

ಬಯಲಾಟ ಹಾಗೂ ಸಣ್ಣಾಟಗಳ ಪರಿಷ್ಕರಣೆ ಅಗತ್ಯ
ವಿಜಯವಾಣಿ ಸುದ್ದಿಜಾಲ ಧಾರವಾಡ
ಬಯಲಾಟ ಹಾಗೂ ಸಣ್ಣಾಟಗಳು ಪೌರಾಣಿಕ ಕಥೆಗಳ ಮೂಲಕ ನಮ್ಮ ಪರಂಪರೆ, ಸಂಸ್ಕೃತಿಯನ್ನು ಪ್ರಚಾರಗೊಳಿಸುತ್ತಿವೆ. ಕಾಲಕ್ಕೆ ತಕ್ಕಂತೆ ಪರಿಷ್ಕರಣೆಗೊಂಡು ಹೊಸ ರೂಪದೊಂದಿಗೆ ಪ್ರದರ್ಶನಗೊಳ್ಳಬೇಕು ಎಂದು ಸಾಹಿತಿ ವೆಂಕಟೇಶ ಮಾಚಕನೂರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಗುರುವಾರ ಜರುಗಿದ `ಬಯಲಾಟ: ಹೊಸ ಸಾಧ್ಯತೆಗಳು' ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಾರಂಪರಿಕ ಕಲೆಗಳು ಉಳಿಯಬೇಕಾದರೆ ಮೊದಲು ಕನ್ನಡ ಉಳಿಯಬೇಕು. ಭಾಷೆ ಉಳಿಯದಿದ್ದರೆ ನಮ್ಮ ಸಂಸ್ಕತಿ, ಪರಂಪರೆಗೆ ಉಳಿವಿಲ್ಲ. ಆದ್ದರಿಂದ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ನೀಡಬೇಕು ಎಂದರು.
ಹಿ0ದೆ ಜಾತ್ರೆ, ಉತ್ಸವಗಳಲ್ಲಿ ಬಯಲಾಟ, ಸಣ್ಣಟ, ಪಾರಿಜಾತಗಳು ಗ್ರಾಮೀಣ ಜನತೆಗೆ ಮನರಂಜನೆ ನೀಡುತ್ತಿದ್ದವು. ಕಲಾವಿದರಿಗೆ ಪ್ರೋತ್ಸಾಹ ದೊರೆಯುತ್ತಿತ್ತು. ಆಧುನಿಕತೆಯ ಭರಾಟೆಯಿಂದ ನೇಪಥ್ಯಕ್ಕೆ ಸರಿಯುತ್ತಿರುವುದು ವಿಷಾದಕರ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಹೆಜ್ಜೆ ಮಜಲು ಮತ್ತು ಕರಡಿ ಮಜಲಿನಂಥ ಕಲೆಗಳು ಮುಂದಿನ ತಲೆಮಾರಿಗೆ ಕಣ್ಮರೆಯಾಗಬಹುದು. ಅವುಗಳ ಜೀವಂತಿಕೆಗೆ ಹೆಚ್ಚೆಚ್ಚು ಪ್ರದರ್ಶನಗಳಾಗಬೇಕು ಎಂದರು.
ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಎಸ್. ದುರ್ಗಾದಾಸ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಹೂಗಾರ, ಇತರರಿದ್ದರು.