ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ

4 ಎಸ್ಕೆಪಿ 1h
Published on

ಶಿಕಾರಿಪುರ: ತಾಲೂಕಿನ ಹಾರೋಗೊಪ್ಪ ಗ್ರಾಮ ಪಂಚಾಯಿತಿ ಈ ಬಾರಿಯ ಗ್ರಾಂಧಿ ಗ್ರಾಮ ಪ್ರಶಸ್ತಿಗೆ ಭಾಜನವಾಗಿದೆ. ಶೇಕಡ ನೂರರಷ್ಟು ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ ಎಂಬ ಹೆಗ್ಗಳಿಕೆಗೆ ಈ ಪಂಚಾಯಿತಿ ಹೊಂದಿದ್ದು ಪರಿಸರ ಸಂರಕ್ಷಣೆ, ಆರೋಗ್ಯ, ಕುಡಿಯುವ ನೀರು, ಚರಂಡಿ, ರಸ್ತೆ, ತೆರಿಗೆ ವಸೂಲಾತಿ, ವಿದ್ಯುತ್, ಸಮರ್ಥವಾಗಿ ಬರಗಾಲ ನಿರ್ವಹಣೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಈ ಪ್ರಶಸ್ತಿ ಲಭಿಸಿದೆ.
ಹಾರೋಗೊಪ್ಪ ಪಂಚಾಯಿತಿ 14 ಗ್ರಾಮಗಳನ್ನು ಒಳಗೊಂಡಿದ್ದು ಹಿರೇಕೊರಲಹಳ್ಳಿ, ಅಂಜನಾಪುರ ಸರ್ಕಲ್, ಅಂಜನಾಪುರ, ಮತಿಘಟ್ಟ, ಅಂಜನಾಪುರ ಮರಾಠಿ ಕ್ಯಾಂಪ್, ಎಳನೀರುಕೊಪ್ಪ, ಅತ್ತಿಬೈಲು, ಎಂಸಿಆರ್‌ಪಿ ಕಾಲನಿ, ಸಿಡಗಿನಾಳ ಮರಾಠ ಕ್ಯಾಂಪ್, ಎರೇಕಟ್ಟೆ ಮರಾಠಾ ಕ್ಯಾಂಪ್, ಸಿದ್ದನಮಟ್ಟೆ ಮರಾಠಾ ಕ್ಯಾಂಪ್, ಹಾರೋಗೊಪ್ಪ, ಎರೇಕಟ್ಟೆ ಮುಂತಾದ ಗ್ರಾಮಗಳಿವೆ.
ಜಿಲ್ಲಾ ಕೇಂದ್ರದಿಂದ 65 ಕಿಮೀ, ತಾಲೂಕು ಕೇಂದ್ರ ಶಿಕಾರಿಪುರದಿಂದ 15 ಕಿಮೀ ದೂರದಲ್ಲಿದೆ. ಒಟ್ಟು 7,585 ಜನಸಂಖ್ಯೆ ಹೊಂದಿದ್ದು ಶಿವಮೊಗ್ಗ- ತಡಸ ರಾಜ್ಯ ಹೆದ್ದಾರಿಯಲ್ಲಿದೆ, ಒಟ್ಟು 6 ವಾರ್ಡ್‌ಗಳಿದ್ದು 14 ಚುನಾಯಿತ ಪ್ರತಿನಿಧಿಗಳಿದ್ದಾರೆ. ಪರಿಶಿಷ್ಟ ಜಾತಿಯ 658, ಪರಿಶಿಷ್ಟ ಪಂಗಡದ 185, ಇತರ 444 ಕುಟುಂಬಗಳು ಸೇರಿ ಒಟ್ಟು ಕುಟುಂಬಗಳ ಸಂಖ್ಯೆ 1287.
ಈ ಪಂಚಾಯಿತಿ ಭೌಗೋಳಿಕ ವಿಸ್ತೀರ್ಣ 6,52,842 ಚದರ ಕಿಮೀ ಇದೆ. ಇಲ್ಲಿನ ಪ್ರಮುಖವಾಗಿ ಅಡಕೆ, ಭತ್ತ, ಬಾಳೆ, ಮೆಕ್ಕೆಜೋಳ ಜತೆಗೆ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ತರಕಾರಿಯನ್ನು ಬೆಳೆಯಲಾಗುತ್ತಿದೆ. ಕೃಷಿಕರ ಸಂಖ್ಯೆ 850. ಕೃಷಿ ಜಮೀನಿನ ವಿಸ್ತೀರ್ಣ1,423 ಹೆಕ್ಟೇರ್ ಇದ್ದು ಅಂತರ್ಜಲ ಮಟ್ಟ 300ರಿಂದ 400 ಅಡಿ ಇದೆ. ಕೃಷಿ ಮತ್ತು ಕುಡಿಯುವ ನೀರಿಗೆ ನದಿ, ಕೆರೆ, ಕೊಳವೆಬಾವಿ ಮತ್ತು ಅಂಜನಾಪುರ ಜಲಾಶಯ ಮೂಲವಾಗಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲಾಗಿದೆ. ಜನತೆಗೆ ಸೌಲಭ್ಯ ತಲುಪಿಸುವಲ್ಲಿ ಕೂಡ ಪಂಚಾಯಿತಿ ಮುಂಚೂಣಿಯಲ್ಲಿದೆ. ಸೋಲಾರ್ ಬೀದಿ ದೀಪಗಳ ಅಳವಡಿಕೆ ಮತ್ತು ಸಮರ್ಪಕ ನಿರ್ವಹಣೆ, ಆರ್ಥಿಕ ಸದೃಢತೆ, ಶಿಸ್ತುಬದ್ಧ ಮತ್ತು ಜನಪರ ಸಮಸ್ಯೆಗಳನ್ನು ನೀಗುವ ಗ್ರಾಮಸಭೆಗಳು, ತರಬೇತಿ ಶಿಬಿರಗಳು, ಅಡಕೆ ತೋಟ, ಇಂಗುಗುಂಡಿ, ಜಾನುವಾರು ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾರ್ಯಗಳಾಗಿವೆ ಎನ್ನುತ್ತಾರೆ ಪಿಡಿಒ ಸಿ.ಚಂದ್ರು. ಈ ಪುರಸ್ಕಾರ ಅಧ್ಯಕ್ಷರು, ಸರ್ವ ಸದಸ್ಯರು, ಪಿಡಿಒ, ಸಿಬ್ಬಂದಿ ಪ್ರಾಮಾಣಿಕ ಸೇವೆಗೆ ಸಂದ ಪ್ರತಿಫಲವಾಗಿದೆ.
ಪ್ರಶಸ್ತಿ ಬರುತ್ತದೆ ಅಂದುಕೊಂಡಿರಲಿಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಪ್ರಶಸ್ತಿ ಸಿಕ್ಕಿರುವುದರಿಂದ ಅತ್ಯಂತ ಸಂತೋಷವಾಗಿದೆ. ಇನ್ನಷ್ಟು ಹೆಚ್ಚಿನ ಜನಪರವಾದ ಕೆಲಸಗಳನ್ನು ಮಾಡಲು ಅವಕಾಶ ಸಿಕ್ಕಿರುವುದಲ್ಲದೆ ಹೆಚ್ಚಿನ ಜವಾಬ್ದಾರಿಯೂ ಬಂದಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣ ಶ್ರಮಹಾಕಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷ ಅಶೋಕ್ ಕುಮಾರ್.
ಹಾರೋಗೊಪ್ಪ ಗ್ರಾಪಂಗೆ ಸ್ವಚ್ಛತೆ, ಆರೋಗ್ಯ, ಮೂಲ ಸೌಕರ್ಯಗಳ ಸಮರ್ಥವಾದ ನಿರ್ವಹಣೆಗೆ ಗಾಂಧಿ ಗ್ರಾಮ ಪುರಸ್ಕಾರ ಲಭ್ಯವಾಗಿದೆ. ವಿಭಜಿತ ಕುಟುಂಬಗಳನ್ನು ಗುರುತಿಸಿ ಅವುಗಳಿಗೂ ಶೌಚಗೃಹ ನೀಡುವ ಮೂಲಕ, ಮನೆಮನೆಗೆ ತೆರಳಿ ಕಸ ಸಂಗ್ರಹಿಸಿ ಸ್ವಚ್ಛತೆ ಕಾಪಾಡುವ ಮೂಲಕ ಈ ಪಂಚಾಯಿತಿ ಮುಂಚೂಣಿಯಲ್ಲಿದೆ. ಶೇಕಡಾ ನೂರರಷ್ಟು ಬಯಲು ಶೌಚ ಮುಕ್ತವಾಗಿದೆ. ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಕೂಡ ಗಮನಾರ್ಹವಾಗಿದೆ ಎನ್ನುತ್ತಾರೆ ತಾಪಂ ಇಒ ಪರಮೇಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net