ಕವಾಡಿಗರಹಟ್ಟಿಗೆ ಮೂಲ ಸೌಲಭ್ಯ

CTD 06 CM - Manavi
Published on

ಚಿತ್ರದುರ್ಗ: ಕವಾಡಿಗರಹಟ್ಟಿಗೆ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಿದೆ. ಈ ಕುರಿತು ಹಟ್ಟಿಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕಲುಷಿತ ನೀರು ಸೇವಿಸಿ ಮೃತಪಟ್ಟವರ ಗೌರವಾರ್ಥ ಕವಾಡಿಗರಹಟ್ಟಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಹಟ್ಟಿ ಸಮೀಪದಲ್ಲೇ ಈ ಭಾಗದ ಅರ್ಹರಿಗೆ 3 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿದ್ದು, ಆಶ್ರಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಿದೆ ಎಂದರು.

ಕವಾಡಿಗರಹಟ್ಟಿ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ, 6 ಮಂದಿ ಮೃತರ ಕುಟುಂಬದ ತಲಾ ಸದಸ್ಯರೊಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿದ್ದೇವೆ. ರಸ್ತೆ, ಚರಂಡಿ, ಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿ ಮೂಲಸೌಕರ್ಯ ಕಲ್ಪಿಸಲಾಗುವುದು. ಮೃತರ ಕುಟುಂಬದ ಸದಸ್ಯರ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಆಶ್ವಾಸನೆ ನೀಡಿದರು.

ಗೃಹಲಕ್ಷ್ಮೀ ಯೋಜನೆಯಡಿ 1.28 ಕೋಟಿ ಜನ ಹೆಸರು ನೋಂದಾಯಿಸಿದ್ದು, 1.10 ಕೋಟಿ ಜನರಿಗೆ 2 ಸಾವಿರ ರೂ. ಜಮಾ ಆಗಿದೆ. ತಾಂತ್ರಿಕ ತೊಂದರೆಯಿಂದ ಇನ್ನುಳಿದವರಿಗೆ ತಲುಪಿಲ್ಲ. ಗೃಹಜ್ಯೋತಿ 1 ಕೋಟಿಗಿಂತ ಹೆಚ್ಚು ಮಂದಿ ಲಾಭ ಪಡೆಯುತ್ತಿದ್ದಾರೆ. ಅನ್ನಭಾಗ್ಯದಡಿ ಅಕ್ಕಿ ಬದಲು ಹಣ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ನಿತ್ಯ 50ರಿಂದ 60 ಲಕ್ಷ ಮಹಿಳೆಯರು ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ. ಇವುಗಳನ್ನು ಅರ್ಹರೆಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂತ್ರಸ್ಥ ಕುಟುಂಬಗಳ ಸದಸ್ಯರಾದ ವಿಜಯಮ್ಮ, ವಸಂತ, ರಾಜಪ್ಪ, ಸಾಕವ್ವ, ಜಿ.ಬಿ.ರಾಜಶೇಖರ ಅವರನ್ನು ಮಾತನಾಡಿಸಿ ಸಮಸ್ಯೆ ಆಲಿಸಿದರು. ಹರಳಯ್ಯ ಮಠದ ಶ್ರೀ, ಮುಖಂಡರಾದ ಬಿ.ಸೋಮಶೇಖರ್, ಎಂ.ಕೆ.ತಾಜ್‌ಪೀರ್ ಇತರರಿದ್ದರು.

ಜನರ ದುಡ್ಡು ಜನರಿಗೆ ತಲುಪುತ್ತಿದೆ: ಜನರು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ನೀಡಿದ ಹಣವನ್ನು ಜನಪರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಯಾವುದೇ ಸರ್ಕಾರ ಹೊರತಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಶಾಸಕರಿಂದ ಮನವಿ: ಹಟ್ಟಿಯಲ್ಲಿ ಎಸ್ಸಿ ಸಮುದಾಯ ಒಳಗೊಂಡು ಆರ್ಥಿಕವಾಗಿ ಅತ್ಯಂತ ಹಿಂದುಳಿದವರೇ ವಾಸಿಸುತ್ತಿದ್ದಾರೆ. ಹೀಗಾಗಿ ನಿವೇಶನ, ವಸತಿ ಸೌಕರ್ಯ, ಜಮೀನು, ಉದ್ಯೋಗ, ಮೂಲಸೌಕರ್ಯ, ರಸ್ತೆ ವಿಸ್ತರಣೆಯಿಂದ 60 ಮನೆಗಳು ತೆರವಾಗಲಿದ್ದು, ಆ ಎಲ್ಲರಿಗೂ ಸೂಕ್ತ ಪರಿಹಾರದ ಜತೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net