

ಮಳವಳ್ಳಿ: ಭಕ್ತಿಯಿಂದ ಪೂಜಿಸುವ ಜನರನ್ನು ಸಕಲ ಸಂಕಷ್ಟಗಳಿಂದ ಪಾರುಮಾಡಿ ನೆಮ್ಮದಿ ಜೀವನ ನಡೆಸಲು ದಾರಿ ದೀಪವಾಗಿದ್ದಾರೆ ತಾಲೂಕಿನ ಮಾದಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಬಸವೇಶ್ವರಸ್ವಾಮಿ.
ಗ್ರಾಮದ ಬಸವೇಶ್ವರಸ್ವಾಮಿ ದೇವಸ್ಥಾನ ಸುಮಾರು ಮನ್ನೂರು ವರ್ಷದ ಇತಿಹಾಸವನ್ನು ಹೊಂದಿದೆ. ಅಂತೆಯೇ, ದೇವರ ಪ್ರತಿಷ್ಠಾಪನೆಗೂ ವಿಶೇಷ ಕಾರಣವಿದೆ. ಆ ನಂತರ ಗ್ರಾಮಕ್ಕೆ ಶಕ್ತಿದೇವರಾಗಿ ಬದಲಾಗಿದ್ದು ಇತಿಹಾಸ.
ಕಂಗಲಾಗಿದ್ದ ಗ್ರಾಮಸ್ಥರು: ಸುಮಾರು ವರ್ಷದ ಹಿಂದೆ ಮಾದಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿನ ಜನ- ಜಾನುವಾರುಗಳು ಹಲವು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಅಕಾಲಿಕ ಮರಣ ಸಂಭವಿಸುತ್ತಿತ್ತು. ಇದರಿಂದ ಕಂಗಾಲಾಗಿದ್ದ ಜನರು ದೈವಸ್ವರೂಪಿಯಾಗಿ ನಂಬಿಕೆ ಇಟ್ಟಿದ್ದ ಕಾಮಧೇನು ಸ್ವರೂಪದ ಬಸವ ವಿಗ್ರಹವನ್ನು ಗ್ರಾಮದ ಹೃದಯ ಭಾಗದ ಅರಳಿ ಮರವೊಂದರ ಕೆಳಗೆ ಪ್ರತಿಷ್ಠಾಪಿಸಿ ಸಂಕಷ್ಟದಿಂದ ಪಾರು ಮಾಡುವಂತೆ ಪೂಜಿಸಿದ್ದರು. ಇದರ ಫಲವಾಗಿ ಕೆಲ ದಿನದಲ್ಲಿಯೇ ಜನ, ಜಾನುವಾರು ಕಾಯಿಲೆಯಿಂದ ಗುಣಮುಖರಾದರು ಎನ್ನುತ್ತಾರೆ ಇಲ್ಲಿನ ಹಿರಿಯರು.
ಅಲ್ಲಿಂದ ಗ್ರಾಮದ ಬಸವೇಶ್ವರಸ್ವಾಮಿ ಶಕ್ತಿದೇವರಾಗಿದೆ. ಇಂದಿಗೂ ಮಾದಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಗಳ ಜನರು ತಮ್ಮ ಕುಟುಂಬದಲ್ಲಿ ನಡೆಯುವ ಶುಭಕಾರ್ಯಗಳು ಮತ್ತು ವ್ಯಾಪಾರ, ಉದ್ಯಮ ಪ್ರಾರಂಭಿಸುವ ಮುನ್ನ ಮೊದಲ ಪೂಜೆಯನ್ನು ದೇವರಿಗೆ ಸಲ್ಲಿಸುತ್ತಾರೆ. ರೈತರು ತಾವು ಬೆಳೆದ ದವಸ, ಧಾನ್ಯಗಳನ್ನು ತಂದು ಬಸವೇಶ್ವರನಿಗೆ ಪೂಜೆ ಸಲ್ಲಿಸುವುದು ವಿಶೇಷ.
ಇನ್ನು ಸಾಂಕ್ರಾಮಿಕ ರೋಗ ಮತ್ತು ಕೆಟ್ಟ ಶಕ್ತಿಗಳು ಗ್ರಾಮಕ್ಕೆ ಬರದಂತೆ ಬಸವೇಶ್ವರಸ್ವಾಮಿಯ ಜತೆಗೆ ಮಾರಮ್ಮ, ಕಾಲಭೈರವೇಶ್ವರ, ಲಕ್ಷ್ಮಮ್ಮ, ಕ್ಯಾತಮ್ಮ ದೇವರು ಕಾಯುತ್ತಿದ್ದಾರೆನ್ನುವ ನಂಬಿಕೆಯಲ್ಲಿ ಜನರು ಪೂಜೆ ಸಲ್ಲಿಸುತ್ತಾರೆ. ಅದರಲ್ಲಿಯೂ ಪ್ರತಿವರ್ಷ ಗ್ರಾಮದಲ್ಲಿ ಬಸವೇಶ್ವರಸ್ವಾಮಿ ಹಾಗೂ ಮಾರಮ್ಮನ ಕೊಂಡೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇಲ್ಲಿ ರಾಮನ ಭಕ್ತರೂ ಇರುವುದರಿಂದ ರಾಮಮಂದಿರವೂ ಇದೆ.
ದೇವಸ್ಥಾನಗಳ ಜೀರ್ಣೋದ್ಧಾರ: ಮರದ ಕೆಳಗೆ ಪೂಜಿಸುತ್ತಿದ್ದ ಬಸವೇಶ್ವರನಿಗೆ ಶತಮಾನದ ಹಿಂದೆ ಪುಟ್ಟ ಗುಡಿಯನ್ನು ಕಟ್ಟಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಮುಜರಾಯಿ ಇಲಾಖೆಗೊಳಪಟ್ಟು 1985ರಲ್ಲಿ ಈ ಗುಡಿಯನ್ನು ನವಿಕರಿಸಲಾಗಿತ್ತು. ಇತ್ತೀಚೆಗೆ ಬಸವೇಶ್ವರ ದೇವಸ್ಥಾನ ಸೇರಿದಂತೆ ಸುತ್ತಲೂ ಇದ್ದ ಮಾರಮ್ಮ, ಕಾಲಭೈರವೇಶ್ವರ ದೇವಸ್ಥಾನ ಶಿಥಿಲಾವಸ್ಥೆಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲ ಒಗ್ಗೂಡಿ ದೇಣಿಗೆ ಸಂಗ್ರಹಿಸಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಮೂರು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ. 2019ರ ನವೆಂಬರ್‌ನಲ್ಲಿ ಆದಿಚುಂಚನಗಿರಿ ಮತ್ತು ಮಹದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀಗಳಿಂದ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಲಾಯಿತು.
ಮಾದಹಳ್ಳಿ ಗ್ರಾಮದಲ್ಲಿ ಒಕ್ಕಲಿಗ ಸಮುದಾಯದವರ ಸಂಖ್ಯೆ ಹೆಚ್ಚಿದೆ. ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳ ಪುಟ್ಟ ಗ್ರಾಮವಾಗಿದ್ದು, ಇಲ್ಲಿನ ಪೂರ್ವಜರು ತಲೆಮಾರುಗಳಿಂದ ಬಸವೇಶ್ವರಸ್ವಾಮಿ, ವೆಂಕಟೇಶ್ವರ, ನಂಜುಂಡೇಶ್ವರ ಸೇರಿದಂತೆ ವಿವಿಧ ದೇವರುಗಳನ್ನು ಒಕ್ಕಲತನದ ಮನೆದೇವರುಗಳನ್ನಾಗಿ ಪೂಜಿಸುತ್ತಾರೆ. ಆದರೆ, ದೂರದೂರಿಗೆ ತೆರಳಬೇಕಾದರೆ ಮೊದಲು ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನಲ್ಲಿ ಪೂಜೆ ಸಲ್ಲಿಸಿ ಹೋಗುವುದನ್ನು ಭಕ್ತಿಯಿಂದ ಪಾಲಿಸಿಕೊಂಡು ಬರಲಾಗುತ್ತಿದೆ.
ಮಾರ್ಗ: ಮಳವಳ್ಳಿ ಪಟ್ಟಣದಿಂದ ಮಂಡ್ಯಕ್ಕೆ ತೆರಳುವ ಸುಲ್ತಾನ್ ರಸ್ತೆ ಮಾರ್ಗವಾಗಿ 7 ಕಿ.ಮೀ ಸಾಗಿದರೆ ಮಾದಹಳ್ಳಿ ಗ್ರಾಮ ಸಿಗಲಿದೆ.
ನಮ್ಮ ಮನೆದೇವರು ಬೇರೆಯಾದರೂ, ಪೂರ್ವಜರ ಕಾಲದಿಂದಲೂ ಕುಟುಂಬದಲ್ಲಿ ಯಾವುದೇ ಶುಭ ಕಾರ್ಯ ನಡೆಸಬೇಕಾದರೂ ಮೊದಲ ಪೂಜೆ ನಮ್ಮೂರಲ್ಲಿರುವ ಬಸವೇಶ್ವರನಿಗೆ ಸಲ್ಲಿಸಲಾಗುತ್ತದೆ. ಬಸವೇಶ್ವರನಿಗೆ ಹರಕೆ ಹೊತ್ತು ಮಾಡಿದ ಬಹಳಷ್ಟು ಉತ್ತಮ ಕೆಲಸಗಳಲ್ಲಿ ನಾನು ಯಶಸ್ಸು ಕಂಡಿದ್ದೇನೆ.
ವೆಂಕಟೇಶ್, ಗ್ರಾಮಸ್ಥ, ಮಾದಹಳ್ಳಿ
ಬಸವೇಶ್ವರಸ್ವಾಮಿಗೆ ಅಸಂಖ್ಯಾತ ಭಕ್ತ ಸಮೂಹವಿದೆ. ಭಕ್ತರು ಮಾಡುವ ಎಲ್ಲ ಶುಭ ಕಾರ್ಯಗಳಿಗೆ ಮೊದಲು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಈ ದೇವರನ್ನು ನಂಬಿದ ಭಕ್ತರು ಉತ್ತಮ ಹುದ್ದೆ ಹಾಗೂ ಉದ್ಯಮಿಗಳಾಗಿ ಯಶಸ್ಸು ಕಂಡಿದ್ದಾರೆ. ಗ್ರಾಮಸ್ಥರು ಮತ್ತು ಭಕ್ತರು 80 ಲಕ್ಷದಷ್ಟು ದೇಣಿಗೆ ಸಂಗ್ರಹಿಸಿ ದೇವಸ್ಥಾನ ನವೀಕರಿಸಿದ್ದಾರೆ. ನಾಗೇಂದ್ರ, ಬಸವೇಶ್ವರ ದೇವಸ್ಥಾನದ ಅರ್ಚಕ