ನ್ಯೂನತೆ ಮೆಟ್ಟಿನಿಂತು ವಿಶೇಷ ಚೇತನರು ಸಾಧನೆ ಮಾಡಲಿ...

Chair Lead
Published on

ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆಶಯ

ಬ್ಯಾಟರಿ ಚಾಲಿತ ಗಾಲಿ ಕುರ್ಚಿ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿಶೇಷ ಚೇತನರೂ ಸಹ ಆತ್ಮವಿಶ್ವಾಸದಿಂದ ಜೀವನ ನಡೆಸುವಂತಾಗಲು ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಅನೇಕ ರೀತಿಯಲ್ಲಿ ಸಹಾಯ, -ಸೌಲಭ್ಯ ನೀಡುತ್ತಿವೆ. ಅವುಗಳನ್ನು ಸಮರ್ಪಕವಾಗಿ ಸದುಪಯೋಗ ಮಾಡಿಕೊಂಡು ತಮ್ಮಲ್ಲಿರುವ ನ್ಯೂನತೆ ಮೆಟ್ಟಿನಿಂತು ಉನ್ನತ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆಶಯ ವ್ಯಕ್ತಪಡಿಸಿದರು.

Chair 2
ಉಡುಯಪಿಯ ಖಾಸಗಿ ಹೋಟೆಲ್​ನಲ್ಲಿ ಜಿಲ್ಲಾಡಳಿತ, ಜಿಪಂ, ಮಣಿಪಾಲ ಟೆಕ್ನಾಲಜೀಸ್​ ಲಿ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಾ.28ರಂದು ಆಯೋಜಿಸಿದ್ದ ನವ ಜೀವನ-ವಿಶೇಷ ಚೇತನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿವಿಧ ಸೌಲಭ್ಯಗಳ ಕೊಡುಗೆ

ಮಣಿಪಾಲ್​ ಟೆಕ್ನಾಲಜೀಸ್​ ಲಿಮಿಟೆಡ್​ನ ಜನರಲ್​ ಮೆನೇಜರ್​ ಎಚ್​ಆರ್​ ಆ್ಯಂಡ್​ ಸಿಎಸ್​ಆರ್​ ರೊನಾಲ್ಡ್​ ಡಿಸೋಜಾ ಯೋಜನೆಯ ಉದ್ದೇಶ ಕುರಿತು ಮಾತನಾಡಿ, ಸಂಸ್ಥೆಯ ಸಿಎಸ್​ಆರ್​ ನಿಧಿಯ ಅನುದಾನವನ್ನು ಸಾಮಾಜಿಕ ಸೇವೆಗೆ, ವಿವಿಧ ಸವಲಭ್ಯ ಕಲ್ಪಿಸಲು ಜವಾಬ್ದಾರಿಯುತವಾಗಿ ಬಳಸಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು, ಶೌಚಾಲಯ ನಿಮಾರ್ಣ, ಸ್ಮಾರ್ಟ್​ ಕ್ಲಾಸ್​, ವಿದ್ಯಾರ್ಥಿವೇತನ ಸೇರಿದಂತೆ ಅತ್ಯ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಕ್ಯಾನ್ಸರ್​, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವೈದ್ಯಕೀಯ ನೆರವು ನೀಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್​ ಘಟಕವನ್ನೂ ಅಳವಡಿಸಲಾಗಿದೆ ಎಂದರು.

Chair 3
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿದರು. 14 ಫಲಾನುಭವಿಗಳಿಗೆ ಹಿಯರಿಂಗ್​ ಏಡ್​ ಕಿಟ್​, 7 ಜನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ವಿತರಿಸಲಾಯಿತು. ಸ್ವಯಂ ಚಾಲಿತ ಬ್ಯಾಟರಿ ನಿರ್ವಹಣೆ ಕುರಿತು ವೀಡಿಯೊ ಮೂಲಕ ಮಾಹಿತಿ ನೀಡಲಾಯಿತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಜಿಲ್ಲೆಯ ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಲಂದೂರು ಮಂಜುನಾಥ ಎಸ್​. ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು.

ಎಲ್ಲರಂತೆ ವಿಶೇಷ ಚೇತನರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವುದು ಸಂವಿಧಾನದ ಆಶಯವಾಗಿದ್ದು, ಅವರ ಸಬಲೀಕರಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆರೋಗ್ಯ ಸೇವೆಯಲ್ಲಿ ಹೊಸ ರೀತಿಯ ಉಪಕ್ರಮ ತೆಗೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆ ಮಹತ್ವದ ಸ್ಥಾನ ಪಡೆಯುವಂತಾಗಲಿ. | ಪ್ರತೀಕ ಬಾಯಲ್​. ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net