ಬಡವರು ಬಿಪಿಎಲ್ ಕಾರ್ಡ್‌ನಿಂದ ವಂಚಿತರಾಗದಿರಲಿ

pushpa amaranth
Published on

ಸೋಮವಾರಪೇಟೆ: ಬಡವರು, ನಿರ್ಗತಿಕರು ಬಿಪಿಎಲ್ ಕಾರ್ಡ್‌ನಿಂದ ವಂಚಿತರಾಗಬಾರದು. ಅಂತಹ ಅರ್ಜಿಗಳು ಆಹಾರ ಇಲಾಖೆ ಬಳಿ ಇದ್ದರೆ, ಕೂಡಲೇ ಸ್ಥಳೀಯ ಶಾಸಕರಿಗೆ ಮತ್ತು ನನಗೆ ಕಳುಹಿಸಿಕೊಡಬೇಕು ಎಂದು ಆಹಾರ ನಿರೀಕ್ಷರಿಗೆ ಸೂಚನೆ ನೀಡಿದ್ದೇನೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹೇಳಿದರು.

ಹಸಿವು ಮುಕ್ತ ರಾಜ್ಯ ಮಾಡುವ ಗುರಿ ಕಾಂಗ್ರೆಸ್ ಪಕ್ಷದ್ದು, ಅಧಿಕಾರಿಗಳು ಕೂಡ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಮತ್ತು ಗೃಹಲಕ್ಷ್ಮೀ ಯೋಜನೆಗಳು ರಾಜ್ಯದಲ್ಲಿ ಶೇಕಡ 80 ರಷ್ಟು ಕುಟುಂಬಕ್ಕೆ ವರದಾನವಾಗಿದೆ. ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳನ್ನು ಮಾಡುವುದಲ್ಲ. ಬಡವರ ಕುಟುಂಬದ ಕಲ್ಯಾಣವಾಗಬೇಕು. ಸರ್ಕಾರ ಅಭಿವೃದ್ಧಿಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 10 ಕೋಟಿ ಹಣ ಬಿಡುಗಡೆ ಮಾಡಿದೆ ಎಂದರು.

ಇಲ್ಲಿಯವರಗೆ ಗೃಹಲಕ್ಷ್ಮೀ ಯೋಜನೆಯಡಿ ಸೋಮವಾರಪೇಟೆ ತಾಲೂಕಿನಲ್ಲಿ 4.92 ಕೋಟಿ ರೂ.ಗಳು ಜಮೆಯಾಗಿವೆ. ಗೃಹ ಜ್ಯೋತಿಗೆ ಸೆಸ್ಕ್ ಇಲಾಖೆಗೆ 98 ಕೋಟಿ ರೂ, ಪಾವತಿ ಆಗಿದೆ. ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ 1251 ಅಂತ್ಯೋದಯ ಕಾರ್ಡ್, 22,590 ಬಿ.ಪಿ.ಎಲ್ ಕಾರ್ಡ್, 4616 ಎ.ಪಿ.ಎಲ್ ಕಾರ್ಡ್‌ಗಳಿದ್ದು 300 ಅರ್ಜಿಗಳು ವಿಲೇವಾರಿಯಾಗಿಲ್ಲ ಎಂದು ಹೇಳಿದರು.

ಆಹಾರ ಇಲಾಖೆಯ ಅಧಿಕಾರಿಗಳು ತಾಲೂಕಿನ ಜೇನು ಕುರುಬ ಹಾಡಿಗಳಿಗೆ ತೆರಳಿ ಸ್ಥಳದಲ್ಲಿಯೇ 136 ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಿದ ಹಿನ್ನೆಲೆಯಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಅರ್ಹರಿಗೆ ಮನೆಬಾಗಿಲಿಗೆ ತೆರಳಿ ಕಾರ್ಡ್ ವಿತರಿಸಬೇಕು ಎಂದು ಹೇಳಿದರು.

ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಜಿಲ್ಲೆಯಲ್ಲಿ ಇದುವರೆಗೆ 92 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಸರ್ಕಾರ 36,15,43,297 ರೂ.ಗಳನ್ನು ಇಲಾಖೆಗೆ ಪಾವತಿ ಮಾಡಿದೆ.

ಜಿಲ್ಲೆಯಲ್ಲಿ ಬಸ್‌ಗಳ ಕೊರತೆ ಇದೆ. ಕೋವಿಡ್ ಕಾಲದಲ್ಲಿ ಸ್ಥಗಿತಕೊಂಡ ಮಾರ್ಗಗಳನ್ನು ಪುನಾರಂಭ ಮಾಡಿಲ್ಲ. ಸೋಮವಾರಪೇಟೆಯಿಂದ ಮಡಿಕೇರಿ ಹಾಗೂ ಮಡಿಕೇರಿಯಿಂದ ಬೆಳಿಗ್ಗೆ ಹಾಗು ಸಂಜೆ ಬಸ್ ವ್ಯವಸ್ಥೆ ಇಲ್ಲ, ಇದರಿಂದ ವಿದ್ಯಾರ್ಥಿಗಳು ಹಾಗು ಸರ್ಕಾರಿ ನೌಕರರಿಗೆ ತೊಂದರೆಯಾಗುತ್ತಿದೆ ಎಂಬುದನ್ನು ತಿಳಿದು, ಕೂಡಲೆ ಮಾರ್ಗದಲ್ಲಿ ಬಸ್ ಓಡಿಸುವಂತೆ ಮಡಿಕೇರಿ ಘಟಕ ವ್ಯವಸ್ಥಾಪಕ ಮಹಮ್ಮದ್ ಆಲಿ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜ್, ಸದಸ್ಯೆ ಶೀಲಾ ಡಿಸೋಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net