ಕುಗ್ರಾಮ ಜನರ ಸಮಸ್ಯೆ ಕೇಳುವರಿಲ್ಲ

13myk1
Published on

ಕೃಷ್ಣಮೂರ್ತಿ ಪಿ. ಎಚ್. ಮಾಯಕೊಂಡ

ದಾವಣಗೆರೆ ಜಿಲ್ಲೆಯ ಮಾಯಕೊಂಡ ಪರಿಶಿಷ್ಟ ಜಾತಿಗೆ ಮೀಸಲಿರುವ ವಿಧಾನಸಭಾ ಕ್ಷೇತ್ರ ಹೆಸರಿಗಷ್ಟೇ ಸೀಮಿತವಾಗಿದೆ. ಇಲ್ಲಿಯವರೆಗೂ ಎಸ್ಸಿ- ಎಸ್ಟಿ ಜನಾಂಗದವರು ವಾಸಿಸುವ ಕುಗ್ರಾಮಗಳು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ.

ದಾವಣಗೆರೆ ತಾಲೂಕಿನ ಬಾಡ ಗ್ರಾಪಂಗೆ ಸೇರಿದ ವಿಠಲಾಪುರ ಗ್ರಾಮ ಇದಕ್ಕೊಂದು ಉದಾಹರಣೆ. ಮಾಯಕೊಂಡ ಗ್ರಾಮದಿಂದ ಆರೇಳು ಕಿಮೀ ದೂರದಲ್ಲಿರುವ ವಿಠಲಾಪುರದಲ್ಲಿ 130 ಎಸ್ಟಿ, 50 ಎಸ್ಸಿ ಮನೆಗಳಿದ್ದು, 450 ಮತದಾರರಿದ್ದಾರೆ.

ಗ್ರಾಮಕ್ಕೆ ಪ್ರತ್ಯೇಕ ಪಡಿತರ ವ್ಯವಸ್ಥೆ ಇಲ್ಲದೇ ಜನರು ಹಲವಾರು ವರ್ಷಗಳಿಂದ ಬಾಡ ಗ್ರಾಮದ ನ್ಯಾಯಬೆಲೆ ಅಂಗಡಿಯಿಂದ ಪಡಿತರ ತರಬೇಕಿತ್ತು. ಆದರೆ ಕೆಲವು ತಿಂಗಳಿಂದ ಅಂಗಡಿಯವರು ಗ್ರಾಮಕ್ಕೆ ತಂದು ವಿತರಣೆ ಮಾಡುತ್ತಿದ್ದಾರೆ.

ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ 100 ಕೆವಿ ಟ್ರಾನ್ಸ್​ಫಾರ್ಮರ್ ಪೆಟ್ಟಿಗೆ ಸ್ಕೂಲ್ ಎದುರು ಮತ್ತು ಮನೆ ಪಕ್ಕ ಇರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಬೇರೆಡೆ ವರ್ಗಾಯಿಸುವಂತೆ ಬೆಸ್ಕಾಂನವರಿಗೆ ಸಲ್ಲಿಸಿದ ಮನವಿ ಫಲ ನೀಡಿಲ್ಲ.

ಅಧಿಕಾರಿಗಳು ಮೂಲ ಸೌಲಭ್ಯ ಒದಗಿಸುವತ್ತ ಗಮನ ಹರಿಸದಿದ್ದರೆ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಬಹಿಷ್ಕರಿಸುವುದಾಗಿ ನಾಗರಿಕರು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಕ್ಕಿಲ್ಲ ಸಾರಿಗೆ ಸೌಲಭ್ಯ

ಬಸ್ ಸಂಪರ್ಕವಿಲ್ಲದೇ ಮಾಯಕೊಂಡಕ್ಕೆ ಮತ್ತು 3 ಕಿಮೀ ದೂರದ ಬಾಡ ಗ್ರಾಮಕ್ಕೆ ನಡೆದೇ ಹೋಗುವ ಪರಿಸ್ಥಿತಿ ಇದೆ. ಅಲ್ಲದೇ ವಿಠಲಾಪುರದಲ್ಲಿ ಹಿರಿಯ ಪ್ರಾಥಮಿಕ ಶಾಲೆ ನಡೆಯುತ್ತಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಾಯಕೊಂಡ ಮತ್ತು ಬಾಡ ಗ್ರಾಮಗಳಿಗೆ ಹೋಗಬೇಕಿದ್ದು, ಮಕ್ಕಳು ಶಾಲೆ ಬಿಡಲು ಕಾರಣವಾಗುತ್ತಿದೆ.

ಅಭಿವೃದ್ಧಿ ಕಾಣದ ರಸ್ತೆ ಚರಂಡಿಗಳು

ಗ್ರಾಮದ ನಾಯಕ ಮತ್ತು ಹರಿಜನ ಕಾಲನಿಯಲ್ಲಿನ ರಸ್ತೆಗಳು ಪೂರ್ಣವಾಗಿ ಕಿತ್ತು ಹೋಗಿವೆ. ಚರಂಡಿಗಳು ಹುಲ್ಲು, ಮುಳ್ಳು, ಕಸ-ಕಡ್ಡಿಗಳು ತುಂಬಿ ಮುಚ್ಚಿ ಹೋಗಿವೆ. ರಸ್ತೆ ಮತ್ತು ಚರಂಡಿಗಳು ಅಭಿವೃದ್ಧಿಗಾಗಿ ಕಾಯುತ್ತಿವೆ.

ಪಾಳು ಬಿದ್ದ ಭವನ

ಗ್ರಾಮದ ಹೊರವಲಯದ ಸರ್ಕಾರಿ ಗೋಮಾಳದಲ್ಲಿ ಕೆಲವು ವರ್ಷಗಳ ಹಿಂದೆ ನಿರ್ವಣವಾದ ವಾಲ್ಮೀಕಿ ಸಮುದಾಯ ಭವನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಆದ್ದರಿಂದ ಭವನದ ಸುತ್ತಮುತ್ತ ಇರುವ ಸರ್ಕಾರಿ ಗೋಮಾಳ ಜಾಗವನ್ನು ಗ್ರಾಪಂ ನಿವೇಶನಗಳಾಗಿ ಪರಿವರ್ತಿಸಿ ಅರ್ಹರಿಗೆ ವಿತರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಸೆ.

ಸರ್ಕಾರ ಇಲ್ಲಿಯವರೆಗೂ ಸಾರಿಗೆ, ಪಡಿತರ, ರಸ್ತೆ, ಚರಂಡಿ ಸೇರಿ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸಿಲ್ಲ. ಜನಪ್ರತಿನಿಧಿಗಳಾಗಲಿ, ಜಿಲ್ಲಾಡಳಿತವಾಗಲಿ ಈ ಬಗ್ಗೆ ಗಮನಹರಿಸಿಲ್ಲ. ಕೂಡಲೇ ಮೂಲ ಸೌಕರ್ಯಗಳನ್ನು ನೀಡದಿದ್ದರೆ ಬಾಡ- ಸಮ್ಮಸಗಿ ಮುಖ್ಯರಸ್ತೆಯನ್ನು ಬಂದ್ ಮಾಡಿ ಹೋರಾಟ ಮಾಡಲಾಗುವುದು. | ಮಹಾರುದ್ರಪ್ಪ, ಗ್ರಾಪಂ ಸದಸ್ಯ, ವಿಠಲಾಪುರ ಗ್ರಾಮ.

ಬಸ್ ಸಂಪರ್ಕವಿಲ್ಲದೇ ಶಾಲಾ- ಕಾಲೇಜುಗಳಿಗೆ ಹೋಗುವುದು ದುಸ್ತರವಾಗಿದೆ. ಹೊಲಗಳಲ್ಲಿ ಬೆಳೆ ಇದ್ದ ವೇಳೆ ಹೆಣ್ಣು ಮಕ್ಕಳಿಗೆ ನಡೆದು ಹೋಗಲು ಕಷ್ಟವಾಗುತ್ತದೆ. ಹಾಗಾಗಿ ಅನೇಕರು ಓದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಸರ್ಕಾರ ತುರ್ತಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು. | ರಕ್ಷಿತಾ, ಬಿಎ ವಿದ್ಯಾರ್ಥಿನಿ.

ವಾಲ್ಮೀಕಿ ಸಮುದಾಯ ಭವನ ಇರುವ ಸರ್ಕಾರಿ ಗೋಮಾಳ ಪ್ರದೇಶವನ್ನು ಸರ್ಕಾರ ಅಭಿವೃದ್ಧಿಗೊಳಿಸಬೇಕು ಹಾಗೂ ಈ ಜಾಗವನ್ನು ನಿವೇಶನವಾಗಿ ಪರಿವರ್ತಿಸಿ ನಿವೇಶನ ರಹಿತರಿಗೆ ವಿತರಿಸಬೇಕು. ಜತೆಗೆ ಭವನವನ್ನು ಅಭಿವೃದ್ಧಿಗೊಳಿಸಿ ಗ್ರಾಮಸ್ಥರಿಗೆ ಬಳಕೆಗೆ ನೀಡಬೇಕು. | ರಾಜಪ್ಪ, ಗ್ರಾಪಂ ಉಪಾಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net