ವಿಜೃಂಭಣೆಯ ಮುತ್ತೈದೆಯರ ಬಟ್ಟಲು ಪೂಜೆ

06tnpnewsfile01 (3)
Published on

ತಿ.ನರಸೀಪುರ: ತಾಲೂಕಿನ ಪುರಾಣ ಪ್ರಸಿದ್ಧ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ಹಾಗೂ ಪಾರ್ವತಿ ದೇವಿ ಸನ್ನಿಧಾನದಲ್ಲಿ ಸೋಮವಾರ ಮುತ್ತೈದೆಯರ ಬಟ್ಟಲು ಪೂಜೆ ವಿಜೃಂಭಣೆಯಿಂದ ನೆರವೇರಿತು.


ಚೈತ್ರ ಮಾಸದ ಕೊನೆಯ ಸೋಮವಾರ ಪಾರ್ವತಿಯು ತಂದೆ ಮನೆಯಿಂದ ಗಂಡನ ಮನೆಗೆ ಬರುವ ಸಂದರ್ಭವನ್ನೇ ಮುತ್ತೈದೆಯರ ಪೂಜೆ ಎಂದು ಆಚರಣೆ ಮಾಡುವ ಈ ದಿನವನ್ನು ಬಟ್ಟಲು ಪೂಜೆ ಎಂದೂ ಕರೆಯಲಾಗುತ್ತದೆ ಎಂಬುದು ಭಕ್ತರ ನಂಬಿಕೆ.


ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯ ಮುತ್ತೈದೆಯರು ಬೆಳಗ್ಗೆಯಿಂದಲೇ ಉಪವಾಸವಿದ್ದು ಕಾವೇರಿ ನದಿಯಲ್ಲಿ ಸ್ಥಾನ ಮಾಡಿ ಮುತ್ತೈದದೆಯರ ಪಾದಕ್ಕೆ ಅರಿಶಿಣ, ಕುಂಕುಮ ಹಚ್ಚಿ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ನಂತರ ಉಪವಾಸವಿರುವ ಮುತ್ತೈದೆಯರಿಗೆ ಕೋಸಂಬರಿ, ಪಾನಕ ಹಾಗೂ ಫಲ ತಾಂಬೂಲ ನೀಡಿ ಹರಕೆ ತೀರಿಸಿದರು. ಮುತ್ತೈದೆಯರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ತಾಯಿಯನ್ನು ಕಣ್ತುಂಬಿಕೊಂಡರು.


ಇದಕ್ಕೂ ಮೊದಲು ದೇವಸ್ಥಾನದಲ್ಲಿ ಮಲ್ಲಿಕಾರ್ಜುನಸ್ವಾಮಿ ಹಾಗೂ ಪಾರ್ವತಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜೆ ಹೋಮ ಹವನ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಕಾರ್ಯಕ್ರಮಗಳನ್ನು ನೆರವೇರಿಸಿ ಬೆಳಗಿನ ಜಾವ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬಟ್ಟಲು ಪೂಜೆಗೆ ಮಂಡ್ಯ, ಮಳವಳ್ಳಿ, ಕನಕಪುರ, ಕೊಳ್ಳೇಗಾಲ, ಚಾಮರಾಜನಗರ, ಮೈಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net