‘ನಂಬಿಕೆ ನಕ್ಷೆ’ ವಿತರಣೆಗೆ ಬಿಬಿಎಂಪಿ ಕ್ರಮ

Vijayavani-Featured-Image
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 50/80 ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ 4 ವಸತಿ ಘಟಕಗಳಿಗೆ ಮೀರದ ಕಟ್ಟಡಗಳಿಗೆ ಆನ್‌ಲೈನ್ ಮೂಲಕ ಪರವಾನಗಿ ನೀಡುವ ‘ನಂಬಿಕೆ ನಕ್ಷೆ’ ಯೋಜನೆ ಅಡಿಯಲ್ಲಿ ತ್ವರಿತವಾಗಿ ಸೇವೆ ಒದಗಿಸಲು ಪಾಲಿಕೆ ವಿಶೇಷ ಕ್ರಮ ಕೈಗೊಂಡಿದೆ.

ನಕ್ಷೆ ಮಂಜೂರಾತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ಪಾಲಿಕೆಯಲ್ಲಿ ಪರವಾನಗಿ ಪಡೆದ ವಾಸ್ತುಶಿಲ್ಪಿಗಳು, ಇಂಜಿನಿಯರ್‌ಗಳು, ಸೂರ್‌ವೈಸರ್‌ಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ವ್ಯವಸ್ಥೆಗೆ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಇದರನ್ವಯ ಕಳೆದ ಮಾರ್ಚ್‌ನಲ್ಲೇ ಚಾಲನೆ ಪಡೆದಿದ್ದ ಈ ಯೋಜನೆಯಲ್ಲಿ ಕೆಲವೊಂದು ಅಂಶಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗದ ಕಾರಣ ಜನರಿಗೆ ಸುಲಭವಾಗಿ ಸೌಲಭ್ಯ ಸಿಗುತ್ತಿರಲಿಲ್ಲ. ಈ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ತಾಕೀತು ಮಾಡಿದ್ದರು. ಇದೀಗ ನಗರ ಯೋಜನೆ ವಿಭಾಗದಿಂದ ಅರ್ಜಿಗಳನ್ನು ಪರಾಮರ್ಶಿಸಿ ಬೇಗನೆ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ನಂಬಿಕೆಯೊಂದಿಗೆ ಪರಿಶೀಲಿಸುವ ವ್ಯವಸ್ಥೆಯೊಂದಿಗೆ ಕಂದಾಯ ವಿಭಾಗದಿಂದ ಆನ್‌ಲೈನ್‌ನಲ್ಲಿ ಅಭಿವೃದ್ಧಿಪಡಿಸುತ್ತಿರುವ ಇ-ಆಸ್ತಿಯನ್ನು ಸ್ವಯಂಚಾಲಿತ ಪ್ರಕ್ರಿಯೆ ಮೂಲಕ ಜೋಡಿಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ವ್ಯವಸ್ಥೆಯನ್ನು ಪೂರ್ಣವಾಗಿ ಸ್ವಯಂಚಾಲಿತ ರೀತಿ ಕೆಲಸ ಮಾಡುತ್ತದೆ. ಆನಂತರ ಯಾವುದೇ ಸಿಬ್ಬಂದಿ/ಅಧಿಕಾರಿಗಳ ಹಸ್ತಕ್ಷೇಪ ಇಲ್ಲದೆ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

1067 ಕಟ್ಟಡಳಿಗೆ ನಕ್ಷೆ ಮಂಜೂರು:

ನಂಬಿಕೆ ನಕ್ಷೆ ಯೋಜನೆ ಅಡಿಯಲ್ಲಿ ಈವರೆಗೆ ಪಾಲಿಕೆಯು 1,993 ಅರ್ಜಿಗಳನ್ನು ಸ್ವೀಕರಿಸಿವೆ. ಇವುಗಳಲ್ಲಿ ಆರ್.ಆರ್.ನಗರ ವಲಯ (796) ಹಾಗೂ ಬೊಮ್ಮನಹಳ್ಳಿ ವಲಯ (315) ದಲ್ಲಿ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಟ್ಟು ಅರ್ಜಿಯಲ್ಲಿ 1,993 ಕಟ್ಟಡಗಳಿಗೆ ತಾತ್ಕಾಲಿಕ ನಕ್ಷೆ ಅನುಮೋದನೆ ನೀಡಿದ್ದು, ನ.12ರವರೆಗೆ 1,067 ಕಟ್ಟಡಗಳಿಗೆ ಅಂತಿಮ ನಕ್ಷೆ ಹಾಗೂ ಪರವಾನಗಿ ವಿತರಿಸಲಾಗಿದೆ. ಕೆಲವೊಂದು ಅಂಶಗಳ ಬಗ್ಗೆ ಸ್ಪಷ್ಟನೆ ಕೋರಿ 519 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net