ಭಕ್ತರಿಗೆ ಹಲಸಿನ ಗಿಡ ಪ್ರಸಾದ!

bayaru
Published on

ಉಪ್ಪಳ: ತುಳುನಾಡಿನ ಪ್ರತಿಯೊಂದು ಪ್ರಾಕೃತಿಕ ಹಿನ್ನೆಲೆಗೆ ವಿಶೇಷತೆ, ಕಾರಣಿಕತೆ ಇದೆ. ಜತೆಗೆ ಆಧುನಿಕತೆಯ ಸ್ಪರ್ಶ ನೀಡಿದಾಗ ಹೊಸತೊಂದು ಪರಿಕಲ್ಪನೆಗೆ ನಾಂದಿಯಾಗುತ್ತದೆ ಎಂಬುದಕ್ಕೆ ಬಾಯಾರು ಹಿರಣ್ಯದ ತಿರುಮಲೇಶ್ವರ ಭಟ್ ಅವರ ಕೊಡುಗೆ ಸಾಕ್ಷಿಯಾಗಿದೆ.

ಬಾಯಾರು ಹಿರಣ್ಯಪದವಿನಲ್ಲಿ ಹಿಂದಿನಿಂದಲೇ ಕೆಂಬಣ್ಣದ ವಿಶೇಷ ಹಲಸು ತಳಿ ಬೆಳೆಯಲಾಗುತ್ತಿದೆ. ಈಗ ದೇವಾಲಯವೊಂದರಲ್ಲಿ ಭಕ್ತರಿಗೆ ಉಚಿತವಾಗಿ ವಿಶೇಷ ತಳಿಯ ಹಲಸಿನ ಗಿಡಗಳನ್ನು ಪ್ರಸಾದ ರೂಪದಲ್ಲಿ ನೀಡಿರುವುದು ಶ್ಲಾಘನೆಗೆ ಪಾತ್ರವಾಗಿದೆ.

ಬಾಯಾರು ಹಿರಣ್ಯದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಶ್ರಾವಣ(ಸೋಣ) ಸಂಕ್ರಮಣದ ವಿಶೇಷ ಪೂಜೆ ನಡೆಯಿತು. ದೇವರ ಪ್ರಸಾದವಾಗಿ ಭಕ್ತರಿಗೆ ಕೆಂಪು ಬಕ್ಕೆ ಹಲಸಿನ ಸಸಿಗಳನ್ನು ನೀಡಲಾಯಿತು.

ದೇವಾಲಯದ ಬಾಯಾರು ಕಂಬಳ ಮನೆತನದ ಪವಿತ್ರ ಚಕ್ರಪಾಣಿ ಹಿರಣ್ಯ ತಿರುಮಲೇಶ್ವರ ಭಟ್ ಅವರ ತೋಟದಲ್ಲಿ 1924ರಿಂದಲೇ ವೈವಿಧ್ಯಮಯ ಹಲಸುಗಳಿವೆ. ಈ ಬಾರಿ ಈ ಹಲಸುಗಳ ಪೈಕಿ ಕೆಂಪಲಸು ಯಥೇಚ್ಛ ಫಲ ಕೊಟ್ಟಿತ್ತು. ಲಾಕ್‌ಡೌನ್ ಕಾಲದಲ್ಲಿ ಹಲಸು ಆಹಾರವಾದ ವರದಿಗಳನ್ನು ಓದಿ ಸ್ಫೂರ್ತಿ ಪಡೆದು ಕೆಂಪಲಸಿನ ಬೀಜ ಸಂಗ್ರಹಿಸಿ ಗಿಡ ಮಾಡಿದರು.

ಪ್ರಸ್ತುತ 100ರಷ್ಟು ಸಸಿಗಳನ್ನು ಬಿತ್ತನೆ ಮಾಡಲಾಗಿದ್ದು, ಸಂಕ್ರಮಣದ ದಿನ ಆಗಮಿಸಿದ 20 ಭಕ್ತರಿಗೆ ಪ್ರಸಾದ ರೂಪವಾಗಿ ಕೊಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮವಾಸಿಗಳೆಲ್ಲ ಕ್ಷೇತ್ರಕ್ಕೆ ಆಗಮಿಸಲು ಸಾಧ್ಯವಾಗದ ಕಾರಣ ಉಳಿದ ಸಸಿಗಳನ್ನು ಭಕ್ತರ ಮನೆಗಳಿಗೆ ತಲಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿರುಮಲೇಶ್ವರ ಭಟ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಪ್ರಸಾದ ವಿತರಿಸುವಂತಿಲ್ಲ. ಜತೆಗೆ ಕೋವಿಡ್ ಕಾಲಘಟ್ಟ ಪ್ರಾಚೀನ ತುಳುನಾಡಿನ ಪರಂಪರೆಗೆ ಮರಳುತ್ತಿದ್ದು, ಈ ಪೈಕಿ ಹಲಸು ಪರಿಪೂರ್ಣ ಆಹಾರ ಬೆಳೆಯಾಗಿ ಖ್ಯಾತಿ ಪಡೆದಿದೆ.ಆದ್ದರಿಂದ ಸಂಕ್ರಮಣದಂದು ಪ್ರಸಾದ ರೂಪದಲ್ಲಿ ಸ್ಥಳೀಯ ಭಕ್ತರಿಗೆ ಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವವರಿಗೆ ವಿತರಿಸುವ ಬಗ್ಗೆ ಕಾರ್ಯಯೋಜನೆ ರೂಪಿಸಲಾಗುವುದು. ತಿರುಮಲೇಶ್ವರ ಭಟ್ ಹಿರಣ್ಯ, ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪವಿತ್ರ ಚಕ್ರಪಾಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net