

ಮಂಡ್ಯ: ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿನ ಬ್ಯಾಸ್ಕೆಟ್‌ಬಾಲ್ ಅಂಕಣಕ್ಕೆ ಶಾಶ್ವತವಾಗಿ ಫ್ಲಡ್‌ಲೈಟ್ ಅಳವಡಿಕೆ ಸೇರಿದಂತೆ ಅಭಿವೃದ್ಧಿಗಾಗಿ 1 ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು.
ಸರ್‌ಎಂ.ವಿ.ಕ್ರೀಡಾಂಗಣದಲ್ಲಿ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಹಿರಿಯ ಬ್ಯಾಸ್ಕೆಟ್‌ಬಾಲ್ ಆಟಗಾರರ ಸ್ಮರಣಾರ್ಥ ಆಯೋಜಿಸಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಿರುವ ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನನ್ನ ಶಾಸಕತ್ವದ ಅವಧಿಯಲ್ಲಿಯೇ ಪ್ರಯತ್ನಿಸುತ್ತೇನೆ. ಕ್ರೀಡಾಂಗಣದ ಅಭಿವೃದ್ಧಿಗಾಗಿ ಈಗಾಗಲೇ 2 ಕೋಟಿ ರೂ ಅನುದಾನ ಕೇಳಿದ್ದಾರೆ. ಅದರಂತೆ 1 ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಿ, ಕೆಲಸ ಆರಂಭವಾದ ನಂತರ ಮತ್ತೊಂದು 1 ಕೋಟಿ ರೂ ಬಿಡುಗಡೆ ಮಾಡಿಸುತ್ತೇನೆ ಎಂದು ತಿಳಿಸಿದರು.
ಸರ್‌ಎಂ.ವಿ.ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಆಟ ನಡೆಸುವ ಉದ್ದೇಶದಿಂದ 3 ಕೋಟಿ ರೂ ವೆಚ್ಚದಲ್ಲಿ ಫ್ಲಡ್‌ಲೈಟ್ ಹಾಕಿಸಬೇಕಿದೆ ಎನ್ನುವುದನ್ನು ಕ್ರೀಡಾಭಿಮಾನಿಗಳು ಮತ್ತು ಅಧಿಕಾರಿಗಳು ಮಾಹಿತಿ ನೀಡಿದ್ದು, ಅದರಂತೆ ಕೆಲಸ ಆರಂಭವಾಗಿದೆ. ಇಲ್ಲಿಯೂ ಸಹ ಅನುದಾನ ಕೊರತೆ ಆಗದಂತೆ ಹಾಗೂ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡದ ಹಾಗೆ ಕೆಲಸ ಮಾಡಿಸಿ ಕೊಡುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಕ್ರೀಡಾಪಟುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್‌ಎಂ.ವಿ.ಕ್ರೀಡಾಂಗಣದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುತ್ತಿರುವ ಶಾಸಕ ರವಿಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಂಡು ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರುವಂತೆ ಸಾಧನೆ ಮಾಡಿ ಎಂದು ಸಲಹೆ ನೀಡಿದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮಾಜಿ ಸದಸ್ಯ ಮಹೇಶ್, ಅಸೋಸಿಯೇಷನ್ ಅಧ್ಯಕ್ಷ ಡಾ.ಎಂ.ಎಸ್.ಸತ್ಯಾನಂದ, ಅಂತಾರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಮಾಜಿ ಆಟಗಾರ್ತಿ ಪುಷ್ಪಾ ಪುಟ್ಟಣ್ಣ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್, ಅಭಿಲಾಷ್, ಕ್ರೀಡಾಪಟುಗಳಾದ ಶ್ರೀನಿವಾಸ್, ವಿಜಯ್‌ಕುಮಾರ್, ಸತ್ಯ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣಗೌಡ ಭಾಗವಹಿಸಿದ್ದರು. ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಗೆ ರಾಜ್ಯದ ವಿವಿಧೆಡೆಯಿಂದ ತಲಾ ಹತ್ತು ತಂಡ ಪಾಲ್ಗೊಂಡಿವೆ.