

ಕೆ.ಆರ್.ಪೇಟೆ: ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಟಿ.ಮಂಜು ಅವರ ಕ್ರಷರ್ ಕಾನೂನು ಪ್ರಕಾರ ಇದ್ದರೂ ನಡೆಸಲು ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಎದುರು ಪ್ರತಿಭಟನೆ ನಡೆಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಚ್ಚರಿಕೆ ನೀಡಿದರು.
ಕ್ರಷರ್ ಆರಂಭಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡುವ ಸಲುವಾಗಿ ತಾಲೂಕಿನ ಹರಳಹಳ್ಳಿಗೆ ಶನಿವಾರ ಆಗಮಿಸಿದ ಅವರು, ಪ್ರತಿಭಟನೆ ಬದಲಿಗೆ ಕಾರ್ಯಕರ್ತರ ಕುಂದುಕೊರತೆ ಆಲಿಕೆ ಸಮಾರಂಭದಲ್ಲಿ ಮಾತನಾಡಿದರು.
ಕ್ರಷರ್ ನಡೆಸಲು ಹೈಕೋರ್ಟ್ ಆದೇಶವಿದ್ದರೂ ಸಚಿವ ನಾರಾಯಣಗೌಡ, ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ. ನಾರಾಯಣಗೌಡ 2016ರಲ್ಲಿ ಕ್ರಷರ್ ಆರಂಭಿಸಲು ಅನುಮತಿ ನೀಡುವಂತೆ ಅಂದಿನ ಸಚಿವ ವಿನಯ್‌ಕುಲಕರ್ಣಿಗೆ ಪತ್ರ ಬರೆದಿದ್ದರು. 2020ರ ಜನವರಿಯಲ್ಲಿ ಕ್ರಷರ್‌ಗೆ ನೀಡಿರುವ ಅನುಮತಿ ರದ್ದು ಪಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಎರಡೂ ಪತ್ರಗಳನ್ನು ಓದಿದರು.
ಬಿಜೆಪಿಗೆ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ಬರಲಿಲ್ಲ ಎಂಬ ಕಾರಣಕ್ಕೆ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಸಿಎಂ ಹೆಸರು ಬಳಕೆ ಮಾಡಿಕೊಂಡು, ಡಿಸಿ ಇಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ. ನಾರಾಯಣಗೌಡರ ಬಗ್ಗೆ ನಾನು ಮಾತನಾಡಲ್ಲ. ನಾರಾಯಣಗೌಡ ಹಾಗೂ ಜಿಲ್ಲಾಧಿಕಾರಿ ಬಗ್ಗೆ ಸಿಎಂಗೆ ಫೋನ್‌ನಲ್ಲಿ ಹೇಳಿದ್ದೇನೆ. ಸಿಎಂ ಸಲಹೆಗಾರ ಲಕ್ಷ್ಮೀ ನಾರಾಯಣ್ ಅವರಿಗೂ ಹೇಳಿದ್ದೇನೆ.
ಜಿಲ್ಲಾಧಿಕಾರಿ, ಸಚಿವರ ತಾಳಕ್ಕೆ ಕುಣಿಯುತ್ತಿದ್ದಾರೆ. ಪ್ರಾದೇಶಿಕ ಪಕ್ಷದ ಉಳಿವಿಗಾಗಿ ಕಾರ್ಯಕರ್ತರ ಹಿತಕಾಯಲು ನಾನು ಸಿದ್ಧ. ಡಿಸಿ ವೆಂಕಟೇಶ್ ದಕ್ಷ ಅಧಿಕಾರಿ, ಅದರಲ್ಲಿ ಎರಡು ಮಾತಿಲ್ಲ. ಸಿಎಂ ಪುತ್ರ ನನ್ನ ಮನೆಗೆ ಬಂದಿದ್ದರು. ಕಾವೇರಿ ನಿವಾಸಕ್ಕೆ ನಾನು ಹೋಗ ಬೇಕಿತ್ತು. ಆದರೆ ಕೆಲ ಕಾರ್ಯ ಒತ್ತಡದಿಂದ ಹೋಗಲು ಆಗಲಿಲ್ಲ. ಆದರೂ ನಾನೊಂದು ಸಂದೇಶ ಕಳಿಸಿದ್ದೇನೆ. ಕಾರ್ಯಕರ್ತರ ವಿಷ ಯದಲ್ಲಿ ನಾನು ಕೊನೆ ಘಟ್ಟ ಮುಟ್ಟುವವರೆಗೂ ಹೋರಾಟ ಬಿಡಲ್ಲ ಎಂದು ಹೇಳಿದರು.
ಅಧಿಕಾರ ಸಿಕ್ಕಿದ್ದು ಕಡಿಮೆ:
ನಾನು ರಾಜಕೀಯಕ್ಕೆ ಬಂದು 60 ವಷರ್, ವಿಧಾನಸಭೆಗೆ ಸ್ಪರ್ಧೆ ಮಾಡಿ 58 ವಷರ್ ಆಯ್ತು. ನಾನು ಅಧಿಕಾರ ಅನುಭವಿಸಿದ್ದು 10 ತಿಂಗಳು ಪ್ರಧಾನಿ, ಒಂದುವರೆ ವಷರ್ ಸಿಎಂ, ನೀರಾವರಿ ಮಂತ್ರಿಯಾಗಿ ಕಾರ್ಯನಿರ್ವಹಿಸಿ, 3 ಸಲ ರಾಜೀನಾಮೆ ಕೊಟ್ಟಿದ್ದೀನಿ. ಒಬ್ಬೊಬ್ಬ ಕಾರ್ಯಕರ್ತರು ಈ ಪಕ್ಷದ ಶಕ್ತಿ. ಸಾಕಷ್ಟು ಹೋರಾಟ ಮಾಡಿದ ನಾನು ಎಲ್ಲವನ್ನೂ ಅರ್ಥೈಸಿಕೊಂಡಿದ್ದೇನೆ. ನನ್ನನ್ನು ಪಕ್ಷದಿಂದ ಹೊರಗೂ ಹಾಕಿದ್ದರು. ನನ್ನ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಸಲುವಾಗಿ ಸಾಕಷ್ಟು ಹೋರಾಡಿದ್ದೇನೆ.
ನೀವು ಇನ್ನೂ ಮೂರೂವರೆ ವರ್ಷ ಅಧಿಕಾರ ನಡೆಸಿ. ಅದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಒಬ್ಬ ಕಾರ್ಯಕರ್ತನಿಗೆ ತೊಂದರೆ ಆದರೂ ನಾನು ಸಿಡಿದೇಳುತ್ತೇನೆ. ಯಾವ ಸಿಎಂ, ಮಂತ್ರಿ ಬಗ್ಗೆಯೂ ಕೆಟ್ಟದ್ದಾಗಿ ಮಾತಾಡಲ್ಲ. ಅವರು ಮಹಾರಾಷ್ಟ್ರದಿಂದ ಬಂದವರು. ಎರಡು ದಿನದ ಹಿಂದೆ ಒಂದು ವಿಚಾರ ನೋಡಿದ್ದೇನೆ ಎಂದು ಪರೋಕ್ಷವಾಗಿ ಮಹಾರಾಷ್ಟ್ರಕ್ಕೆ ಜೈ ಎಂದಿದ್ದ ನಾರಾಯಣಗೌಡರನ್ನು ಟೀಕಿಸಿದರು. ನಮ್ಮ ಕಾರ್ಯಕರ್ತರಿಗೆ ತೊಂದರೆಯಾದರೆ ಸದನದ ಒಳ, ಹೊರಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಶಾಸಕರಾದ ಕೆ.ಸುರೇಶ್‌ಗೌಡ, ಡಾ.ಅನ್ನದಾನಿ, ಜಿಪಂ ಸದಸ್ಯರಾದ ಬಿ.ಎಲ್.ದೇವರಾಜು, ರಾಮದಾಸ್, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಜಾನಕೀರಾಮ್, ಯುವ ಘಟಕದ ಅಧ್ಯಕ್ಷ ಸಂತೋಷ್‌ಕುಮಾರ್, ಮುಖಂಡ ಎ.ಆರ್.ರಘು, ತಾಪಂ ಸದಸ್ಯರಾದ ಮೋಹನ್, ರಾಜಾಹುಲಿ ದಿನೇಶ್ ಮೊದಲಾದವರಿದ್ದರು.
ಐಎಎಸ್ ಬಗ್ಗೆ ಅನುಮಾನ
ಜಿಲ್ಲಾಧಿಕಾರಿ ವೆಂಕಟೇಶ್ ಐಎಎಸ್ ಪಾಸ್ ಮಾಡಿದ್ದಾರಾ ಎಂಬ ಅನುಮಾನ ಕಾಡುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಟಿ.ಮಂಜು ಹೇಳಿದರು. ಯಾವ ಜಿಲ್ಲಾಧಿಕಾರಿಯಾದರೂ ಎಷ್ಟೇ ಒತ್ತಡವಿದ್ದರೂ ಕಾನೂನಾತ್ಮಕವಾಗಿ ನಡೆದುಕೊಳ್ಳುತ್ತಾರೆ. ಆದರೆ ಈ ಯಪ್ಪ ಅವರು (ನಾರಾಯಣಗೌಡ) ಹೇಳಿದ ಎಲ್ಲವನ್ನೂ ಮಾಡುತ್ತಿದ್ದಾರೆ. ಆದ್ದರಿಂದ ಅವರ ಐಎಎಸ್ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರ ಪರಿಶೀಲನೆ ನಡೆಸಲಿ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೂ ಮನವಿ ಮಾಡತ್ತೇನೆ ಎಂದರು.