

ಹುಬ್ಬಳ್ಳಿ: ಮಕ್ಕಳು ವೀಕ್ಷಿಸಿದ್ದನ್ನು ದಾಖಲಿಸುವ, ವಿಶ್ಲೇಷಿಸುವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಅಂತಹ ಗುಣದಿಂದಲೇ ವಿಜ್ಞಾನಿಗಳಾಗಲು ಸಾಧ್ಯ. ಸರ್ವಜ್ಞಾನಕ್ಕೂ ಮೂಲವಾದದು ವಿಜ್ಞಾನ. ವಿಜ್ಞಾನದ ಬಗ್ಗೆ ಸರಿಯಾದ ತಿಳಿವಳಿಕೆ ಇದ್ದವನು ಮೋಸ ಹೋಗಲಾರ. ವಿಜ್ಞಾನದ ಬಗ್ಗೆ ಏನೂ ಅರಿವಿಲ್ಲದಿರುವುದು ಇಂದಿನ ದೊಡ್ಡ ಅಪರಾಧ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅಭಿಪ್ರಾಯಪಟ್ಟರು.
ಇಸ್ರೋ ಪ್ರಾಯೋಜಿತ ಹಿಮಾಲಯನ್ ಸ್ಪೇಸ್ ಸೆಂಟರ್, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಶಿಕ್ಷಣ ಇಲಾಖೆ, ಸ್ಪೇಸ್ ಎ ಸ್ಕಾಲರ್, ಎವಾಲ್ವ್ ಲೈವ್ ಫೌಂಡೇಷನ್, ಧಾರವಾಡ ಜಿಲ್ಲಾ ಕ್ಲಿಕ್ಸ್ ಸಹಯೋಗದಲ್ಲಿ ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಹ್ಯಾಕಾಶ ಖಗೋಳ ಪ್ರಯೋಗಾಲಯವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ನಾವು ಓದುವ ಕಾಲದಲ್ಲಿ ಈ ರೀತಿಯ ಅವಕಾಶಗಳು ಇರಲಿಲ್ಲ. ಮಕ್ಕಳು ವಿಜ್ಞಾನದ ಪ್ರಾಯೋಗಿಕ ಜ್ಞಾನವನ್ನು ಅರಿತುಕೊಂಡು ಮುನ್ನಡೆಯಬೇಕು. ಮಕ್ಕಳಲ್ಲಿ ನಾನು ಅಬ್ದುಲ್ ಕಲಾಂ, ಕಲ್ಪನಾ ಚಾವ್ಲಾ ಅವರನ್ನು ಕಾಣುತ್ತಿದ್ದೇನೆ. ಭವ್ಯಭಾರತದ ಉನ್ನತಿಯಲ್ಲಿ ನಾವೆಲ್ಲರೂ ಪಾಲುದಾರರಾಗೋಣ ಎಂದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ, ವಿಜ್ಞಾನ ಒಂದು ಬರೀ ವಿಷಯವಲ್ಲ. ಶಾಲೆಯಲ್ಲಿ ಕಲಿತ ವಿಜ್ಞಾನ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಾಹ್ಯಾಕಾಶ ಪ್ರಯೋಗಾಲಯವು ನಮಗೆ ಸಮೀಪದಿಂದ ಆಕಾಶದ ದರ್ಶನ ಮಾಡಿಸಬಲ್ಲದು. ಮಕ್ಕಳಿಗೆ ಕಿರಿಯ ವಯಸ್ಸಿನಿಂದಲೇ ನಿಗೂಢ ಆಕಾಶದ ಬಗ್ಗೆ ಜ್ಞಾನ ಮೂಡಿಸಬೇಕು ಎಂದರು.
ಜಿಲ್ಲಾ ಯೋಜನಾಧಿಕಾರಿ ಎಸ್.ಎಂ. ಹುಡೇದಮನಿ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ, ಎವಾಲ್ವ್ ಲೈವ್ ಫೌಂಡೇಷನ್ ಮುಖ್ಯಸ್ಥೆ ಓಟಿಲಿ ಅನ್ಬನ್ಕುಮಾರ, ಡಿಡಿ ಕ್ಲಿಕ್ಸ್ನ ಜೆರಾಲ್ಡ್ ಮಾನಿಕ್, ಸ್ಪೇಸ್ ಎ ಸ್ಕಾಲರ್ನ ಶ್ರೀದೇವಿ ರೂಗಿ ಮಾತನಾಡಿದರು.
ಶಾಲಾ ಮಕ್ಕಳು, ರಾಕೆಟ್ ಮಾದರಿ, ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆ, ರಂಗೋಲಿಯಲ್ಲಿ ಬಾಹ್ಯಾಕಾಶ ಕಲೆ ಪ್ರದರ್ಶಿಸಿದರು. ದಾನಿಗಳನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷ ಬಿ.ಕೆ. ಪಾಟೀಲ, ಮುಖ್ಯಾಧ್ಯಾಪಕ ಸುಮನ್ ತೇಲಂಗ, ಪ್ರಮುಖರಾದ ವೈ.ಎಸ್. ರೇವಡಿಹಾಳ, ಮಂಜುನಾಥ ಹುಬ್ಬಳ್ಳಿ, ಪ್ರಭು ತಿರ್ಲಾಪುರ, ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ದಂಡಗಲ್ಲ, ಇಸಿಒ ಆರ್.ಬಿ. ಪಾಟೀಲ, ಶಿಕ್ಷಕ ಸಂಘದ ಉಪಾಧ್ಯಕ್ಷ ವೈ.ಎಚ್. ಬಣವಿ, ಚಂದ್ರಶೇಖರ ಶೀಪರಮಟ್ಟಿ, ಡಾ. ಲಿಂಗರಾಜ ರಾಮಾಪುರ, ಮಂಗಳಾ ಕಮ್ಮಾರ ಇತರರು ಇದ್ದರು.