ಬಾವಲಿಗಳ ರಕ್ಷಣೆಗೆ ನಿಂತ ಗ್ರಾಮಸ್ಥರು

16 budikote 1
Published on

ವಿಜಯವಾಣಿ ಸುದ್ದಿಜಾಲ ಬೂದಿಕೋಟೆ ದೇಶದ ಹಲವೆಡೆ ಬಾವಲಿಗಳ ಸಂತತಿ ಕ್ಷೀಣಿಸುತ್ತಿದ್ದು, ಅವುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಬೂದಿಕೋಟೆ ಹೋಬಳಿ ಎಳೇಸಂದ್ರ ಪಂಚಾಯಿತಿಯ ಗುಟ್ಟೂರು ಗ್ರಾಮಸ್ಥರು ನಿರತರಾಗಿದ್ದಾರೆ. ಗ್ರಾಮದ ಹೊರವಲಯದ ದೊಡ್ಡದೊಂದು ಆಲದ ಮರದ ಕೊಂಬೆಗಳಲ್ಲಿ ಸಾವಿರಾರು ಬಾವಲಿಗಳಿವೆ. ಮಾಂಸ ಹಾಗೂ ಹಣದ ಆಸೆಗಾಗಿ ಇವುಗಳನ್ನು ಬೇಟೆಯಾಡಲು ಬೇಟೆಗಾರರು ಹಲವು ಬಾರಿ ಗ್ರಾಮಕ್ಕೆ ಬಂದರೂ ಗ್ರಾಮಸ್ಥರು ತಡೆದು ಕಾಪಾಡಿದ್ದಾರೆ. ರೈತ ಮಿತ್ರ: ಬೆಳೆಗಳಿಗೆ ಹೆಚ್ಚಾಗಿ ಕೀಟಗಳು ರಾತ್ರಿಯ ವೇಳೆ ದಾಳಿ ಮಾಡುತ್ತವೆ. ಹೀಗೆ ದಾಳಿ ಮಾಡುವ ಕೀಟಗಳನ್ನು ಆಹಾರವಾಗಿ ಬಾವಲಿಗಳು ಸೇವಿಸುವುದರಿಂದ ರೈತರಿಗೆ ಕೀಟನಾಶಕ ಸಿಂಪಡಣೆ ವೆಚ್ಚ ತಗುಲುವುದಿಲ್ಲ. ಬಾವಲಿಗಳು ವಾಸ ಮಾಡುವ ಪ್ರದೇಶದಲ್ಲಿ ಬೆಳೆಗಳು ಕೀಟಗಳ ಬಾಧೆ ಇಲ್ಲದಂತಾಗಿದೆ. ಬೆಳೆಗಳಲ್ಲಿ ಪರಾಗಸ್ಪರ್ಶ ಪ್ರಕ್ರಿಯೆಗೆ ಸಹ ಬಾವಲಿಗಳೇ ಪ್ರಮುಖ ಪಾತ್ರ ವಹಿಸುವ ಕಾರಣ ರೈತರ ಪಾಲಿಗೆ ರೈತ ಮಿತ್ರಗಳಾಗಿವೆ. ರಾತ್ರಿ ಅಷ್ಟೇ ಸಂಚಾರ: ಹಗಲಿನ ವೇಳೆ ಬಾವಲಿಗಳಿಗೆ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ, ಶಬ್ದದ ಮೂಲಕವೇ ಗ್ರಹಿಸುತ್ತವೆ. ಅವುಗಳ ದೇಹದ ಉಷ್ಣಾಂಶ ಸರಿದೂಗಿಸಿಕೊಳ್ಳಲು ರಾತ್ರಿ ಸಮಯವನ್ನು ಆಹಾರ ಮತ್ತು ಪ್ರಯಾಣಕ್ಕಾಗಿ ಆಯ್ದುಕೊಳ್ಳುತ್ತವೆ. ಬೆಳಗಾಗುವುದರೊಳಗೆ ಬಂದು ಯಥಾಸ್ಥಿತಿಯಲ್ಲಿ ಮರದಲ್ಲಿ ನೇತಾಡುತ್ತವೆ.

ನಾನು ಚಿಕ್ಕವನಾಗಿದ್ದಾಗಿನಿಂದ ಬಾವಲಿಗಳು ಇಲ್ಲೇ ಇವೆ. ನಮ್ಮ ಗ್ರಾಮಕ್ಕೂ ಬಾವಲಿಗಳಿಗೂ ಅವಿನಭಾವ ಸಂಬಂಧವಿದೆ. ಇಲ್ಲಿನ ಯಾರೂ ಅವುಗಳಿಗೆ ತೊಂದರೆ ಕೊಡುವುದಿಲ್ಲ ಹಾಗೂ ಬೇಟೆಗಾರರಿಗೂ ಬೇಟೆ ಆಡಲು ಅವಕಾಶ ನೀಡುವುದಿಲ್ಲ. ದಾಸಪ್ಪ, ಗುಟ್ಟೂರು ಗ್ರಾಮಸ್ಥ ಬಾವಲಿಗಳ ಸಂತತಿ ಕ್ಷೀಣಿಸಿದ್ದು, ಅಳಿವಿನ ಅಂಚಿಗೆ ಹೋಗಿರುವ ಕಾರಣ ನಿಗದಿತ ಸ್ಥಳಗಳಲ್ಲಿ ಮಾತ್ರ ಇವೆ. ಮುಳಬಾಗಿನಲ್ಲಿ ಎಲೆಮೂತಿ ಬಾವಲಿಗಳಿದ್ದು, ಅದನ್ನು ಸಂರಕ್ಷಿತ ವಲಯ ಎಂದು ಗುರುತಿಸಲಾಗಿದೆ. ಬಾವಲಿಗಳಿಂದ ರೈತರಿಗೆ ಬಹಳ ಅನುಕೂಲವಿದ್ದು, ತೋಟಗಳಲ್ಲಿನ ಕೀಟ ತಿಂದು ಉಪಕಾರಿಯಾಗಿವೆ. ಸಂತೋಷ್‌ಕುಮಾರ್, ಆರ್‌ಎಫ್‌ಒ ಅರಣ್ಯ ಇಲಾಖೆ ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net