

ಮಡಿಕೇರಿ:
ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದರೂ ಕುಟುಂಬ ಸದಸ್ಯರೊಂದಿಗೆ ಇತರರ ಪ್ರೋತ್ಸಾಹ ಕೂಡ ಅತ್ಯಗತ್ಯ ಎಂದು ಕೊಡಗಿನ ಹೆಸರಾಂತ ಬಾಸ್ಕೆಟ್ ಬಾಲ್ ಆಟಗಾರ್ತಿ ಡಾ. ಮಂಡೆಪAಡ ಪುಪ್ಪಾ ಕುಟ್ಟಣ್ಣ ಹೇಳಿದರು. ನಗರದ ಕೊಡಗು ವಿದ್ಯಾಲಯದಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ತನ್ನದೇ ಹೆಸರಿನ ಡಾ. ಪುಪ್ಪಾ ಕುಟ್ಟಣ್ಣ ಬಾಸ್ಕೆಟ್ ಬಾಲ್ ಕೋರ್ಟ್ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಕ್ರೀಡಾಕ್ಷೇತ್ರದಲ್ಲಿಯೂ ವಿನೂತನ ಪ್ರಯತ್ನಗಳು ಆದಾಗ ಮತ್ತಷ್ಟು ಕ್ರೀಡಾಪಟುಗಳು ಬೆಳಕಿಗೆ ಬರಲು ಸಾಧ್ಯ. ಅನೇಕ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಬಾಸ್ಕೆಟ್ ಬಾಲ್ ಕೋರ್ಟ್ಗಿಂತ ಕೊಡಗು ವಿದ್ಯಾಲಯದಲ್ಲಿ ನಿರ್ಮಾಣವಾದ ಕ್ರೀಡಾಂಗಣ ವಿನೂತನವಾಗಿದೆ. ಕೊಡಗಿನಲ್ಲಿ ಇಂಥ ಹೊಸತನದ ಪ್ರಯತ್ನಕ್ಕೆ ಕೊಡಗು ವಿದ್ಯಾಲಯ ಮುಂದಾಗಿರುವುದು ಶ್ಲಾಘನೀಯ. ತನ್ನ ಹೆಸರಿನಲ್ಲಿಯೇ ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣವಾಗಿರುವುದು ತನ್ನ ಕ್ರೀಡಾಜೀವನದಲ್ಲಿಯೇ ಸ್ಮರಣೀಯವಾಗಿದೆ.
ಪ್ರತಿ ಕ್ರೀಡಾಸಾಧಕರಿಗೆ ಮುಖ್ಯವಾಗಿ ಛಲ, ಗುರಿ ಬೇಕು. ಕ್ರೀಡಾಕ್ಷೇತ್ರದಲ್ಲಿಯೂ ಸಾಕಷ್ಟು ವಿಚಾರಗಳನ್ನು ಹೊಸದಾಗಿ ಕಲಿಯುವ ಅವಕಾಶಗಳಿರುತ್ತವೆ. ಕ್ರೀಡಾಕ್ಷೇತ್ರದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ, ತಮ್ಮ ಪ್ರತಿಭೆಯನ್ನೂ ಬೆಳಕಿಗೆ ತರಲು ಸಾಧ್ಯ. ಪೋಷಕರು ತಮ್ಮ ಮಕ್ಕಳಲ್ಲಿ ಶಿಕ್ಷಣದ ಜತೆ ಜತೆಗೇ ಕ್ರೀಡಾಪ್ರತಿಭೆಗೂ ಪ್ರೋತ್ಸಾಹ ನೀಡಬೇಕು. ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ತಾವೊಬ್ಬರೇ ತಂಡವನ್ನು ಮುನ್ನಡೆಸುವುದಕ್ಕಿಂತ ತಂಡದ ಎಲ್ಲರ ಪ್ರಯತ್ನದೊಂದಿಗೆ ತಂಡಸ್ಫೂರ್ತಿಗೆ ಆದ್ಯತೆ ನೀಡಿದರೆ ಗೆಲವು ಸುಲಭಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ ಪ್ರೊ. ಜುಗನ್ ಸುಖನ್ವೇಷರ್ ಧ್ಯಾನೇಶ್ವರನ್ ಮಾತನಾಡಿ ಕೊಡಗಿನ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಬಾಸ್ಕೆಟ್ ಬಾಲ್ ತರಬೇತಿ ನೀಡುವ ನಿಟ್ಟಿನಲ್ಲಿ ಸಹಕಾರ ನೀಡಲಾಗುವುದು. ಭಾರತೀಯ ಬಾಸ್ಕೆಟ್ ಬಾಲ್ ಫೆಡರೇಷನ್ ಮತ್ತು ಮಣಿಪಾಲ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೊಡಗು ವಿದ್ಯಾಲಯದ ಸುಸಜ್ಜಿತ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಪಂದ್ಯಾಟ ಆಯೋಜಿಸಲೂ ಚಿಂತನೆ ಇದೆ. ಪ್ರತಿಯೋರ್ವ ವಿದ್ಯಾರ್ಥಿಯೂ ತನ್ನ ಪ್ರತಿಭೆಯ ಮೇಲೆ ನಂಬಿಕೆ ಇರಿಸಿಕೊಂಡು ಕ್ರೀಡಾಸಾಧನೆಗೆ ಮುಂದಾಗಬೇಕು ಎಂದರು.
ಕೊಡಗು ವಿದ್ಯಾಲಯ ಆಡಳಿತ ಮಂಡಳಿ ನಿರ್ದೇಶಕ ಸಿ.ಎಸ್. ಗುರುದತ್ ಮಾತನಾಡಿದರು.
ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಕೊಡಗು ವಿದ್ಯಾಲಯದ ಉಪಾಧ್ಯಕ್ಷೆ ಊರ್ವಶಿ ಮುದ್ದಯ್ಯ, ಕ್ರೀಡಾಸಮಿತಿ ಅಧ್ಯಕ್ಷ ರಘುಮಾದಪ್ಪ, ಸಲಹೆಗಾರರಾದ ಪಿ.ಇ. ಕಾಳಯ್ಯ, ಕೆ.ಯು. ಸುಬ್ಬಯ್ಯ, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ. ರವಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಇದೇ ಸಂದಭ9ð ನೂತನ ಬಾಸ್ಕೆಟ್ ಬಾಲ್ ಕೋರ್ಟ್ನಲ್ಲಿ ಕರ್ನಾಟಕ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ತಂಡಕ್ಕೆ ಸೇರಿದ ಸ್ಫೂರ್ತಿ ಮಹಿಳಾ ತಂಡ ಮತ್ತು ಪ್ರೇರಣ ಮಹಿಳಾ ತಂಡಗಳ ನಡುವೇ ಆಕರ್ಷಕ ಬಾಸ್ಕೆಟ್ ಬಾಲ್ ಪಂದ್ಯಾಟ ನಡೆಯಿತು.