

ವಿಜಯವಾಣಿ ಸುದ್ದಿಜಾಲ ಉಡುಪಿ
ಇಂದಿನ ದಿನದಲ್ಲಿ ಸರ್ಕಾರಿ ಉದ್ಯೋಗ ದೊರಕುವುದೇ ಅಪರೂಪ. ಅದರಲ್ಲೂ ರಾಷ್ಟ್ರದ ಭವಿಷ್ಯ ರೂಪಿಸುವ ಶಿಕ್ಷಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಆಯ್ಕೆಗೊಂಡಿರುವ ನಿಮ್ಮಿಂದ ಸಮಾಜದಿಂದಲೂ ಅಪಾರ ನಿರೀಕ್ಷೆಗಳಿವೆ. ಆ ನಿಟ್ಟಿನಲ್ಲಿ ಜಿಪಿಟಿ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಫೆ.13ರಂದು ಆಯೋಜಿಸಿದ್ದ ಉಡುಪಿ ಜಿಲ್ಲೆಯಲ್ಲಿ ನೇಮಕಗೊಂಡ 200 ಮಂದಿ ಜಿಪಿಟಿ ಶಿಕ್ಷಕರಿಗೆ ಬುನಾದಿ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯ ಕನ್ನಡ ಒಲಂಪಿಯಾಡ್ನಲ್ಲಿ ಜಿಲ್ಲಾ ಮಟ್ಟದ ವಿಜೇತರಿಗೆ ಜಿಪಂ ಸಿಇಒ ಪ್ರತೀಕ್ ಬಾಯಲ್ ಬಹುಮಾನ ವಿತರಿಸಿ, ಸಂದರ್ಭೋಚಿತವಾಗಿ ಮಾತನಾಡಿದರು. ಮಣಿಪಾಲದ ರೋಟರಿ ಸಂಸ್ಥೆಯ ಉಪಾಧ್ಯಕ್ಷೆ ಶಶಿಕಲಾ ರಾಜವಮಾರ್ ಅರಿಗ, ಡಿಡಿಪಿಐ ಗಣಪತಿ ಕೆ., ನೋಡಲ್ ಅಧಿಕಾರಿ ಗಣೇಶ್ ಭಾಗ್ವತ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಶಿಶುತಜ್ಞೆ ಡಾ. ಪ್ರೀತಿ ಗಲಗಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಕುರಿತು, ವಿವೇಕಾನಂದ ಅನುಸಂಧಾನ ಕೇಂದ್ರದ ನಿರ್ದೇಶಕ ಡಾ. ಎಚ್. ಎನ್. ಮುರಳೀಧರ್ ಶಿಕ್ಷಣ ಮತ್ತು ಮೌಲ್ಯ ಕುರಿತು, ಮಣಿಪಾಲ ರೋಟರಿ ಹಿಲ್ಸ್ನ ಅಧ್ಯಕ್ಷೆ ಸುಪರ್ಣಾ ಜೀವನ ಕೌಶಲ-ಅಭಿವೃದ್ಧಿ ತಂತ್ರ ಕುರಿತು, ಸಿಟಿಇ ಮಂಗಳೂರಿನ ವಿಶ್ರಾಂತ ಉಪನ್ಯಾಸಕ ಡಾ. ಎನ್.ಶಿವಪ್ರಕಾಶ್ ಜಿಪಿಟಿ ಶಿಕ್ಷಕರ ಕರ್ತವ್ಯ ಕುರಿತು ಉಪನ್ಯಾಸ ನೀಡಿದರು.
ಡಯಟ್ ಪ್ರಾಂಶುಪಾಲ ಮಂಜುನಾಥ ಎಚ್.ಟಿ. ಅಧ್ಯಕ್ಷತೆ ವಹಿಸಿದ್ದರು. ಡಯಟ್ ಉಪಪ್ರಾಂಶುಪಾಲ ಡಾ. ಅಶೋಕ ಕಾಮತ್ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಪ್ರಭಾಕರ್ ಮಿತ್ಯಾಂತ ವಂದಿಸಿದರು. ಉಪನ್ಯಾಸಕ ಯೋಗಾ ನರಸಿಂಹ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.