

ಕೆ.ಆರ್.ಪೇಟೆ: ತಾಲೂಕಿನ ಕಿಕ್ಕೇರಿ ಹೋಬಳಿಯ ಬೇವನಹಳ್ಳಿ ಗ್ರಾಮದ ಚಂದ್ರಮ್ಮ ಅವರು ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿ ನೀಡುವ 2022ರ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತೊಗಲು ಗೊಂಬೆಯಾಟದ ಕಲಾ ಪ್ರಕಾರದಲ್ಲಿ ಚಂದ್ರಮ್ಮ ಆಯ್ಕೆಯಾಗಿದ್ದಾರೆ. 50 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಅಕಾಡೆಮಿ ತಿಳಿಸಿದೆ.
ಪರಿಚಯ: 80 ವಯಸ್ಸಿನ ಚಂದ್ರಮ್ಮ ಅವರು 1947ರಲ್ಲಿ ನಾಗಮಂಗಲ ತಾಲೂಕಿನ ಗೋವಿಂದಘಟ್ಟದ ರಾಮಯ್ಯ ಮತ್ತು ಮರಿಯಮ್ಮ ದಂಪತಿ ಪುತ್ರಿಯಾಗಿ ಜನಿಸಿದರು. ಶಿಕ್ಷಣದಿಂದ ವಂಚಿತರಾಗಿದ್ದ ಇವರು 12ನೇ ವಯಸ್ಸಿನಿಂದಲೇ ಪಾಲಕರ ಜತೆಗೂಡಿ ತೊಗಲು ಗೊಂಬೆಯಾಟವನ್ನು ಕರಗತ ಮಾಡಿಕೊಂಡರು. ಬೇವನಹಳ್ಳಿಯ ಬಿಸಲಯ್ಯ ಎಂಬುವರೊಂದಿಗೆ ವಿವಾಹವಾಗಿದ್ದ ಚಂದ್ರಮ್ಮ, ಪತಿ ಕಾಲವಾದ ನಂತರ ಭಿಕ್ಷಾಟನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ಕಷ್ಟ ಕಾಲದಲ್ಲಿ ಇವರ ಪ್ರತಿಭೆ ಗುರುತಿಸಿ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಕ್ಕೆ ಚಂದ್ರಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತೆ ಚಂದ್ರಮ್ಮ ಪ್ರತಿಕ್ರಿಯಿಸಿ, ಟಿವಿ ಮಾಧ್ಯಮ ಬರುವ ಮೊದಲು ನಾವು ತೊಗಲು ಗೊಂಬೆಯಾಟ ಪ್ರದರ್ಶಿಸಿ ಜೀವನ ನಡೆಸುತ್ತಿದ್ದವು. ಈಗ ಮಾಧ್ಯಮದ ಹೊಡೆತಕ್ಕೆ ನಮ್ಮ ಕಸಬು ಅಳಿವಿನಂಚಿನಲ್ಲಿದೆ. ನನ್ನ ಗುರುತಿಸಿ ಪ್ರಶಸ್ತಿ ನೀಡಿದಕ್ಕೆ ಅಕಾಡೆಮಿಗೆ ಧನ್ಯವಾದಗಳು ಎಂದರು.