

ದೇವರಹಿಪ್ಪರಗಿ: ತಾಲೂಕಿನ ಬಿಬಿ ಇಂಗಳಗಿ ಗ್ರಾಮದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲಿಕ ಮಾನವರ ಗುರುವಾರ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ಶಿಥಿಲ ವ್ಯವಸ್ಥೆಯಲ್ಲಿರುವ ಕಟ್ಟಡ, ಮಕ್ಕಳಿಗೆ ಒಳ್ಳೆಯ ಊಟ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಕೊರತೆಯಿರುವ ಹಿನ್ನೆಲೆಯಲ್ಲಿ ವಿಜಯವಾಣಿ ‘ಭೂತ ಬಂಗಲೆಯಂತಾದ ಹಾಸ್ಟೆಲ್’ ಶೀರ್ಷಿಕೆಯಡಿ ಗುರುವಾರ ವರದಿ ಮಾಡಿತ್ತು. ವರದಿಗೆ ಎಚ್ಚೆತ್ತ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಕ್ಷಣವೇ ಭೇಟಿ ನೀಡಿ ಮಕ್ಕಳಿಗೆ ಆಗುವ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ ವಿಜಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿ, ಪತ್ರಿಕೆಯಲ್ಲಿ ವರದಿ ನೋಡಿ ಖುದ್ದಾಗಿ ನಾನೇ ಹಾಸ್ಟೆಲ್‌ಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ಸುತ್ತಲೂ ಕಾಂಪೌಂಡ್ ನಿರ್ಮಿಸಲು ಅಂದಾಜು ಪತ್ರಿಕೆ ತಯಾರಿಸಿ ಇಲಾಖೆಯ ಕಮಿಷನರ್ ಅವರಿಗೆ ಸಲ್ಲಿಸಲಾಗಿದೆ. ಶಿಥಿಲವಾದ ಮೂರು ಕೊಠಡಿಗಳನ್ನು ಉಪಯೋಗಿಸುತ್ತಿಲ್ಲ. ಈ ಕೊಠಡಿಗಳ ದುರಸ್ತಿಗೆ ತಾಲೂಕು ಪಂಚಾಯಿತಿಗೆ ಸೂಚಿಸಿದ್ದೇವೆ. ಒಂದು ವೇಳೆ ಅವರಿಂದ ಆಗದಿದ್ದರೂ ಕಮಿಷನರ್ ಕಚೇರಿಗೆ ಪ್ರಸ್ತಾವನೆ ಕಳುಹಿಸಿ ಕೊಠಡಿಗಳನ್ನು ದುರಸ್ತಿಗೊಳಿಸುತ್ತೇವೆ. ಮಕ್ಕಳಿಗೆ ಸರ್ಕಾರದ ಆದೇಶದಂತೆ ಉತ್ತಮ ಆಹಾರ ನೀಡಲು ವಾರ್ಡನ್‌ಗೆ ಸೂಚಿಸಿದ್ದೇನೆ ಎಂದರು.
ತಾಲೂಕು ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಎಸ್. ಭೂಸಗೊಂಡ ಮಾತನಾಡಿ, ಹಾಸ್ಟೆಲ್ನಲ್ಲಿರುವ ಸಮಸ್ಯೆಗಳ ವರದಿ ತಯಾರಿಸಿ ನಮ್ಮ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಿದ್ದೇನೆ. ವಸತಿ ನಿಲಯದಲ್ಲಿ ಲೈಟ್, ಫ್ಯಾನ್, ಸಿಸಿ ಕ್ಯಾಮರಾ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸುವ ಜತೆಗೆ ಸ್ವಚ್ಛತೆ ಕಾಪಾಡುವುದು ಹಾಗೂ ಮಕ್ಕಳಿಗೆ ಶುಚಿ- ರುಚಿಯಾದ ಆಹಾರ ನೀಡಲು ವಾರ್ಡನ್‌ಗೆ ಸೂಚಿಸಿದ್ದೇನೆ ಎಂದರು.
ವಾರ್ಡನ್ ಅನೀಲ ಮೊಕಾಶಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸಲೀಂ ವಟರ್, ಗ್ರಾಮಸ್ಥರಾದ ಶಿವು ದಲ್ಲಾಳಿ, ಬಡೇಸಾಬ್ ನದಾಫ್, ಶಿವರಾಯ ಮದರ, ಮಹಾಂತೇಶ ಮುದ್ನೂರ ಇದ್ದರು.
ನಮ್ಮೂರಿನ ಹಾಸ್ಟೆಲ್‌ನಲ್ಲಿರುವ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಇಲಾಖೆಯವರಿಗೆ ಹತ್ತಾರು ಬಾರಿ ಮೌಖಿಕವಾಗಿ ಹೇಳಿದರೂ ಪ್ರಯೋಜನವಾಗಿರಲಿಲ್ಲ. ‘ವಿಜಯವಾಣಿ’ ಪತ್ರಿಕೆಯಲ್ಲಿ ವರದಿ ಮಾಡಿದ ದಿನದಂದೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಹಾಸ್ಟೆಲ್‌ನಲ್ಲಿರುವ ಸಮಸ್ಯೆಗಳನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ಸಲೀಂ ವಟರ್, ಗ್ರಾಪಂ ಸದಸ್ಯರು, ಬಿಬಿ ಇಂಗಳಗಿ