ಆನಗೋಡು ಗ್ರಾಮಕ್ಕೆ ಬೇಕಿದೆ ವಸತಿ ನಿಲಯ

20 myk
Published on

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ

ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆ, ಸಿದ್ದೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆ, ತರಳಬಾಳು ವಿದ್ಯಾ ಸಂಸ್ಥೆ, ಮರುಳಸಿದ್ದೇಶ್ವರ ಪ್ರೌಢಶಾಲೆ ಹಾಗೂ ಜಿ.ಚನ್ನಪ್ಪ ಪದವಿಪೂರ್ವ ಕಾಲೇಜುಗಳನ್ನು ಒಳಗೊಂಡ ಶಿಕ್ಷಣದ ತವರೂರು ಎನಿಸಿಕೊಂಡಿದೆ. ಆದರೂ ಮೂಲ ಸೌಕರ್ಯದ ಕೊರತೆಯಿಂದ ಬಡವಾಗಿದೆ.

ಆನಗೋಡು ಗ್ರಾಮದಲ್ಲಿನ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮೆಟ್ಟಿಲಾಗಿವೆ. ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮತ್ತು ಪದವಿ ಕಾಲೇಜುಗಳಲ್ಲಿ ಸರಾಸರಿ 2 ಸಾವಿರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಗ್ರಾಮದ ಜಿ.ಚನ್ನಪ್ಪ ಪದವಿಪೂರ್ವ ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ 400 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ. ಎರಡು ಪ್ರೌಢಶಾಲೆಗಳಲ್ಲಿ 650 ಕ್ಕಿಂತ ಹೆಚ್ಚು ಮತ್ತು ಪ್ರಾಥಮಿಕ ಶಾಲೆಗಳಲ್ಲಿ 850 ರಿಂದ 900 ವಿದ್ಯಾರ್ಥಿಗಳಿದ್ದು ಇವರೆಲ್ಲರೂ ಗ್ರಾಮೀಣ ಪ್ರದೇಶದವರೇ ಆಗಿದ್ದಾರೆ.

ಆನಗೋಡು ಗ್ರಾಮ ಹೋಬಳಿ ಕೇಂದ್ರ, ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 4 ಮತ್ತು ಮಂಡ್ಯ ಹಡಗಲಿ ರಾಜ್ಯ ಹೆದ್ದಾರಿ 47 ಹಾದು ಹೋಗಿದೆ. ನಿತ್ಯ ಸಾಕಷ್ಟು ವಾಹನ ಸೌಕರ್ಯಗಳಿದ್ದರೂ ಶಾಲಾ- ಕಾಲೇಜಿಗೆ ಬಂದು ಹೋಗಲು ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶಗಳಿಂದ ಅಷ್ಟೇನೂ ಸಾರಿಗೆ ಸೌಕರ್ಯಗಳಿಲ್ಲ.

ಆನಗೋಡು ಹೋಬಳಿ, ಕಂದನಕೋವಿ, ಕೆರೆಯಾಗಳಹಳ್ಳಿ, ಜಮ್ಮಾಪುರ, ತುಂಬಿಗೆರೆ, ಶಿವಪುರ, ಸಿದ್ದನೂರು, ಕೊಗ್ಗನೂರು, ಐಗೂರು, ಅಗಸನಕಟ್ಟೆ, ರುದ್ರನಕಟ್ಟಿ, ಮಂಡಲೂರು, ಕಾಟಿಹಳ್ಳಿ, ಹುಣಸಿಕಟ್ಟೆ, ಗುಡಾಳು ಸೇರಿ ನೂರಾರು ಗ್ರಾಮಗಳ ವಿದ್ಯಾರ್ಥಿಗಳು ಆನಗೋಡು ಶಾಲಾ- ಕಾಲೇಜಿಗೆ ಬರಲು ಸಮರ್ಪಕ ಸಾರಿಗೆ ಸೌಕರ್ಯ ಇಲ್ಲದೆ ಇರುವುದರಿಂದ ವಿದ್ಯಾರ್ಥಿನಿಯರಿಗೆ ವಸತಿ ಸೌಕರ್ಯ ಅನಿವಾರ್ಯವಾಗಿದೆ ಎಂದು ಶಿಕ್ಷಕರು, ಪಾಲಕರ ಅಭಿಪ್ರಾಯವಾಗಿದೆ.

ಇಲ್ಲಿನ ಶಾಲಾ- ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಶಾಸಕರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು, ಸಮಾಜ ಕಲ್ಯಾಣ ಅಥವಾ ಬಿಸಿಎಂ ಇಲಾಖೆಯಿಂದ ಕಾಲೇಜಿಗೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ (ಹಾಸ್ಟೆಲ್) ಮಂಜೂರು ಮಾಡಿದರೆ ಸಾವಿರಾರು ವಿದ್ಯಾರ್ಥಿಗಳಿಂದ ಕಾಲೇಜು ತುಂಬಿ ತುಳುಕುತ್ತದೆ. ಆದ್ದರಿಂದ ಕೂಡಲೇ ಸರ್ಕಾರ ವಸತಿ ನಿಲಯಗಳನ್ನು ಪ್ರಾರಂಭಿಸಬೇಕು ಎಂಬುದು ಪಾಲಕರ ಮನವಿಯಾಗಿದೆ.

ಕಾಲೇಜಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ವಿದ್ಯಾರ್ಥಿನಿಯರ ವಸತಿ ನಿಲಯಗಳ ಅವಶ್ಯಕತೆ ಇದೆ. ಸರ್ಕಾರ ಬಿಸಿಎಂ ಅಥವಾ ಎಸ್ಸಿ- ಎಸ್ಟಿ ವಸತಿ ನಿಲಯಗಳ ವ್ಯವಸ್ಥೆ ಕಲ್ಪಿಸಿದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. | ಕಾವೇರಿ ಗೌಡರ್, ಪ್ರಾಚಾರ್ಯು, ಜಿ.ಚನ್ನಪ್ಪ ಪದವಿಪೂರ್ವ ಕಾಲೇಜು ಆನಗೋಡು ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಅನುಕೂಲತೆಯ ಹಿತದೃಷ್ಟಿಯಿಂದ, ವಸತಿ ನಿಲಯಗಳಿಗೆ ಸಂಬಂಧಿಸಿದ ಸಚಿವರು ಹಾಗೂ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ರ್ಚಚಿಸಿ ಮಂಜೂರಾತಿಗೆ ಮನವಿ ಮಾಡಲಾಗುವುದು. | ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ನೂರಾರು ಹಳ್ಳಿಗಳ ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯಗಳ ಕೊರತೆಯಿಂದ ಆನಗೋಡು ಶಾಲಾ- ಕಾಲೇಜುಗಳಿಗೆ ಬಂದು ಹೋಗಲು ಸಾಧ್ಯವಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಿಸಿಎಂ ಅಥವಾ ಸಮಾಜ ಕಲ್ಯಾಣ ವಿದ್ಯಾರ್ಥಿನಿಯರ ಇಲಾಖೆಗಳ ವಸತಿ ನಿಲಯ ಪ್ರಾರಂಭಿಸಿದರೆ ಸಹಾಯವಾಗಲಿದೆ. | ಡಿ.ಬಿಂದು ರಾಂಪುರ, ಉಪನ್ಯಾಸಕಿ ಆನಗೋಡು ಪದವಿ ಪೂರ್ವ ಕಾಲೇಜಿಗೆ ವಿದ್ಯಾರ್ಥಿನಿಯರ ವಸತಿ ನಿಲಯ ಪ್ರಾರಂಭವಾದರೆ ಸುತ್ತಲಿನ ಹಲವಾರು ಗ್ರಾಮಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿದೆ. | ಆರ್.ಪೂಜಾ, ಹಳೆಯ ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net