

ಬೈಲಹೊಂಗಲ: ಇಲ್ಲಿನ ಬಜಾರ್ ರಸ್ತೆ ಅಗಲೀಕರಣ ಮಾಡುವಂತೆ ದಲಿತ ಮುಖಂಡರು ಶಾಸಕ ಮಹಾಂತೇಶ ಕೌಜಲಗಿ ಅವರನ್ನು ಒತ್ತಾಯಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಾಂಗದವರ ಹಿತರಕ್ಷಣೆ ಹಾಗೂ ಯೋಗಕ್ಷೇಮ ಕುರಿತ ಸಭೆಯಲ್ಲಿ ಶಾಸಕರನ್ನು ಒತ್ತಾಯಿಸಲಾಯಿತು.
ಇದಕ್ಕೆ ಸ್ಪಂದಿಸಿದ ಶಾಸಕ ಮಹಾಂತೇಶ ಕೌಜಲಗಿ, ಜನರ ಬೇಡಿಕೆ ಈಡೇರಿಸಲು ಕ್ರಮವಹಿಸಲಾಗುವುದು. ದಲಿತ ಸಮುದಾಯದವರ ಕೆಲಸಗಳನ್ನು ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಆರೋಗ್ಯ, ಸಮಾಜ ಕಲ್ಯಾಣ, ಹೆಸ್ಕಾಂ ಇಲಾಖೆ ಅಧಿಕಾರಿಗಳನ್ನು ದಲಿತ ಮುಖಂಡರು ತರಾಟೆಗೆ ತೆಗೆದುಕೊಂಡರು. ಗುಡದೂರ ಗ್ರಾಮದಲ್ಲಿ ನಿಂಗಪ್ಪ ಹರಿಜನ ಅವರ ಎಮ್ಮೆ ಕರ ವಿದ್ಯುತ್ ತಗುಲಿ ಸಾವನ್ನಪ್ಪಿದೆ. ಆದರೂ ಪರಿಹಾರ ಧನ ವಿತರಿಸಿಲ್ಲವೆಂದು ಫಕೀರಪ್ಪ ಹರಿಜನ ದೂರಿದರು.
ಹರಳಯ್ಯ ಕಾಲನಿ ನಿವಾಸಿಗಳಿಗೆ ಮನೆಗಳ ಹಕ್ಕು ಪತ್ರ ಏಕೆ ವಿತರಿಸುತ್ತಿಲ್ಲವೆಂದು ನಿವಾಸಿ ಪರಶುರಾಮ ರಾಯಬಾಗ ಶಾಸಕರನ್ನು ಪ್ರಶ್ನಿಸಿದರು. ಸಚಿವರು ಶೀಘ್ರ ಆಗಮಿಸಲಿದ್ದು, ಪ್ರಾಮಾಣಿಕವಾಗಿ ಹಕ್ಕುಪತ್ರಗಳನ್ನು ವಿತರಿಸುತ್ತೇನೆ ಸ್ವಲ್ಪ ಕಾಯಿರಿ ಎಂದು ಶಾಸಕರು ಗುಡುಗಿದರು. ದೊಡ್ಡಕೆರೆಯಲ್ಲಿ ಡಾ.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಮುಖಂಡ ಸಂಜು ಮುರಗೋಡ ವಿನಂತಿಸಿದರು. ನಾಲ್ಕು ಜನ ಪೌರ ಕಾರ್ಮಿಕರ ಮನೆ ನಿರ್ಮಾಣಕ್ಕೆ ರಿಗೆ 7.50 ಲಕ್ಷ ರೂ. ಸಹಾಯ ಧನ ಮಂಜೂರು ಮಾಡಿದ್ದಾಗಿ ಶಾಸಕರು ಮಾಹಿತಿ ನೀಡಿದರು.
ತಹಸೀಲ್ದಾರ್ ಹನುಮಂತ ಶಿರಹಟ್ಟಿ, ತಾಪಂ ಇಒ ಕಿರಣ ಘೋರ್ಪಡೆ, ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಸಿಪಿಐ ಪಂಚಾಕ್ಷರಿ ಸಾಲಿಮಠ, ಬಿಇಒ ಎ.ಎನ್.ಪ್ಯಾಟಿ, ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ದಲಿತ ಸಮುದಾಯದ ಮುಖಂಡರಾದ ಗಂಗಪ್ಪ ಭರಮಣ್ಣವರ, ಗೂಳಪ್ಪ ಕೇಂದ್ರಿ, ಶಂಕರ ಕೋರಿಕೊಪ್ಪ, ಸುರೇಶ ರಾಯಪ್ಪಗೋಳ, ರಮೇಶ ಹಂಚಿನಮನಿ, ರುದ್ರಪ್ಪ ನಿಂಗಣ್ಣವರ, ಶಂಕರ ಸಾಗರ, ರುದ್ರಪ್ಪ ಮುಂದಿನಮನಿ, ಮನೋಜ ಕೆಳಗೇರಿ, ಪ್ರಕಾಶ ಮಾದಿಗರ, ಸುನೀಲ ಹಲಗಿ, ಪುಂಡಲೀಕ ಭಜಂತ್ರಿ, ಶಿವಯೋಗಿ ಹುಲ್ಲೆಣ್ಣವರ, ಮಂಜುನಾಥ ಶಿಡ್ಲೆವ್ವಗೋಳ, ಮಾರುತಿ ಕೊಂಡೂರ, ಚಂದ್ರಿಕಾ ಕಳಂಕರ, ವೆಂಕಟೇಶ ತಳವಾರ ಇತರರಿದ್ದರು.