ಬಿಬಿಎಂಪಿಯಿಂದ 90 ಸಾವಿರ ಗಿಡ ನೆಟ್ಟು ಪೋಷಣೆಗೆ ಗುರಿ

bbmpsaplings
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಹಸಿರೀಕರಣ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ‘ಹಸಿರು ಬೆಂಗಳೂರು’ ಕಾರ್ಯಕ್ರಮದಡಿ 2023-24ನೇ ಸಾಲಿನಲ್ಲಿ 90 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಲು ಗುರಿ ಹೊಂದಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಂಗಳೂರು ನಗರವನ್ನು ಹಸಿರುಗೊಳಿಸುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಸಿರು ಬೆಂಗಳೂರು ಕಾರ್ಯಕ್ರಮದಡಿ ಬೆಂಗಳೂರಿನಾದ್ಯಂತ ಗಿಡಗಳನ್ನು ಬೆಳೆಸಲು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಈ ಕಾರ್ಯಕ್ರಮಕ್ಕೆ 250 ಸರ್ಕಾರಿ, ಸರ್ಕಾರೇತರ ಶಾಲೆಗಳಿಂದ ಒಡಂಬಡಿಕೆ ಮಾಡಿಕೊಂಡು ಸುಮಾರು 50,000 ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಹಯೋಗದೊಂದಿಗೆ ಗಿಡ ನೆಡುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ.

ಬಿಬಿಎಂಪಿ ಅರಣ್ಯ ಘಟಕದಿಂದ ನೆಡಲಾದ ಗಿಡಗಳನ್ನು 3 ವರ್ಷದ ಅವಧಿಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಅರಣ್ಯ ಅಧಿಕಾರಿಗಳ ಸಹಯೋಗದೊಂದಿಗೆ ಪೋಷಣೆ ಮಾಡಲಾಗುತ್ತದೆ. ಈ ಸಂಬಂಧ ಪಾಲಿಕೆ ವತಿಂದ ಸಾಮಾಜಿಕ ಜಾಲತಾಣವನ್ನು ರೂಪಿಸಿ ನಗರದಾದ್ಯಂತ ನೆಡಲಾಗಿರುವ ಗಿಡಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net