

ಬೆಂಗಳೂರು: ಬಿಬಿಎಂಪಿಯು ಮುಂದಿನ ಒಂದು ತಿಂಗಳಲ್ಲಿ 1.13 ಲಕ್ಷ ಗಿಡಗಳನ್ನು ನೆಡಲಿದ್ದು, ಕೆರೆ ಆವರಣ ಹಾಗೂ ಉದ್ಯಾನಗಳಲ್ಲಿ ಇನ್ನಷ್ಟು ಹಸಿರು ಹೆಚ್ಚಿಸಲು ನಾಗರಿಕರ ಸಹಕಾರ ಪಡೆಯಲು ಮುಂದಾಗಿದೆ.
ಕಳೆದ ವಾರದವರೆಗೆ ಸುಮಾರು 20 ಸಾವಿರ ಸಸಿಗಳನ್ನು ನೆಡಲಾಗಿದೆ. ಇವುಗಳಲ್ಲಿ ಹೊಸ ವಲಯಗಳಲ್ಲೇ ಹೆಚ್ಚಿನ ಗಿಡಗಳನ್ನು ನೆಟ್ಟಿದ್ದು, ಇನ್ನಷ್ಟು ಸಸಿಗಳನ್ನು ಕೆರೆ ಹಾಗೂ ಪಾರ್ಕ್ ಆವರಣದಲ್ಲೇ ನೆಡಲಾಗುತ್ತಿದೆ. ಈ ಎರಡೂ ಸ್ಥಳಗಳಲ್ಲಿ ಜನರು ವಾಯು ವಿಹಾರಕ್ಕೆ ಬರುತ್ತಿದ್ದು, ಅವರಲ್ಲಿ ಆಸಕ್ತರನ್ನು ಬಳಸಿಕೊಂಡು ಹಸಿರು ವಿಸ್ತರಿಸುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ.
ಪ್ರಸ್ತುತ ಹೊಸ ವಲಯಗಳಲ್ಲಿ ಹೆಚ್ಚಿನ ಸಸಿಗಳನ್ನು ನೆಡಲಾಗುತ್ತಿದೆ. ಇಲ್ಲಿಯೇ ಹೆಚ್ಚಿನ ಸಂಖ್ಯೆಯ ಕೆರೆಗಳಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸಲು ಸ್ಥಳಾವಕಾಶ ದೊರೆಯಲಿದೆ. ಜತೆಗೆ ಸರ್ಕಾರಿ ಜಾಗ, ಫುಟ್‌ಪಾತ್ ಬದಿಯೂ ಸಸಿ ನೆಡಲಾಗುತ್ತದೆ. ಪಾಲಿಕೆಯ ಹಳೆಯ ವಲಯಗಳಲ್ಲಿ ಸ್ಥಳ ಸಿಕ್ಕಲ್ಲಿ ಹಸಿರು ಬೆಳೆಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ದೇಶಿ ಪ್ರಭೇದಗಳಿಗೆ ಆದ್ಯತೆ:
ನಗರದಲ್ಲಿ ಮಳೆಗಾಲದ ವೇಳೆ ಭಾರಿ ಗಾಳಿ ಹಾಗೂ ವರ್ಷಧಾರೆಗೆ ನೂರಾರು ಮರಗಳು ಧರೆಗುರುಳುತ್ತಿವೆ. ಇವುಗಳಲ್ಲಿ ದೇಶಿಯವಲ್ಲದ ಮರಗಳು ಹಾಗೂ ಬೇರುಗಳು ಸಡಿಲಗೊಂಡ ಮರಗಳೇ ನೆಲಕ್ಕುರುಳುವುದು ಹೆಚ್ಚುತ್ತಿದೆ. ಇವುಗಳನ್ನು ಕತ್ತರಿಸಿ ಬೇರೆಡೆಗೆ ಸಾಗಿಸಲು ಪಾಲಿಕೆ ಸಿಬ್ಬಂದಿ ಹರಸಾಹಸ ಮಾಡಬೇಕಿದೆ. ಹಾಗಾಗಿ ದೇಶಿ ಪ್ರಭೇದದ ಗಿಡಗಳನ್ನು ನೆಡಲಾಗುತ್ತಿದೆ. ಹೊಂಗೆ, ಬೇವು, ಮಾವು, ನೇರಳೆ, ಮಹಾಗನಿ ಸಹಿತ 15 ವಿಧದ ದೇಶೀಯ ಪ್ರಭೇದದ ಸಸಿಗಳನ್ನು ನೆಟ್ಟು ಪೋಷಿಸಲಾಗುವುದು ಎಂದು ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ. ಸ್ವಾಮಿ ತಿಳಿಸಿದ್ದಾರೆ.