ಅಭಿವೃದ್ಧಿಯತ್ತ ಬತ್ತೇರಿ ಪ್ರದೇಶ

PARK NEW
Published on

ಭರತ್ ಶೆಟ್ಟಿಗಾರ್ ಮಂಗಳೂರು
ಫಲ್ಗುಣಿ ನದಿ ಅಂಚಿನಲ್ಲಿರುವ ಬತ್ತೇರಿ ಪ್ರದೇಶ ಅಭಿವೃದ್ಧಿಗೆ ಬೋಳೂರು ಮೊಗವೀರ ಮಹಾಸಭಾ ಮುನ್ನುಡಿ ಬರೆದಿದೆ. ಒಂದು ಕಾಲದಲ್ಲಿ ತ್ಯಾಜ್ಯ ಬೀಳುತ್ತಿದ್ದ ಪ್ರದೇಶದಲ್ಲಿ ಇಂದು ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ.
ಸಂಸದರು, ಶಾಸಕರು ಹಾಗೂ ಮಹಾನಗರ ಪಾಲಿಕೆ ಸದಸ್ಯರ ನೆರವು ಹಾಗೂ ದಾನಿಗಳ ಸಹಕಾರದಿಂದ ಇನ್ನಷ್ಟು ಕೆಲಸಗಳನ್ನು ಮಾಡಲು ಮಹಾಸಭಾ ಉದ್ದೇಶಿಸಿದೆ. ಬತ್ತೇರಿಯಲ್ಲಿ ಬೋಳೂರು ಮೊಗವೀರ ಮಹಾಕ್ಕೆ ಸೇರಿದ 2.5 ಎಕರೆಯಷ್ಟು ಜಾಗವಿದ್ದು, ಮೊಗವೀರ ಮಹಾಜನ ಸಂಘ ಆದೇಶದಂತೆ ಕುಲಗುರು ‘ಮಾಧವ ಮಂಗಲ’ ಮೂರ್ತಿ ನಿರ್ಮಿಸುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ.
ಒಂದು ಕಾಲದಲ್ಲಿ ತ್ಯಾಜ್ಯ ಬೀಳುತ್ತಿದ್ದ ಸ್ಥಳ ಇಂದು ಸುಂದರವಾಗುತ್ತಿದೆ. ಮಾಧವ ಮಂಗಲ ಮೂರ್ತಿ ಜತೆಗೆ ಮಹಾಲಕ್ಷ್ಮಿ ದೇವರ ಮೂರ್ತಿ, ಗಾರ್ಡನ್, ಕಾರ್ಪೊರೇಟರ್ ನಿಧಿಯಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿದೆ. ಹಿಂಭಾಗದ ವಿಶಾಲ ಖಾಲಿ ಜಾಗದಲ್ಲಿ ಹಿರಿಯರಿಗೆ ಇಂಟರ್‌ಲಾಕ್ ವಾಕಿಂಗ್ ಟ್ರಾೃಕ್ ನಿರ್ಮಿಸಲು ಚಾಲನೆ ನೀಡಲಾಗಿದ್ದು, ಈಗಾಗಲೇ ಅರ್ಧ ಕಾಮಗಾರಿ ಮುಗಿದಿವೆ. ಶಾಸಕರು, ಪಾಲಿಕೆ ಸದಸ್ಯರಿಂದ ಅನುದಾನ ಒದಗಿಸುವ ಭರವಸೆ ಸಿಕ್ಕಿದೆ. ತೆಂಗಿನ ಮರದ ಕಟ್ಟೆಯನ್ನು ಜನಾಕರ್ಷಣೆಗಾಗಿ ಬೋಟ್ ರೀತಿ ನಿರ್ಮಿಸಲಾಗಿದೆ. ಸಾಯಂಕಾಲ ಕುಳಿತುಕೊಳ್ಳಲು ಅನುಕೂಲವಾಗುವಂತೆ ಕಲ್ಲು ಬೆಂಚು ಅಳವಡಿಸಲಾಗಿದೆ. ಗಿಡಗಳನ್ನು ಬೆಳೆಸುವ ಮೂಲಕ ಹಸಿರೀಕರಣಕ್ಕೂ ಆದ್ಯತೆ ನೀಡಲಾಗಿದೆ.

ಮತ್ಸೃಗಂಧಿ ಬಾಲವನ
ಕುಲಗುರು ಮೂರ್ತಿ ಪ್ರತಿಷ್ಠಾಪನೆ ವೇಳೆ ಮಕ್ಕಳ ಪಾರ್ಕ್ ನಿರ್ಮಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಮಣ್ಣಗುಡ್ಡೆಯ ಗಾಂಧಿ ಪಾರ್ಕ್ ಹೊರತುಪಡಿಸಿ, ಸಣ್ಣ ಮಕ್ಕಳಿಗೆ ಆಡುವ ಸಲಕರಣೆಗಳು ಪರಿಸರದಲ್ಲಿ ಎಲ್ಲೂ ಇಲ್ಲ. ಆದ್ದರಿಂದ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಮತ್ಸೃಗಂಧಿ ಬಾಲವನ ಪಾರ್ಕ್ ನಿರ್ಮಿಸಲಾಗಿದೆ. ಜಾರುಬಂಡಿ, ಜೋಕಾಲಿ ಸೇರಿದಂತೆ ವಿವಿಧ ಮಕ್ಕಳಾಟದ ಸಲಕರಣೆಗಳನ್ನು ಅಳವಡಿಸಲಾಗಿದೆ. ಇನ್ನೂ ಕೆಲವು ಸಾಧನ ಅಳವಡಿಸುವ ಉದ್ದೇಶ ಮಹಾಸಭಾ ಹೊಂದಿದೆ.


ಅಭಿವೃದ್ಧಿಯ ಮೂಲ
ಹಲವು ವರ್ಷಗಳ ಹಿಂದೆ ಬತ್ತೇರಿಯಲ್ಲಿ ಮೊಗವೀರರ ಸಾಕಷ್ಟು ಮನೆಗಳಿದ್ದವು. ನೆರೆಯೊಂದು ಬಂದು ಮನೆ ಮಠ ಕಳೆದುಕೊಂಡ ಮಂದಿ ಬೇರೆಡೆಗೆ ಸ್ಥಳಾಂತರಗೊಂಡರು. ಈ ನಡುವೆ ಹಡಗು ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಅಳಿವೆ ಪ್ರದೇಶದಲ್ಲಿ ನಡೆಸಿದ ಡ್ರೆಜ್ಜಿಂಗ್‌ನಲ್ಲಿ ಸಿಕ್ಕ ಮರಳನ್ನು ಬತ್ತೇರಿ ಪ್ರದೇಶದಲ್ಲಿ ತುಂಬಿಸಿ ಎತ್ತರ ಮಾಡಲಾಯಿತು. ಬಳಿಕ ಮರಳು ಮತ್ತೆ ನದಿ ಸೇರದಂತೆ ತಡೆಗೋಡೆ ನಿರ್ಮಿಸಲಾಯಿತು. ಅಲ್ಲಿಂದ ಮುಂದಕ್ಕೆ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಕ್ಕಿತು. ಮೊದಲಿಗೆ ಬೆಂಗ್ರೆ-ಬತ್ತೇರಿ ಬೋಟ್ ಸಂಚಾರಕ್ಕೆ ಜೆಟ್ಟಿ ನಿರ್ಮಾಣವಾಯಿತು. ಶಾಸಕರ ನಿಧಿಯಿಂದ ಟಿಕೆಟ್ ಕೌಂಟರ್ ನಿರ್ಮಿಸಿ ತಣ್ಣೀರುಬಾವಿ ಕಡೆಗೆ ತೆರಳುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಯಿತು ಎನ್ನುತ್ತಾರೆ ಬೋಳೂರು ಮೊಗವೀರ ಮಹಾಸಭಾ ಗುರಿಕಾರ ದೇವಾನಂದ ಗುರಿಕಾರ.

ಬೋಳೂರು ಮೊಗವೀರ ಮಹಾಸಭಾಕ್ಕೆ ಸಂಬಂಧಿಸಿದ 2.5 ಎಕರೆ ಜಾಗ ಬತ್ತೇರಿ ಬಳಿಯಿದೆ. ಈ ಪ್ರದೇಶವನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲು ಮಹಾಸಭಾ ಉದ್ದೇಶಿಸಿದ್ದು, ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ಸಂಸದರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ.ದೇವಾನಂದ ಗುರಿಕಾರ, ಬೋಳೂರು ಮೊಗವೀರ ಮಹಾಸಭಾ ಗುರಿಕಾರಬತ್ತೇರಿ ಪ್ರದೇಶದ ಅಭಿವೃದ್ಧಿಗೆ ಬೋಳೂರು ಮೊಗವೀರ ಮಹಾಸಭಾ ವಿಶೇಷ ಆಸಕ್ತಿ ವಹಿಸಿದೆ. ಶಾಸಕನ ನೆಲೆಯಲ್ಲಿ ಹಾಗೂ ಪಾಲಿಕೆಯಿಂದ ದೊರೆಯುವ ಎಲ್ಲ ರೀತಿಯ ಅನುದಾನಗಳನ್ನು ಒದಗಿಸಿ, ಸಹಕಾರ ನೀಡಲಾಗುವುದು.ವೇದವ್ಯಾಸ ಕಾಮತ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net