಂಗಳೂರು

ರಾಜ್ಯ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ, ಈ ತಿಂಗಳ ಕೊನೆಯ ವಾರ ಮಂಡನೆ ಆಗಲಿರುವ ಬಿಬಿಎಂಪಿ ಆಯವ್ಯಯದಲ್ಲೂ ಮಹಾನಗರ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನದ ಹೊಳೆ ಹರಿಯುವ ನಿರೀಕ್ಷೆ ಇದೆ.

ಚುನಾಯಿತ ಜನಪ್ರತಿನಿಧಿಗಳಿಲ್ಲದ ಕಾರಣ ಸತತ 5ನೇ ವರ್ಷವೂ ಅಧಿಕಾರಿಗಳೇ ಆಯವ್ಯಯ ಮಂಡಿಸಲಿದ್ದಾರೆ. ಸಂಪನ್ಮೂಲ ಸಂಗ್ರಹದಲ್ಲಿ ಹೆಚ್ಚಳವಾಗಿರುವ ಕಾರಣ 2025-26ನೇ ಸಾಲಿನ ಬಜೆಟ್ ಗಾತ್ರ 15 ಸಾವಿರ ಕೋಟಿ ರೂ. ದಾಟುವ ನಿರೀಕ್ಷೆ ಇದೆ. ಹಿಂದಿನ ಸಾಲಿನಲ್ಲಿ 12,369 ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಲಾಗಿತ್ತು. ನಂತರದಲ್ಲಿ ಸರ್ಕಾರದ ಅನುಮೋದನೆ ಪಡೆಯುವ ವೇಳೆ 745 ಕೋಟಿ ರೂ. ಹೆಚ್ಚಿಗೆ ಸೇರಿಸಿ ಬಜೆಟ್ ಮೊತ್ತವನ್ನು 13,114 ಕೋಟಿ ರೂ.ಗೆ ಹಿಗ್ಗಿಸಲಾಗಿತ್ತು.

ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ 7 ಸಾವಿರ ಕೋಟಿ ರೂ. ಮೀಸಲಿರಿಸಿರುವುದು ಹಾಗೂ ಆಸ್ತಿತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆಯಿಂದಾಗಿ ಇದೇ ಮೊದಲ ಬಾರಿಗೆ ಪಾಲಿಕೆಯಿಂದ ಬೃಹತ್ ಮೊತ್ತದ ಆಯವ್ಯಯ ಮಂಡನೆಯಾಗುವುದು ನಿಶ್ಚಿತವಾಗಿದೆ. ಕಳೆದೊಂದು ತಿಂಗಳಿನಿಂದ ಪಾಲಿಕೆ ಅಧಿಕಾರಿಗಳು ಬಜೆಟ್ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, ವಿವಿಧ ವಿಭಾಗಗಳ ಮುಖ್ಯಸ್ಥರೊಡನೆ ಹಲವು ಸುತ್ತಿನ ಸಭೆ, ಚರ್ಚೆ ನಡೆಸಲಾಗಿದೆ. ಸಾರ್ವಜನಿಕರಿಂದಲೂ ಸಲಹೆಗಳನ್ನು ಆಹ್ವಾನಿಸಿ ಅವುಗಳಲ್ಲಿ ಉತ್ತಮ ಎನಿಸುವ ಅಂಶಗಳನ್ನು ಪರಿಗಣಿಸಲಾಗುತ್ತದೆ. ಪ್ರಸ್ತುತ ರಾಜ್ಯ ಬಜೆಟ್ ಮಂಡನೆಯಾಗಿರುವುದರಿಂದ ಪಾಲಿಕೆಯಿಂದ ಕೈಗೆತ್ತಿಕೊಳ್ಳುವ ಯೋಜನೆಗಳಿಗೆ ಎಷ್ಟು ಅನುದಾನ ಲಭ್ಯವಾಗಲಿದೆ ಎಂಬುದು ಖಾತ್ರಿಯಾಗಿದೆ. ಇದನ್ನಾಧರಿಸಿ ಮೂಲಸೌಕರ್ಯ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಪ್ರಮುಖ ಕಾರ್ಯಕ್ರಮಗಳನ್ನು ರೂಪಿಸಿ ಅಂತಿಮಗೊಳಿಸುವ ಕೆಲಸ ಬಾಕಿ ಇದೆ.

‘ಬ್ರ್ಯಾಂಡ್ ಬೆಂಗಳೂರು’ ಯೋಜನೆಗಳಿಗೆ ಮಣೆ:

ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ವಹಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಕನಸಿನ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯನ್ನು ಜಾರಿಗೊಳಿಸುವತ್ತ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಶಿಕ್ಷಣ, ಆರೋಗ್ಯ, ಪರಿಸರ, ಸ್ವಚ್ಛತೆ, ಸುಗಮ ಸಂಚಾರ, ನೀರಿನ ಭದ್ರತೆ, ಟೆಕ್, ವೈಬ್ರೆಂಟ್ ಬೆಂಗಳೂರು ಎಂಬ 8 ವಿಭಾಗಗಳನ್ನು ರಚಿಸಿ ಆ ಬಾಬ್ತಿನಡಿ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. 2024-25ರ ಪಾಲಿಕೆ ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರು ಕಾಮಗಾರಿಗಳಿಗಾಗಿ 1,580 ಕೋಟಿ ರೂ. ಮೀಸಲಿರಿಸಲಾಗಿತ್ತು. ಈ ಬಾರಿ 2 ಸಾವಿರ ಕೋಟಿ ರೂ. ದಾಟುವ ನಿರೀಕ್ಷೆ ಮಾಡಲಾಗಿದೆ.

ಬಜೆಟ್ ಗಾತ್ರ ಹಿಗ್ಗಲು ಆಸ್ತಿ ತೆರಿಗೆ ಕಾರಣ:

ಪಾಲಿಕೆಗೆ ಆಸ್ತಿ ತೆರಿಗೆ ಅಡಿಯಲ್ಲಿ ಸಂಗ್ರಹವಾಗುವ ಆದಾಯವೇ ಪ್ರಮುಖ ಸಂಪನ್ಮೂಲವಾಗಿದೆ. ಹಿಂದಿನ ವರ್ಷದವರೆಗೆ 3,000 ಕೋಟಿ ರೂ. ಆಸುಪಾಸು ತೆರಿಗೆ ಸಂಗ್ರಹವಾಗುತ್ತಿತ್ತು. ಈ ಬಾರಿ ಬಾಕಿ ತೆರಿಗೆ ಪಾವತಿಗೆ ಒಂದು ಬಾರಿ ಇತ್ಯರ್ಥ ಯೋಜನೆ (ಒಟಿಎಸ್) ಪರಿಚಯಿಸಿದ ಕಾರಣ ಹೆಚ್ಚಿನ ಆದಾಯ ಬಂದಿದೆ. 2024-25ನೇ ಸಾಲಿನಲ್ಲಿ 5,250 ಕೋಟಿ ರೂ. ಗುರಿಗೆ ಎದುರಾಗಿ ಈವರೆಗೂ 4,556 ಕೋಟಿ ರೂ. ಸಂಗ್ರಹಿಸಲಾಗಿದೆ. 2025-26ನೇ ಸಾಲಿನಲ್ಲೂ ಹೆಚ್ಚು ತೆರಿಗೆ ವಸೂಲಾಗುವ ಕಾರಣ 5,500 ಕೋಟಿ ರೂ. ಗುರಿ ನಿಗದಿಯಾಗಲಿದೆ. ಜತೆಗೆ ಇನ್ನಿತರ ಶುಲ್ಕ, ತೆರಿಗೆಗಳಿಂದಲೂ ಹೆಚ್ಚಿನ ಆದಾಯ ಸಿಗುವುದರಿಂದ ಬಿಬಿಎಂಪಿ ಬಜೆಟ್ ಹಿಗ್ಗಲಿದೆ.

ಬಿಬಿಎಂಪಿಯ ಕೊನೆಯ ಬಜೆಟ್?:

ಪ್ರಸ್ತುತ ಬಿಬಿಎಂಪಿಯನ್ನು ವಿಭಜಿಸಿ 5 ಅಥವಾ 7 ಸಣ್ಣ ಪಾಲಿಕೆಗಳನ್ನಾಗಿ ರಚಿಸುವ ಗ್ರೇಟರ್ ಬೆಂಗಳೂರು ವಿಧೇಯಕದ ಬಗ್ಗೆ ಪರ-ವಿರೋಧ ವ್ಯಕ್ತವಾಗಿದೆ. ಹಾಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಪರಿಷ್ಕೃತ ರೂಪದಲ್ಲಿ ಮಂಡನೆಯಾಗಿರುವ ವಿಧೇಯಕದ ಬಗ್ಗೆ ಮುಂದಿನ ವಾರ ಚರ್ಚೆಗೆ ಬರಲಿದೆ. ಒಂದು ವೇಳೆ ವಿಧೇಯಕಕ್ಕೆ ಒಪ್ಪಿಗೆ ದೊರೆತರೆ ಹೊಸ ಪಾಲಿಕೆಗಳು ಅಸ್ತಿತ್ವಕ್ಕೆ ಬರಲಿರುವುದರಿಂದ, ಈಗಿನ ಬಜೆಟ್ ಬಿಬಿಎಂಪಿಯ ಕೊನೆಯ ಆಯವ್ಯಯ ಆಗಬಹುದು. ಹಾಗಾಗಿ ಈ ಬಾರಿಯ ಬಜೆಟ್‌ಗೆ ಹೆಚ್ಚಿನ ಮಹತ್ವ ಸಿಗಲಿದೆ.

ಮುಂದಿನ ವಾರ ಶಾಸಕರ ಸಭೆ:

ಬಿಬಿಎಂಪಿ ಬಜೆಟ್ ಸಿದ್ಧಪಡಿಸುವಲ್ಲಿ ನಗರದ ಶಾಸಕರ ಪ್ರಭಾವ ಇರುತ್ತದೆ. ಆಯವ್ಯಯದಲ್ಲಿ ನಗರ ಪ್ರತಿನಿಧಿಸುವ ಸಚಿವರು, ಶಾಸಕರಿಗೆ ಅನುದಾನ ನಿಗದಿ ಮಾಡುವ ಪರಿಪಾಠ ಬೆಳೆದುಬಂದಿದೆ. ಸದ್ಯ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದ ಕಾರಣ ಬಿಬಿಎಂಪಿ ವ್ಯಾಪ್ತಿಯ 28 ಶಾಸಕರು, ವಿಧಾನಪರಿಷತ್ ಸದಸ್ಯರ ಸಲಹೆ ಮಹತ್ವ ಪಡೆಯಲಿದೆ. ಮುಂದಿನ ವಾರ ಡಿಸಿಎಂ ಹಾಗೂ ಪಾಲಿಕೆಯ ಮುಖ್ಯ ಆಯುಕ್ತರು ಸಭೆ ನಡೆಸಿ ಶಾಸಕರ ಸಲಹೆ ಸಂಗ್ರಹಿಸಲಿದ್ದಾರೆ.

ಕಳೆದ 5 ಆರ್ಥಿಕ ವರ್ಷದ ಬಜೆಟ್ ಗಾತ್ರ (ಕೋಟಿ ರೂ.ಗಳಲ್ಲಿ):

ಆರ್ಥಿಕ ವರ್ಷ ಮೊತ್ತ

2024-25 12,369.50

2023-24 11,158.45

2022-23 10,484.28

2021-22 9,286.80

2020-21 10,718.54

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net