

ಬೆಂಗಳೂರು: ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ವನ್ನಾಗಿ ಬದಲಾಯಿಸಿದ ಬಳಿಕ ಆಡಳಿತ ಕಾರ್ಯಚಟುವಟಿಕೆಗಳನ್ನು ಮಾರ್ಪಾಡು ಮಾಡಲಾಗುತ್ತಿದೆ.ಎನ್.ಆರ್. ಚೌಕದಲ್ಲಿರುವ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮರು ವಿನ್ಯಾಸದ ಕಾಮಗಾರಿಗಳು ಭರದಿಂದ ಸಾಗಿವೆ. ಮೇಯರ್ ಕಚೇರಿಯನ್ನು ಜಿಬಿಎ ಅಧ್ಯಕ್ಷರಿಗಾಗಿ ಮರು ವಿನ್ಯಾಸ ಮಾಡಲಾಗುತ್ತಿದೆ. ಉಪಾಧ್ಯಕ್ಷ ಮತ್ತು ಮುಖ್ಯ ಆಯುಕ್ತ ಕಚೇರಿ ನಿರ್ಮಿಸಲು ಸಿದ್ಧತೆ ನಡೆಯುತ್ತಿವೆ.
ಪೌರ ಸಭಾಂಗಣವನ್ನು ಜಿಬಿಎ ಸಭಾಂಗಣವಾಗಿ ಪರಿವರ್ತಿಸಲಾಗುತ್ತಿದೆ. 198 ಕಾರ್ಪೋರೇಟರ್ ಕುಳಿತುಕೊಳ್ಳುವ ವ್ಯವಸ್ಥೆ ಇದ್ದ ‘ಕೆಂಪೇಗೌಡ ಪೌರ ಸಭಾಂಗಣ’ವನ್ನು 243 ಆಸನಗಳಿಗೆ ಹೆಚ್ಚಿಸಲು ಮರು ವಿನ್ಯಾಸದ ಕಾರ್ಯವನ್ನು ಹಿಂದೆ ಮಾಡಲಾಗಿತ್ತು. ಆದರೆ, ಹಲವು ದಿನಗಳು ಕಳೆದರೂ ಆ ಕಾಮಗಾರಿಯು ಮುಗಿದಿರಲ್ಲ. ಇದೀಗ ಮತ್ತೆ ಪೌರ ಸಭಾಂಗಣವನ್ನು ವಿನ್ಯಾಸದ ಕಾರ್ಯಕ್ಕೆ ಕೈಹಾಕಲಾಗಿದೆ. ಜಿಬಿಎ ಸಭೆಗಳನ್ನು ನಡೆಸಲು ಈ ಸಭಾಂಗಣವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.ಅಧ್ಯಕ್ಷ, ಉಪಾಧ್ಯಕ್ಷ ಸೇರಿ 72 ಸದಸ್ಯರನ್ನು ಜಿಬಿಎಗೆ ಈಗಾಗಲೇ ನೇಮಿಸಲಾಗಿದೆ. ಸಭೆ ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ಸೇರಿ ಹಲವು ಮಂದಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಪೌರ ಸಭಾಂಗಣವನ್ನು ಜಿಬಿಎ ಸಭಾಂಗಣವಾಗಿ ಬದಲಾವಣೆ ಮಾಡಲಾಗುತ್ತಿದೆ.
ಆಡಳಿತ ಮಂಡಳಿ ರಚನೆ
ಜಿಬಿಎ ಅಧ್ಯಕ್ಷರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಒಟ್ಟು 75 ಮಂದಿಯ ಬೃಹತ್ ಆಡಳಿತ ಮಂಡಳಿಯನ್ನು ರಚಿಸಲಾಗಿದೆ. ಇದರಲ್ಲಿ ಬೆಂಗಳೂರು ನಗರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಐದೂ ಪಾಲಿಕೆಗಳ ಮಹಾಪೌರರು ಪದನಿಮಿತ್ತ ಸದಸ್ಯರಾಗಿರುತ್ತಾರೆ.ಜತೆಗೆ, ನಗರ ಅಭಿವೃದ್ಧಿಯಲ್ಲಿ ಪಾಲುದಾರ ಸಂಸ್ಥೆಗಳಾಗಿರುವ ಬಿಡಿಎ, ಬಿಎಂಆರ್ಡಿಎ, ಜಲಮಂಡಳಿ, ಬಿಎಂಟಿಸಿ, ಬಿಎಂಆರ್ಸಿಎಲ್, ಬೆಸ್ಕಾಂ, ಡಲ್ಟ್, ನಗರ ಪೊಲೀಸ್ ಆಯುಕ್ತರು, ಅಗ್ನಿಶಾಮಕದ ದಳದ ಮುಖ್ಯಸ್ಥರು, ನಗರ ಜಿಲ್ಲಾಧಿಕಾರಿ, ಹೊಸ ಪಾಲಿಕೆಗಳ ಆಯುಕ್ತರು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಜಿಬಿಎ ಮುಖ್ಯ ಆಯುಕ್ತರು ಪದನಿಮಿತ್ತ ಸದಸ್ಯ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕೇಂದ್ರ ಪಾಲಿಕೆಗಳ ಮಹಾಪೌರರು ಹಾಗೂ ಆಯುಕ್ತರು, ನಗರ ಜಿಲ್ಲಾಧಿಕಾರಿ ಜಿ.ಜಗದೀಶ್, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿದೇರ್ಶಕ ಟಿ.ಎನ್.ಶಿವಶಂಕರ್, ಜಿಬಿಎನ ಮುಖ್ಯ ನಗರ ಯೋಜಕರು ಹಾಗೂ ಮುಖ್ಯ ಅಭಿಯಂತರರು ಸೇರಿದ್ದಾರೆ.
ಮುಖ್ಯ ಇಂಜಿನಿಯರ್ಗೆ ಹೊಣೆ
ಬಿಬಿಎಂಪಿಯಲ್ಲಿರುವ ನಗರ ಯೋಜನೆ, ಸಾರ್ವಜನಿಕ ಕಾಮಗಾರಿಗಳು, ಆರೋಗ್ಯ, ತೋಟಗಾರಿಕೆ, ಶಿಕ್ಷಣ, ಕೆರೆಗಳು, ಅರಣ್ಯ, ಹವಾಮಾನ ಕ್ರಿಯಾ ಕೋಶ, ಸ್ಥಿತಿಸ್ಥಾಪಕತ್ವ ವಿಭಾಗಗಳು ಜಿಬಿಎ ವ್ಯಾಪ್ತಿಗೆ ಬರಲಿವೆ. ಕಾಮಗಾರಿಗಳಿಗಾಗಿ ರಸ್ತೆ ಮೂಲಸೌಕರ್ಯ, ಯೋಜನೆ ವಿಭಾಗಗಳಿವೆ. ಇವುಗಳನ್ನು ರದ್ದುಪಡಿಸಿ ನಗರ ಪಾಲಿಕೆಗಳ ಮುಖ್ಯ ಇಂಜಿನಿಯರ್ ವ್ಯಾಪ್ತಿಗೆ ಎಲ್ಲ ಕಾಮಗಾರಿಗಳನ್ನು ವಹಿಸಲು ನಿರ್ಧರಿಸಲಾಗಿದೆ. ಬೃಹತ್ ಕಾಮಗಾರಿಗಳನ್ನು ‘ಬಿ-ಸ್ಟೈಲ್’ ನಿರ್ವಹಿಸುವುದರಿಂದ ಆಯಾ ನಗರ ಪಾಲಿಕೆಗಳ ವ್ಯಾಪ್ತಿಯ ಉಳಿದ ಕಾಮಗಾರಿಗಳನ್ನೂ ಮುಖ್ಯ ಇಂಜಿನಿಯರ್ ವ್ಯಾಪ್ತಿಗೆ ತರಲಾಗುತ್ತಿದೆ.
ಸೆ.15ರ ಗಡುವು
ಜನಸಂಖ್ಯೆ ವಿಸ್ತೀರ್ಣ, ಜನಸಂಖ್ಯಾ ಸಾಂದ್ರತೆ, ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು, ಆರ್ಥಿಕ ಪ್ರಾಮುಖ್ಯತೆ ಮತ್ತು ಪ್ರದೇಶದಲ್ಲಿರುವ ಮೂಲಸೌಕರ್ಯ ಆಧಾರದಲ್ಲಿ ಗ್ರೇಟರ್ ಬೆಂಗಳೂರು ಪ್ರದೇಶವನ್ನು 5 ನಗರ ಪಾಲಿಕೆಗಳಾಗಿ ವಿಗಂಡಿಸಲಾಗಿದೆ. ‘ಬೆಂಗಳೂರು ಪಶ್ಚಿಮ ನಗರ ಪಾಲಿಕೆ’, ‘ಬೆಂಗಳೂರು ದಕ್ಷಿಣ ನಗರ ಪಾಲಿಕೆ’, ‘ಬೆಂಗಳೂರು ಉತ್ತರ ನಗರ ಪಾಲಿಕೆ’, ‘ಬೆಂಗಳೂರು ಪೂರ್ವ ನಗರ ಪಾಲಿಕೆ’ ಮತ್ತು ‘ಬೆಂಗಳೂರು ಕೇಂದ್ರ ನಗರಪಾಲಿಕೆ’ ಎಂದು ನಾಮಕರಣ ಮಾಡಲಾಗಿದೆ. ಬಿಬಿಎಂಪಿ ‘ಗ್ರೇಟರ್ ಬೆಂಗಳೂರು’ ಆಗಿ ಕಳೆದ ಮೇ 15ರಂದು ವಿಧ್ಯುಕ್ತವಾಗಿ ಆರಂಭವಾಗಿದೆ. ಪೂರ್ಣ ಪ್ರಮಾಣದಲ್ಲಿ ರೂಪುಗೊಳ್ಳಲು ಸೆ.15ರ ಗಡುವು ವಿಧಿಸಲಾಗಿದೆ. ಆ ವೇಳೆಗೆ ಬಿಬಿಎಂಪಿಗೆ ಚುನಾವಣೆ ನಡೆದು 5 ವರ್ಷ ಪೂರ್ಣಗೊಳ್ಳುವ (2020ರ ಸೆ. 10) ಕಾರಣ ಹೊಸ ಪಾಲಿಕೆಗಳನ್ನು ಅಸ್ತಿತ್ವಕ್ಕೆ ತಂದು ಚುನಾಯಿತ ಸರ್ಕಾರ ಸ್ಥಾಪಿಸುವ ಆಶಯವನ್ನು ಸರ್ಕಾರ ಹೊಂದಿದೆ.
ತಲಾ 2 ವಲಯ:
* ಕೇಂದ್ರ: ಪೂರ್ವ ವಲಯ ಕಚೇರಿ, ಕೇಂದ್ರ ಕಚೇರಿ ಅನೆಕ್ಸ್3
* ಪೂರ್ವ:ಮಹದೇವಪುರ ವಲಯ ಕಚೇರಿ, ಕೆ.ಆರ್.ಪುರ ಸಿಇ ಕಚೇರಿ
* ಪಶ್ಚಿಮ ಆರ್.ಆರ್.ನಗರ ವಲಯ ಕಚೇರಿ, ಪಾಲಿಕೆ ಸೌಧ ಚಂದ್ರಾಲೇಔಟ್
*ಉತ್ತರ:ಯಲಹಂಕ ವಲಯ ಕಚೇರಿ, ದಾಸರಹಳ್ಳಿ ವಲಯ ಕಚೇರಿ
* ದಕ್ಷಿಣ ಜಯನಗರ ವಲಯ ಕಚೇರಿ, ಬೊಮ್ಮನಹಳ್ಳಿ ವಲಯ ಕಚೇರಿ