ಬಾಸ್ಕೆಟ್ ಬಾಲ್ ಆಯೋಜನೆ ಉತ್ತಮ ಬೆಳವಣಿಗೆ

ಡಿ.ಕೋಚ್ ತಂಡ
ಡಿ.ಕೋಚ್ ತಂಡ
Published on

ವಿರಾಜಪೇಟೆ: ಜಿಲ್ಲೆಯ ಜನತೆ ಎಲ್ಲ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಬಾಸ್ಕೆಟ್ ಬಾಲ್ ಕ್ರೀಡೆಗೆ ಪ್ರೋತ್ಸಾಹ ಕಡಿಮೆಯಿದೆಯಾದರೂ ಇತ್ತೀಚಿನ ದಿನಗಳಲ್ಲಿ ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಡಿ.ಕೋಚ್ ಸಂಸ್ಥೆ ಸಂಸ್ಥಾಪಕ ಡಾ.ನಿತಿನ್ ಕುಂಡಚ್ಚೀರ ಅಭಿಪ್ರಾಯಪಟ್ಟರು.

ಎವೆಂಜರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ಸಹಯೋಗದಲ್ಲಿ ನಗರದ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಕೊಡಗು ಬಾಸ್ಕೆಟ್ ಬಾಲ್ ಲೀಗ್‌ನ 2ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಬಾಸ್ಕೆಟ್ ಬಾಲ್ ಕ್ರೀಡೆ ಕಲಾತ್ಮಕ ಶೈಲಿಯ ಆಟವಾಗಿದೆ. ಹಾಗಾಗಿ ಹೆಚ್ಚು ಯುವ ಕ್ರೀಡಾ ಪಟುಗಳು ಈ ಕ್ರೀಡೆಯ ಬಗ್ಗೆ ಆಸಕ್ತಿ ತೋರುವಂತಾಗಬೇಕು. ಜತೆಗೆ ಆಸಕ್ತಿಯೊಂದಿಗೆ ಭಾಗವಹಸಿವಂತೆ ಪ್ರೇರೇಪಿಸುವಂತಾಗಬೇಕು. ಇದರಿಂದ ಕ್ರೀಡೆಯ ಬಗ್ಗೆ ಒಲವು ಮೂಡುತ್ತದೆ. ಜಿಲ್ಲೆಯಲ್ಲಿರುವ ಬೆರಳೆಣಿಕೆಯಷ್ಟು ಬಾಸ್ಕೆಟ್ ಬಾಲ್ ಕ್ರೀಡಾಪಟುಗಳು ರಾಜ್ಯ ಮತ್ತು ಅಂತಾರಾಜ್ಯ ಮಟ್ಟದಲ್ಲಿ ತಮ್ಮ ಕ್ರೀಡಾ ಕೌಶಲವನ್ನು ಪ್ರದರ್ಶಿಸುತ್ತಿದ್ದಾರೆ. ಸ್ಥಳೀಯವಾಗಿ ಪಂದ್ಯಾವಳಿಗಳನ್ನು ಆಯೋಜಿಸಿದಲ್ಲಿ ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿರುವ ಜಿಲ್ಲೆಯ ಕ್ರೀಡಾಪಟುಗಳ ಪ್ರದರ್ಶನವನ್ನು ಇಲ್ಲಿ ಕಾಣಬಹುದು ಎಂದು ಹೇಳಿದರು.

ಜಿಲ್ಲೆಯ ಹಿರಿಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಚೆಂದ್ರೀಮಾಡ ಗಣಪತಿ ಮಾತನಾಡಿ, ಜಿಲ್ಲೆಯಲ್ಲಿ ಬೆರಳಣಿಕೆಯಷ್ಟು ಬಾಸ್ಕೆಟ್ ಬಾಲ್ ಕ್ರೀಡಾಂಗಣಗಳಿದ್ದವು. ಅದರೇ ಈಗ 17 ಕ್ರೀಡಾಂಗಣಗಳಾಗಿವೆ. ಇದು ಉತ್ತಮ ಬೆಳೆವಣಿಗೆ. ಯುವ ಸಮೂದಾಯಕ್ಕೆ ಕ್ರೀಡೆಯ ಮೇಲಿರುವ ಉತ್ಸಾಹವೇ ಇದಕ್ಕೆ ಕಾರಣ ಎನ್ನಬಹುದು. ಈ ನಿಟ್ಟಿನಲ್ಲಿ ಎವೆಂಜರ್ಸ್ ಕ್ಲಬ್ ಪಂದ್ಯಾಟಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ವೇದಿಕೆಯಲ್ಲಿ ಹಿರಿಯ ಆಟಗಾರರಾದ ಲೋಹಿತ್ ಮಡಿಕೇರಿ ಮತ್ತು ಸೋನಂ ಕುಶಾಲನಗರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಕ್ರೀಡಾಪಟು ಸಿ.ಎಸ್.ಸೋಮಯ್ಯ ಮಾತನಾಡಿದರು. ಸಮಾಜ ಸೇವಕ ರವೂಫ್, ತಯ್ಯಬ್, ಝಬಿ, ಮಾದಂಡ ತಿಮ್ಮಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net