ರಾಮಘಡದಲ್ಲಿ ಗೆಸ್ಟ್‌ಹೌಸ್ ನಿರ್ಮಾಣ, ಶಾಸಕ ಈ.ತುಕಾರಾಮ್ ಮಾಹಿತಿ

UDGHATANE
ಸಂಡೂರಿನ ತಾಪಂ ಕಚೇರಿಯಲ್ಲಿ ಸಂಡೂರು ಅನ್ವೇಷಣೆ ಕಾರ್ಯಕ್ರಮವನ್ನು ಶಾಸಕ ಈ.ತುಕಾರಾಮ್ ಉದ್ಘಾಟಿಸಿದರು. ಡಿಎಫ್‌ಒ ಸಂದೀಪ್ ಸೂರ್ಯವಂಶಿ, ತಹಸೀಲ್ದಾರ್ ಜಿ.ಅನಿಲ್ ಕುಮಾರ್, ತಾಪಂ ಇಒ ಷಡಕ್ಷರಯ್ಯ ಇತರರಿದ್ದರು.
Published on

ಸಂಡೂರು: ತಾಲೂಕಿನ ರಾಮಘಡದಲ್ಲಿ ಗೆಸ್ಟ್‌ಹೌಸ್ ನಿರ್ಮಾಣ, ಬಂಡ್ರಿ ಅರಣ್ಯದ ಬಯಲು ಆಂಜನೇಯ ದೇವಸ್ಥಾನ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಈ.ತುಕಾರಾಮ್ ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಡೂರು ಅನ್ವೇಷಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಭೀಮತೀರ್ಥ 4ಕಿ.ಮೀ, ಮೀನುಗೊಳ್ಳದಿಂದ ರಾಮಘಡ 8 ಕಿ.ಮೀ, ಉಬ್ಬಳಗಂಡಿಯಿಂದ ಭೈರವತೀರ್ಥ 8ಕಿ.ಮೀ, ಹುಲಿಕುಂಟೆಯಿಂದ ಕುಮಾರಸ್ವಾಮಿ ದೇವಸ್ಥಾನದವರೆಗಿನ 8 ಕಿ.ಮೀ ಚಾರಣ ಪಥಗಳನ್ನು ಉದ್ಘಾಟಿಸುವುದು ಸಂತೋಷ ತಂದಿದೆ. ಪಟ್ಟಣದ ಸ್ಕಂದಪುರದಲ್ಲಿನ ಪಾರ್ಕ್‌ನ್ನು 75ನೇ ಸ್ವಾತಂತ್ರ್ಯ ಉದ್ಯಾನ ಮಾಡುವುದು ಸೇರಿ ಸಂಡೂರಿನ 34 ಪಾರ್ಕ್‌ಗಳನ್ನು ಆಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.

ತಾರಾನಗರ ಡ್ಯಾಂನಲ್ಲಿ 120 ಅಡಿ ಕುಮಾರಸ್ವಾಮಿ ದೇವರ ಪ್ರತಿಮೆ ನಿಲ್ಲಿಸುವ ಯೋಚನೆಯಿದೆ. ಹೊಸಪೇಟೆ ರಸ್ತೆಯ ರಾಧಾನಗರದಲ್ಲಿ ಅದಿರು ಲಾರಿಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಬೇಕು. ಬಸ್, ಬೈಕ್‌ನಲ್ಲಿ ಓಡಾಡುವವರಿಗೆ ತೊಂದರೆಯಾಗುತ್ತದೆ. ಗಂಡಿ ನರಸಿಂಹ ಸ್ವಾಮಿ ದೇವಸ್ಥಾನ ಸುತ್ತಮುತ್ತ ಪ್ರಸ್ತುತಕ್ಕಿಂತ ಹೆಚ್ಚುವರಿ ಗಣಿಗಾರಿಕೆಗೆ ಅವಕಾಶ ಕೊಡಬಾರದು. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಸಂಡೂರು ಉತ್ಸವ ಮಾಡುವ ಯೋಚನೆಯಿದೆ ಎಂದರು.

ಡಿಎಫ್‌ಒ ಸಂದೀಪ್ ಸೂರ್ಯವಂಶಿ ಮಾತನಾಡಿ, ಅರಣ್ಯ ಚಾರಣದಿಂದ ಸ್ಥಳೀಯರಿಗೆ ಉದ್ಯೋಗ ಸಿಗಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಇವೆಲ್ಲ ಅಭಿವೃದ್ಧಿ ಹೊಂದಬೇಕಿದೆ. ಸಂಡೂರು ಅರಣ್ಯ ಪ್ರದೇಶ ಫಶ್ಚಿಮಘಟ್ಟಗಳಂತಿದೆ. ಮೈನಿಂಗ್‌ನಿಂದಾಗಿ ಕಾಡು ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ. ಬೈರವತೀರ್ಥ, ಭೀಮತೀರ್ಥ, ಗಂಡಿ ಮಲಿಯಮ್ಮ ಮುಂತಾದ ದೈವಿವನಗಳನ್ನು ಅಭಿವೃದ್ಧಿಗೋಳಸಲಾಗುವುದು. ಪಟ್ಟಣದಲ್ಲಿ ಅಪರೂಪದ ಮೆಡಿಷನ್ ಪ್ಲಾಂಟ್ ಮಾಡುತ್ತಿದ್ದೇವೆ. ತಾರಾನಗರ ಡ್ಯಾಂ ಬಳಿಯ ವೀಕ್ಷಾಣ ಪಾಯಿಂಟ್ ಅಭಿವೃದ್ಧಿಗೊಳಿಸಬೇಕಿದೆ ಎಂದರು.

ತಹಸೀಲ್ದಾರ್ ಜಿ.ಅನೀಲ್‌ಕುಮಾರ್, ತಾಪಂ ಇಒ ಎಸ್.ಷಡಕ್ಷರಯ್ಯ, ಪುರಸಭೆ ಮಾಜಿ ಅಧ್ಯಕ್ಷೆ ಅನಿತಾ ವಸಂತಕುಮಾರ್, ಕಸಾಪದ ರಮೇಶ್ ಗಡಾದ್, ಮುಖಂಡ ಜಯರಾಂ, ರಾಮು ಅರಿಕೇರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಚಾರಣ ಪಥಗಳ ಕಿರು ಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸಿಪಿಐ ಮಹೇಶ್‌ಗೌಡ, ಆರ್‌ಎಫ್‌ಒಗಳಾದ ಸೈಯದ್ ದಾದಾ ಖಲಂದರ್, ಗಿರೀಶ್, ಮಾಬ್ಬಾಷ, ಮಾಜಿ ಪುರಸಭೆ ಉಪಾಧ್ಯಕ್ಷ ಈರೇಶ್ ಸಿಂಧೆ, ಮುಖ್ಯಾಧಿಕಾರಿ ಕೆ.ಜಯಣ್ಣ, ಮುಖಂಡರಾದ ಕುರುಬರ ಸತ್ಯಪ್ಪ, ಜಿ.ಎಸ್.ಸೋಮಪ್ಪ, ಕಾಶಿಂಪೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net