ಶೋಷಿತರ ಪರ ದನಿ ಎತ್ತಲಿ ಪ್ರಜ್ಞಾವಂತರು

Dr.Pote
ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ದಮನಿತರ ಶಕ್ತಿ ಕಥನ ಗ್ರಂಥವನ್ನು ಹಿರಿಯ ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಬಿಡುಗಡೆ ಮಾಡಿದರು. ಪ್ರೊ.ಮಲ್ಲೇಪುರಂ ವೆಂಕಟೇಶ, ಪ್ರೊ.ಎಚ್.ಟಿ.ಪೋತೆ, ಡಾ.ಪಿ.ನಾಗರಾಜ ಇತರರಿದ್ದರು
Published on

ಡಾ.ಬೈರಮಂಗಲ ರಾಮೇಗೌಡ ಆಶಯ | ಗುಲ್ಬರ್ಗ ವಿವಿಯಲ್ಲಿ ದಮನಿತರ ಶಕ್ತಿ ಕಥನ ಗ್ರಂಥ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ವರ್ತಮಾನದ ತಲ್ಲಣ ಮತ್ತು ಬೇಗುದಿಯ ವಿಲಕ್ಷಣ ಘಟನೆಗಳು ಸಮಾಜವನ್ನು ಬಾಧಿಸುತ್ತಿವೆ. ಬದುಕಿನ ಕನಸು ಕಾಣುವ ಶೋಷಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಿರಾತಂಕವಾಗಿ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ನೋವು ಅನುಭವಿಸುತ್ತಿರುವ ಶೋಷಿತರ ಪರ ಪ್ರಜ್ಞಾವಂತ ವರ್ಗ ಧ್ವನಿ ಎತ್ತಬೇಕು ಎಂದು ಹಿರಿಯ ಸಾಹಿತಿ, ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಸಿದ್ದಲಿಂಗೇಶ್ವರ ಪ್ರಕಾಶನ, ಬೆಂಗಳೂರಿನ ಅನ್ನಪೂರ್ಣ ಪ್ರಕಾಶನದ ಸಹಯೋಗದಡಿ ಹರಿಹರ ಸಭಾಂಗಣದಲ್ಲಿ ಪ್ರೊ.ಎಚ್.ಟಿ. ಪೋತೆ ಸಂಪಾದಿಸಿದ ಮಲ್ಲಿಕಾರ್ಜುನ ಖರ್ಗೆ ಜತೆ ಮಾತುಕತೆ ಹಾಗೂ ಡಾ. ಪಿ.ನಾಗರಾಜ ಸಂಪಾದಿಸಿದ ಬಯಲೆಂಬೊ ಬಯಲು ದಮನಿತರ ಶಕ್ತಿ ಕಥನ ಗ್ರಂಥಗಳನ್ನು ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬುದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ನಿದರ್ಶನ. ಪ್ರಚಲಿತ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳ ಗ್ರಹಿಸಿಕೊಂಡು ಸಂಘಟಿತ ಹೋರಾಟದ ಅಗತ್ಯವಿದೆ. ಕೃಷಿಕರು, ರೈತರು, ದಮನಿತರು, ಶೋಷಿತರ ನೋವು-ನಲಿವುಗಳಿಗೆ ಸಾಮುದಾಯಿಕ ಬೆಂಬಲ ಬೇಕಿದೆ ಎಂದರು.
ರಾಣಿ ಚೆನ್ನಮ್ಮ ವಿವಿ ಕನ್ನಡ ವಿಭಾಗದ ಡಾ.ಪಿ.ನಾಗರಾಜ ಮಾತನಾಡಿ, ಬಯಲೆಂಬೊ ಬಯಲು ದಮನಿತರ ಶಕ್ತಿ ಕಥನ ಕೃತಿಯಲ್ಲಿ ಜೀವಪರ ಮತ್ತು ಜೀವನಪ್ರಿಯ ಕಥೆಗಳಿವೆ. ದಲಿತ ಸಂವೇದನೆ ಚಿಂತನೆಯನ್ನು ಪ್ರತಿ ಕಥೆ ಒತ್ತಿ ಹೇಳುತ್ತದೆ. ಶೋಷಿತರು ಮತ್ತು ದಮನಿತರ ವರ್ತಮಾನದ ಬದುಕು ಕಥೆಗಳಲ್ಲಿ ಅಡಗಿದೆ. ದಲಿತರ ಜೀವನ ತಲ್ಲಣ ಮತ್ತು ಸಂಗತಿಗಳನ್ನು ಬಿಂಬಿಸುತ್ತವೆ ಎಂದು ಹೇಳಿದರು.
ಸಿದ್ದಲಿಂಗೇಶ್ವರ ಪ್ರಕಾಶನದ ಸಿದ್ದಲಿಂಗ ಕೊನೇಕ್ ಮಾತನಾಡಿ, ಸಿದ್ದಲಿಂಗೇಶ್ವರ ಪ್ರಕಾಶನದಿಂದ ಈವರೆಗೆ ೩೫೦೦ ಕೃತಿಗಳನ್ನು ಮುದ್ರಿಸಲಾಗಿದೆ. ಆದರೆ ಓದುವ ವಿದ್ಯಾರ್ಥಿ ಸಮೂಹ ಸಂಖ್ಯೆ ಕ್ಷೀಣಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಬರೆಯುವ ಮತ್ತು ಓದುವ ವರ್ಗ ಬೆಳೆಸಬೇಕಿದೆ. ಯುವ ಲೇಖಕರು ಮುನ್ನೆಲೆಗೆ ಬರಬೇಕಾದರೆ ಓದುವ ಸಂಸ್ಕೃತಿ, ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತನಾಡಿ, ಪ್ರತಿಕ್ರಿಯೆಗಳು ಬಂದಾಗಲೇ ಅತ್ಯುತ್ತಮ ಕೃತಿ ರೂಪ ಪಡೆಯುತ್ತದೆ. ಬುದ್ಧ, ಬಸವ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ಡಾ.ಮಲ್ಲಿಕಾರ್ಜನ ಖರ್ಗೆ ಜೀವನದ ಮೇಲೆ ಪ್ರಭಾವ ಬೀರಿವೆ. ನಾಲ್ಕು ದಶಕದ ಅವರ ರಾಜಕೀಯ ಜೀವನದಲ್ಲಿ ಶೋಷಿತರು, ತಳಸಮುದಾಯ ಮತ್ತು ಮಹಿಳೆಯರ ಬದುಕು ಸುಧಾರಣೆಗೆ ಶ್ರಮಿಸಿದ್ದಾರೆ. ಸಮಕಾಲೀನ ಸಮಸ್ಯೆಗಳಿಗೆ ಸೂಕ್ಷö್ಮವಾಗಿ ಧ್ವನಿ ಎತ್ತುವ ಡಾ.ಖರ್ಗೆ ಅವರಂತೆ ಸತ್ಯದ ಪರ ಮಾತನಾಡುವವರು ವಿರಳ ಎಂದರು.
ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಘಟನೆಗಳನ್ನು ಪ್ರಶ್ನಿಸುವ ಮನಸ್ಥಿತಿ ಇಲ್ಲವಾಗಿದೆ. ಕೊಪ್ಪಳದಲ್ಲಿ ದಲಿತ ಯುವಕನಿಗೆ ಕ್ಷೌರ ಮಾಡಲು ಹೇಳಿದ್ದಕ್ಕೆ ಕೊಲೆ ಆಗಿದೆ. ಮಾನವೀಯತೆ ಕಾಣದ ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಕೇಳುವ ಜನರು ಕೇಳದೆ ಮೌನವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ ಮಾತನಾಡಿ, ಪ್ರೊ.ಪೋತೆ ಮತ್ತು ಡಾ. ಪಿ. ನಾಗರಾಜ ಸಂಪಾದಿಸಿರುವ ಕಥೆಗಳಲ್ಲಿ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸತ್ಯ ಸಂಗತಿಗಳು ಎಳೆಎಳೆಯಾಗಿ ಬಿತ್ತರವಾಗುತ್ತವೆ. ಒಬ್ಬ ಲೇಖಕ ತಾನು ಬರೆದು ತನ್ನೊಂದಿಗೆ ಇರುವವರನ್ನು ಬರಹಗಾರನನ್ನಾಗಿ ಬೆಳೆಸಿರುವ ಪರೀದಿಯಲ್ಲಿ ಪೋತೆ ಪರಿಶ್ರಮ ನಿಜಕ್ಕೂ ಮೆಚ್ಚಬೇಕು ಎಂದರು.
ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‌ನ ಸುರೇಶ್ ಉಪಸ್ಥಿತರಿದ್ದರು. ರೇಣುಕಾ ಪ್ರಾರ್ಥಿಸಿದರು. ಡಾ.ಪ್ರಕಾಶ ಸಂಗಮ ಸ್ವಾಗತಿಸಿದರು. ಡಾ.ಪ್ರೇಮಾ ಅಪಚಂದ ನಿರೂಪಣೆ ಮಾಡಿದರು. ಡಾ.ಶಿವಲೀಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net